ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ
ಪಿರಿಯಾಪಟ್ಟಣ/ನಂಜನಗೂಡು: ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಪಿರಿಯಾಪಟ್ಟಣ ತಾಲೂಕಿನ ಹಿಟ್ನೇಹೆಬ್ಬಾಗಿಲು ಹಾಗೂ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಪಂ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಗೌರವ ಸಂಭಾವನೆಯ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಗ್ರಾಪಂ ಅಥವಾ ಸಂಬಂಧಿಸಿದ ತಾಲೂಕಿನ ಶಾಖೆ ಗ್ರಂಥಾಲಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಅ.28ರೊಳಗಾಗಿ ಸಂಬಂಧಿಸಿದ ಗ್ರಾಪಂ ಕಚೇರಿ ಮುಖಾಂತರ ಸಲ್ಲಿಸುವುದು. ಆಯ್ಕೆಯಾದ ಮೇಲ್ವಿಚಾರಕರಿಗೆ ಮಾಸಿಕ 5,500 ಗೌರವ ಸಂಭಾವನೆ ನೀಡಲಾಗುವುದು.
ಮುಂದುವರಿಕೆ ಕಲಿಕಾ ಕೇಂದ್ರಗಳಲ್ಲಿ ಪ್ರೇರಕ, ಸಹ ಪ್ರೇರಕರಾಗಿ ಕಾರ್ಯನಿರ್ವಹಿಸಿರುವವರಿಗೆ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ವಿವರಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು, ದೂ. 2425875ನ್ನು ಸಂಪರ್ಕಿಸಬಹುದು.
ಸುತ್ತೂರು ಮಠ ಶಮೀ ಪೂಜೆ
ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಶಾಖಾಮಠದಲ್ಲಿ ಅ.14ರ ಬೆಳಗ್ಗೆ ವಿಜಯದಶಮಿಯಂದು ಶಮೀಪೂಜೆ ಹಾಗೂ ಚಾಮುಂಡೇಶ್ವರಿ ಪಾದದ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿದೆ ಎಂದು ಸುತ್ತೂರು ಮಠದ ಆಡಳಿತಾಧಿಕಾರಿ ಕೆ.ಎಂ. ನಾಗಣ್ಣಚಾರ್ ಹೇಳಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಸಾಹಿತಿಗಳು, ಕಲಾವಿದರು, ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಆಗಮಿಸುವಂತೆ ಕೋರಿದ್ದಾರೆ.