ಮಾನವ ಕೇಂದ್ರಿತ ಚಿಂತನೆಯಿಂದ ಸಂಸ್ಕೃತಿ ನಾಶ
ಮೈಸೂರು: ಇಂದು ಮಾನವ ಕೇಂದ್ರಿತ ಚಿಂತನೆಯಿಂದ ಸಂಸ್ಕೃತಿ ನಾಶ ಎಂದು ಖ್ಯಾತ ನಿರ್ಮಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ ಹೇಳಿದರು.
ದಸರಾ ಕವಿಗೋಷ್ಠಿ ಉಪಸಮಿತಿಯು ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿರುವ ಕವಿ ಸಮ್ಮೇಳನದ ಯುವ ಕವಿಗೋಷ್ಠಿಯಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಗತಿಯ ಹೆಸರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿನಾಶ ವಾತಾವರಣ ಸೃಷ್ಟಿಸಿವೆ. ಬೆಂಗಳೂರಿನಲ್ಲಿ 1700 ಕೆರೆಗಳಿದ್ದವು, ಅವುಗಳಲ್ಲಿ ಅನೇಕ ಕೆರೆಗಳು ಮಾಯವಾಗಿವೆ. ಗುಬ್ಬಚ್ಚಿಗಳು ಕಾಣದಾಗಿವೆ. ಆದ್ದರಿಂದ ನಮ್ಮ ದೃಷ್ಟಿಕೋನ ವಿಸ್ತಾರವಾಗಬೇಕು. ಇಂತಹ ಮಾನವ ಕೇಂದ್ರಿತ ನೆಲೆಯನ್ನು ಇಟ್ಟುಕೊಂಡಿರುವ ಕಾರಣ, ಬದುಕಿನ ಸಂಸ್ಕೃತಿ ನಾಶವಾಗುತ್ತಿದೆ. ಆದ್ದರಿಂದ ಪ್ರಗತಿಯ ಪರಿಕಲ್ಪನೆ ಬದಲಾಗಬೇಕು ಎಂದರು.
ಲೋಕೋಪಯೋಗಿ ಇಲಾಖೆಯಿಂದ ದೇಶ ಕಟ್ಟುತ್ತೇವೆ ಎಂಬುದು ತಪ್ಪು ಭಾವನೆ. ಅಪಾಯದ ಅಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಆರೋಗ್ಯಕರ ಸಮಾಜ ನಿರ್ಮಾಣವಾಗೇಬೇಕು. ಸಂಸ್ಕೃತಿ ಹಾಗೂ ಪರಂಪರೆಗೆ ಕವಿಗಳು ವಾರಾಸುದಾರರಾಗಬೇಕು. ಜನರಿಗೆ ಅದರ ಅರಿವು ಮೂಡಿಸಬೇಕು. ಪಂಪ, ರನ್ನ, ಜನ್ನ, ಕುವೆಂಪು, ಬೇಂದ್ರೆ ಪರಂಪರೆಯನ್ನು ಅನುಸರಿಸಬೇಕು ಎಂದರು.
ಆಕ್ರಮಣ: ರಾಜಕಾರಣ ಹಾಗೂ ಧರ್ಮ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಇಂದು ಜನಮಾನಸದ ಮೇಲೆ ಆಕ್ರಮ ನಡೆದಿದ್ದು, ರಾಜಕೀಯ ಮತ್ತು ಧರ್ಮ ಭ್ರಷ್ಟವಾಗಿ ಸಮಾಜವನ್ನು ರಕ್ಷಿಸುವ ಶಕ್ತಿ ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯಗಳು ಕಾವ್ಯದ ಮೂಲಕ ಸೃಜನಶೀಲರಾಗಿ, ಸಮಾಜದ ಚಲನಶೀಲತೆಗೆ ಮಹತ್ವ ನೀಡಬೇಕು ಎಂದು ಅವರು ತಿಳಿಸಿದರು.
ಹಬ್ಬಗಳು ಕೇವಲ ಆಚರಣೆಯಾಗದೆ ಸಂಸ್ಕೃತಿಗೆ ರೂಪಾಂತರವಾಗಬೇಕು. ಸಂಸ್ಕೃತಿ ಚಿಂತಕರ ಪಡೆ ಹೆಚ್ಚಾಗಬೇಕು. ದೇಶೀಯ ಪರಂಪರೆಗೆ ಮಹತ್ವ ನೀಡಬೇಕು ಹಾಗೂ ಪರಸ್ವರ ಒಬ್ಬರನ್ನೊಬ್ಬರು ಪ್ರೀತಿಸಬೇಕು ಹಾಗೂ ಸಹಬಾಳ್ವೆಗೆ ಹೃದಯ ತೆರೆದುಕೊಳ್ಳಬೇಕು ಎಂದು ಅವರು ಆಶಿಸಿದರು.
ಕವಿ ಲಕ್ಷ್ಮೀಪತಿ ಕೋಲಾರ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಪ್ರೊ. ಕೆ.ಎಸ್. ಭಗವಾನ್ ಇದ್ದರು. ಉಪಾಧ್ಯಕ್ಷ ಮಾನಸ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರೊ. ಸಿ. ನಾಗಣ್ಣ, ಉಪಾಧ್ಯಕ್ಷ ಡಾ. ಮುಳ್ಳೂರು ನಂಜುಂಡಸ್ವಾಮಿ ಇದ್ದರು. ನಂತರ ಯುವ ಕವಿಗೋಷ್ಠಿ ನಡೆಯಿತು.
ರಾಜಕಾರಣಗಳ ಭಾವಚಿತ್ರ: ಆಕ್ಷೇಪ: ಕವಿ ಸಮ್ಮೇಳನದಲ್ಲಿ ರಾಜಕಾರಣಿಗಳ ಭಾವಚಿತ್ರ ಹಾಕಿರುವುದು ಸರಿಯಲ್ಲ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಆಕ್ಷೇಪಿಸಿದರು. ಯುವಗೋಷ್ಠಿಯಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇದು ಕವಿ ಸಮ್ಮೇಳನವಾಗಿದ್ದು ವೇದಿಕೆಯ ಫಲಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರ ಅಳವಡಿಸುವ ಅಗತ್ಯವಿತ್ತೆ ಎಂದು ಅವರು ಪ್ರಶ್ನಿಸಿದರು.
ಈ ರಾಜಕಾರಣಗಳ ಬಗ್ಗೆ ನನಗೆ ಗೌರವವಿದೆ. ಆದರೆ ಇಂತಹ ಸಂದರ್ಭದಲ್ಲಿ ಭಾವಚಿತ್ರ ಹಾಕುವ ಔಚಿತ್ಯವಿತ್ತೆ. ಕುವೆಂಪು, ಬೇಂದ್ರೆ ಈ ಯಾವುದೇ ಕವಿಗಳ ಭಾವಚಿತ್ರ ಹಾಕದಿರುವುದನ್ನು ನೋಡಿದರೆ ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದು ತಿಳಿಯಲಿದೆ. ಯಾರನ್ನೋ ಓಲೈಸುವ ಸಲುವಾಗಿ ಇಂತಹ ನಡೆವಳಿಕೆಗಳು ಸಮಂಜವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಯಸ್ಸಲ್ಲ, ಉತ್ಸಾಹ ಮಾನದಂಡ!: ಪ್ರೊ. ಭಗವಾನ್
ಯುವ ಕವಿಗೋಷ್ಠಿಗೆ ಆಯ್ಕೆ ಮಾಡುವಾಗ ವಯಸ್ಸು ಮುಖ್ಯವಲ್ಲ, ಅವರ ಉತ್ಸಾಹ ಮುಖ್ಯ ಎಂದು ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷ ಪ್ರೊ. ಕೆ.ಎಸ್. ಭಗವಾನ್ ಹೇಳಿದರು. ಯುವ ಕವಿಗೋಷ್ಠಿಯಲ್ಲಿ ಹಿರಿಯ ನಾಗರಿಕರು ಸಹ ಭಾಗವಹಿಸಿ ಕವನ ವಾಚಿಸಿದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಈ ರೀತಿ ಉತ್ತರಿಸಿದ ಅವರು, ಯಾರು ಮನಸ್ಸು ಹಾಗೂ ಅಲೋಚನೆಯಲ್ಲಿ ಉತ್ಸಾಹ ತೋರುತ್ತಾರೋ ಅವರು ಯುವಕರು. ಅಂಥವರನ್ನು ಆಯ್ಕೆ ಮಾಡಲಾಗಿದೆ ಎಂದರು. ಸರ್ಕಾರದ ನಿಯಮದಲ್ಲಿ ಯುವಕರು ಎಂಬುದಕ್ಕೆ ವಯೋವುತಿಯ ಮಾನದಂಡ ಇರಬಹುದು. ಆದರೆ ಸಾಹಿತ್ಯ ಕಾನೂನು ಬದ್ಧ ಅಲ್ಲ. ಇಲ್ಲಿ ಭಾವನಾತ್ಮಕ ಹಾಗೂ ಮಾನಸಿಕ ವ್ಯಕ್ತಿತ್ವ ಮುಖ್ಯ ಹಾಗೂ ಒಂದು ಕವನ ಸಂಕಲನ ಹೊರತಂದಿರುವವರನ್ನು ಈ ಗೋಷ್ಠಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.