ಕುಕ್ಕರಹಳ್ಳಿ ಕೆರೆಗೆ ವಿಧಾನಸಭೆ ಅರ್ಜಿ ಸಮಿತಿ ಸದಸ್ಯರ ಭೇಟಿ
ಕ.ಪ್ರ.ವಾರ್ತೆ ಮೈಸೂರು ಅ. 11
ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ನೇತೃತ್ವದ ತಂಡ ಶುಕ್ರವಾರ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ, ಕೆರೆಯ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿತು.
ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 2 ಕೋಟಿ ಅನುದಾನ ನೀಡಿದೆ. ಸರ್ಕಾರದ ಕೆರೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 1 ಕೋಟಿ ಅನುದಾನ ಮಂಜೂರು ಮಾಡಿದೆ. ಒಟ್ಟಾರೆ 3 ಕೋಟಿ ಕಾಮಗಾರಿ ಕೈಗೊಳ್ಳಲು ಅಂದಾಜು ಮಾಡಲಾಗಿದೆ ಎಂದು ವಿವಿಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿತು.
ಪ್ರವಾಸೋದ್ಯಮ ಇಲಾಖೆ ನೀಡಿದ 2 ಕೋಟಿ ಪೈಕಿ 104 ಕೋಟಿ ವೆಚ್ಚದಲ್ಲಿ ವಾಹನ ನಿಲ್ದಾಣ, ಮಕ್ಕಳಿಗಾಗಿ ಉದ್ಯಾನವನ, ಯೋಗ ವೇದಿಕೆ, ಚೈನ್ಲಿಂಗ್ ಬೇಲಿ, ಕಮಾನು ದ್ವಾರ, ನಡಿಗೆ ದಾರಿ, ಕೆರೆ ಏರೆ ಅಭಿವೃದ್ಧಿ, ಶೌಚಾಲಯ ಮತ್ತು ಸಂರಕ್ಷಕರ ಕೊಠಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಕೆರೆಯ ಉತ್ತರ ಭಾಗದಲ್ಲಿ ಸಂರಕ್ಷಿತ ವಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕಾಮಗಾರಿ ಕೈಗೊಳ್ಳಲು ಪಡುವಾರಹಳ್ಳಿ ಆಸುಪಾಸಿನ ಬಡಾವಣೆಯಿಂದ ಕೆರೆಗೆ ಹರಿದು ಬರುತ್ತಿರುವ ಮಲಿನ ನೀರನ್ನು ತಡೆಗಟ್ಟಿ ಪಾಲಿಕೆಯ ಮುಖ್ಯ ಒಳಚರಂಡಿ ಕೊಳಾಯಿಗೆ ಸಂಪರ್ಕ ಒದಗಿಸುವ ಮೂಲಕ ಕೆರೆಗೆ ಮಲೀನ ನೀರು ಬರುವುದನ್ನು ತಡೆಗಟ್ಟಬೇಕಿದೆ. ಈ ಸಂಬಂಧ ಪಾಲಿಕೆಯೊಂದಿಗೆ ಸೇರಿ ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿಕೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಅನುಕೂಲವಾಗುವಂತೆ ವಿವಿ ವತಿಯಿಂದ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಸಲಹಾ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದರು. ಪಾಲಿಕೆಯಿಂದ ಒಳಚರಂಡಿ ಕೊಳಾಯಿ ಜೋಡಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಬೋಟಿಂಗ್ ಸೌಲಭ್ಯ. ವದ್ದೆಯಾದ ಉದ್ಯಾನವನ ನಿರ್ಮಾಣ, ದ್ವೀಪ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕ ವಾಸು, ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಎಂಡಿಎ ಆಯುಕ್ತ ಎಸ್. ಪಾಲಯ್ಯ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇತರರು ಇದ್ದರು.