ವಿಧಾನಸಭೆ ಅರ್ಜಿ ಸಮಿತಿ ಸದಸ್ಯರ ಭೇಟಿ ಇಂದು
ಮೈಸೂರು: ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ನೇತೃತ್ವದ ತಂಡ ಅ.11ರಂದು ಮೈಸೂರಿಗೆ ಭೇಟಿ ನೀಡಲಿದೆ. ಸಮಿತಿ ಸದಸ್ಯರಾದ ಎ. ಮಂಜು, ಆರ್.ವಿ. ದೇವರಾಜ್, ಪ್ರತಾಪಗೌಡ ಪಾಟೀಲ್, ಈ. ತುಕಾರಾಮ್, ವಿನಯಕುಲಕರ್ಣಿ, ವಾಸು, ಬಿ.ಎಂ. ನಾಗರಾಜ್, ಯಶವಂತರಾಯಗೌಡ, ವಿ. ಪಾಟೀಲ್, ಎಸ್.ಆರ್. ಶ್ರೀನಿವಾಸ್, ಎಸ್. ಚಿಕ್ಕಮಾದು, ಆರ್. ಅಖಂಡ ಶ್ರೀನಿವಾಸಮೂರ್ತಿ, ಎಸ್. ಸುರೇಶ್ಕುಮಾರ್, ಎಂ.ಪಿ. ಅಪ್ಪಚ್ಚು(ರಂಜನ್) ಬಾಲಚಂದ್ರ ಜಾರಕಿಹೊಳಿ ಹಾಗೂ ವರ್ತೂರು ಪ್ರಕಾಶ್ ಅವರು ಭೇಟಿ ನೀಡುವರು. ಅಂದು ಬೆಳಗ್ಗೆ 7ಕ್ಕೆ ಕುಕ್ಕರಹಳ್ಳಿ ಸ್ಥಳ ಪರಿಶೀಲನೆ, ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ, ಸಂಜೆ 5ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹಿಂದಿರುಗುವರು.
ಸ್ಪಾರ್ಕ್ ಬ್ಯೂಟಿ ವರ್ಲ್ಡ್ ಆರಂಭ
ಮೈಸೂರು: ಸ್ಪಾರ್ಕ್ ಬ್ಯೂಟಿ ವರ್ಲ್ಡ್ ಅ.13ರಂದು ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿ ತನ್ನ ಶಾಖೆ ಆರಂಭಿಸುತ್ತಿದೆ. ಕುವೆಂಪುನಗರದಲ್ಲಿನ ಅಶೋಕಪುರಂ ಪೊಲೀಸ್ ಠಾಣೆ ಸಮೀಪ ತನ್ನ ಶಾಖೆ ತೆರೆಯಲಿದೆ. ಪತ್ರಕರ್ತ ವಿಕ್ರಮ್ ಮುತ್ತಣ್ಣ ಈ ಶಾಖೆ ಉದ್ಘಾಟಿಸುವರು. ಮಹಿಳೆಯರಿಗೆ ವಿಶ್ವ ದರ್ಜೆಯ ಸೌಂದರ್ಯ ಸೇವೆಗಳು ದೊರಕಲಿವೆ. ಮಹಿಳೆಯರಿಗೆ ಸೋನಾ ಬಾತ್, ನೈಲ್ ಎಕ್ಸೆಟೆಂಷನ್, ಬಾಡಿ ಪಾಲಿಷಿಂಗ್, ಪುರುಷರಿಗೆ ಜಕೂಜಿ ಬಾತ್, ಸೋನಾ ಬಾತ್, ಬಾಡಿ ಪಾಲಿಷಿಂಗ್, ಟ್ಯಾಟೂ, ಆಯುರ್ವೇದ ಫೇಷಿಯಲ್, ಮಸಾಜ್, ಹೇರ್ ಕಟ್, ಹೇರ್ ಕಲರ್ ಮಾಡಲಾಗುತ್ತದೆ ಎಂದು ಮೀನಾಕ್ಷಿ ವಿಜಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ದುರ್ಗಾಷ್ಟಮಿ ಪೂಜೆ
ಮೈಸೂರು: ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆ ರಸ್ತೆಯಲ್ಲಿರುವ ಎಲ್ಲಮ್ಮಾಂಬ ಚಂದ್ರಗುಪ್ತಾಂಬ ದೇವಸ್ಥಾನದಲ್ಲಿ ಅ.12ರ ಬೆಳಗ್ಗೆ 11.30ಕ್ಕೆ 67ನೇ ದುರ್ಗಾಷ್ಟಮಿ ಪೂಜಾ ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ವಸ್ತ್ರಧಾರಣೆ, ಗಣಪತಿ, ಪರಶುರಾಮ ದೇವರಿಗೆ ಪಂಚಾಮೃತ ಅಭಿಷೇಕ, ನವಗ್ರಹಗಳಿಗೆ ನವಧಾನ್ಯಗಳ ಅರ್ಪಣೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.