ಪ್ರತಿ ಜಿಲ್ಲೆಯಲ್ಲೂ 100 ಮಂದಿಗೆ ಉದ್ಯೋಗ: ಮುನಿಯಪ್ಪ
ಮೈಸೂರು: ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ (ಪಿಎಂಇಜಿಪಿ) ಪ್ರತಿ ವರ್ಷ ಪ್ರತಿ ಜಿಲ್ಲೆಗಳಲ್ಲೂ ನೂರು ಮಂದಿ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಮಂತ್ರಾಲಯ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಂಯುಕ್ತಾಶ್ರಯದಲ್ಲಿ ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸ್ಥಾಪಿಸಿರುವ ಪ್ರಧಾನಮಂತ್ರಿಗಳ ವಲಯ ಮಟ್ಟದ ಉದ್ಯೋಗವರ್ಧನೆ ಕಾರ್ಯಕ್ರಮದ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದರು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಗೆ 2,500 ಕೋಟಿ ಮೀಸಲಿಡಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ನೂರು ಮಂದಿಯನ್ನು ಮೂರು ತಿಂಗಳೊಳಗೆ ಆಯ್ಕೆ ಮಾಡಿ ತರಬೇತಿ ನೀಡಿ, ಅವರಿಗೆ ಸಾಲ ನೀಡುವ ಮೂಲಕ ಉದ್ಯೋಗ ಕಂಡುಕೊಳ್ಳುವಂತೆ ಮಾಡಲಾಗುವುದು. ತರಬೇತಿ ಕೇಂದ್ರವನ್ನು ಸದ್ಯಕ್ಕೆ ಬೆಂಗಳೂರಿನ ದೇವನಹಳ್ಳಿಯಲ್ಲಿ ಸ್ಥಾಪಿಸಲಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಸ್ಥಾಪಿಸಬೇಕೆಂಬ ಉದ್ದೇಶವಿದೆ ಎಂದರು. 18 ರಿಂದ 30 ವರ್ಷದೊಳಗಿನ ಯುವಜನತೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಎಲ್ಲರೂ ಇರುವ ಅವಕಾಶವನ್ನು ಬಳಸಿಕೊಂಡು ಮುಂದೆ ಬರಬೇಕು. ಈ ಸೌಲಭ್ಯ ಪಡೆಯಲು 8ನೇ ತರಗತಿ ಓದಿದರೆ ಸಾಕು. ಸ್ವತಂತ್ರವಾಗಿ ಬದುಕಬಹುದು. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಹೆಚ್ಚಿನ ಸಹಕಾರ ದೊರಕಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ತರಬೇತಿ ಕೇಂದ್ರ ತೆರೆಯಲಾಗುವುದು. ಇದರ ಮೂಲಕ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿ ಭಾರತದಿಂದ ರಫ್ತುಮಾಡುವ ಪ್ರಕ್ರಿಯೆಗೆ ಮತ್ತಷ್ಟು ಬಲ ನೀಡಲಾಗುವುದು. ಈಗಾಗಲೇ ಶೇ.40 ರಷ್ಟು ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದರು.