ಮೇವು ತಿಂದವನಿಗೆ ಕೊಟ್ಟಿಗೆ ಸಿಕ್ಕಿತ್ತಲ್ಲ...!
ಕ.ಪ್ರ.ವಾರ್ತೆ ಮೈಸೂರು ಅ. 11
ದಸರಾ ಕವಿ ಸಮ್ಮೇಳನದ ಅಂಗವಾಗಿ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ ಶುಕ್ರವಾರ ವ್ಯವಸ್ಥೆಯ ವಿವಿಧ ಮುಖಗಳನ್ನು ಕವಿ ಮನಸ್ಸುಗಳು ಅನಾವರಣಗೊಳಿಸಿದರು.
ಕವಿಗೋಷ್ಠಿ ಉಪಸಮಿತಿಯು ಏರ್ಪಡಿಸಿದ್ದ ಎರಡನೇ ದಿನದ ಈ ಗೋಷ್ಠಿಯಲ್ಲಿ ಬೆಂಗಳೂರಿನ ಅಮೃತಿ ರಾಜೇಶ್ ಅವರು 'ಹುತ್ತಕ್ಕೆ ಗೆದ್ದಿಲು ಹತ್ತಿದೆ' ಎಂಬ ಕವಿತೆ ವಾಚಿಸಿ, ಬಡಾವಣೆಗಳ ನಿರ್ಮಾಣಕ್ಕಾಗಿ ಹಸಿರು ಭೂಮಿ ನಾಶವಾಗುತ್ತಿರುವುದು, ಪ್ರಾಣಿ- ಪಕ್ಷಿಗಳು ಕ್ಷೀಣಿಸುತ್ತಿರುವುದು, ಕಾಂಕ್ರೀಟ್ ಕಟ್ಟಡಗಳು ಹೆಚ್ಚಾಗುತ್ತಿರುವುದನ್ನು ಬಿಂಬಿಸಿದರಲ್ಲದೆ, ಗೋವುಗಳ ಮೇವು ತಿಂದು ಜೈಲುಪಾಲಾಗಿರುವ ಹಗರಣ ಅನಾವರಣಗೊಳಿಸಿದರು.
ಮಂಡ್ಯದ ಕೊತ್ತತ್ತಿ ಎಂ. ರಾಜು ಅವರು 'ನೀವಿಲ್ಲದ ಭಾರತ ಬಾಪೂಜಿ ದಿಕ್ಕಿಲ್ಲದ ಹಡಗು' ಎಂಬ ಕವಿತೆ ವಾಚಿಸಿ, ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು, ಸತ್ಯವು ಸಾವು ಬದುಕಿನ ನಡುವೆ ತೊಳಲಾಡುತ್ತಿರುವುದು, ಹಿಂದು ಮತ್ತು ಮುಸ್ಲಿಂ ಜನರು ಹಾವು ಮುಂಗುಸಿಯಂತಾಗುರುವುದು ಈ ಪರಿ ಬಿಡಿಸಿಟ್ಟರಲ್ಲದೆ, ಇದನ್ನೆಲ್ಲಾ ಹೋಗಲಾಡಿಸಲು, ಸುಭದ್ರ ರಾಷ್ಟ್ರ ನಿರ್ಮಿಸಲು 'ಮತ್ತೊಮ್ಮೆ ಹುಟ್ಟಿ ಬಾ ಗಾಂಧೀ' ಎಂದರು.
ಹಿರಿಜೀವಗಳ ಚಿತ್ರ: ಮೈಸೂರು ಗುಬ್ಬಿಗೂಡು ರಮೇಶ್ ಅವರು 'ಸೈಬರ್ ಕೆಫೆ' ಎಂಬ ಕವನದ ಮೂಲಕ, ಹೊತ್ತಿಲ್ಲದ ಹೊತ್ತಿನಲ್ಲಿ ಕೋಳಿ ಕೂಗುತ್ತದೆ, ಅಜ್ಜಿ ತಲೆಗೆ ಬಂತು ಹೊಸ ಟೋಪಿ, ಅಜ್ಜನ ಕನ್ನಡಕಕ್ಕೆ ಹೊಸ ಫ್ರೇಮು, ವಿದೇಶಕ್ಕೆ ಹೋದ ಮೊಮ್ಮಗ ಇತ್ತ ಬರಲೇ ಇಲ್ಲ ಎಂದು ಹೇಳುವ ಮೂಲಕ ಇಂದಿನ ಯುವಜನತೆಯ ವಿದೇಶಿ ವ್ಯಾಮೋಹ ಹಾಗೂ ಭಾರತದಲ್ಲಿ ಪರಿತಪಿಸುವ ಹಿರಿಜೀವಗಳ ಚಿತ್ರವನ್ನು ಬಿಡಿಸಿಟ್ಟರು.
'ನಾನು ಮಾತ್ರ ಯುವಕ' ಎಂಬ ಶೀರ್ಷಿಕೆಯಲ್ಲಿ ಕವಿತೆ ವಾಚಿಸಿದ ಹಾಸನದ ಚಾಂದ್ ಪಾಷ, ಎರಡು ಮೂರು ಪದವಿ ಗಳಿಸಿ ಫಿಜ್ಜಾ ಪಾನಿಪುರಿ ತಿಂದು, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳಿಗೆ ಜೋತು ಬಿದ್ದು ಶೋಕಿಲಾಲರಾಗಿರುವ ಯುವಜನಾಂಗದ ಮನಸ್ಥಿತಿ ಹಾಗೂ ಅವರ ಹೊಸ ಅಲೋಚನಾ ಕ್ರಮ ತೆರೆದಿಟ್ಟರು.
ಭರವಸೆಗಳ ಬೆಳಕು: ಚಿಕ್ಕಮಗಳೂರಿನ ಡಿ. ನಳಿನಾ ಅವರು, ತಾಯಿಯ ಮಹತ್ವ ಹಾಗೂ ಗುರುವಿನ ಶ್ರೇಷ್ಠತೆ ಕುರಿತು 'ತಾಯಿ ಮತ್ತು ಗುರು' ಎಂಬ ಕವನ ವಾಚಿಸಿದರು. ದಾವಣಗೆರೆಯ ನಾಗರಾಜ್ ಆರ್.ಜಿ. ಹಳ್ಳಿ ಅವರು 'ತಿಮ್ಮಕ್ಕನ್ನ ಮನೆಗೆ ಬುದ್ಧ ಬಂದಿದ್ದ' ಎಂಬ ಕವಿತೆ ವಾಚಿಸಿ, ಪರಿಸರಕ್ಕಾಗಿ ಮರ ಬೆಳೆಸಿದ ತಿಮ್ಮಕ್ಕನ ಆಶಯಕ್ಕೆ ವಿರುದ್ಧವಾಗಿ ರಸ್ತೆ ವಿಸ್ತಾರಕ್ಕೆ ಮರ ಕಡಿದ ಸರ್ಕಾರ ಹಾಗೂ ಜನಪ್ರತಿನಿಧಿಗಳ ಭರವಸೆಯ ಮೇಲೆ ಬೆಳಕು ಚೆಲ್ಲಿದರು.
ಮೈಸೂರಿನವರಾದ ಎಂ.ಬಿ. ಜಯಶಂಕರ್ ಅವರು ಅಂತರ, ಎಸ್. ಚನ್ನಪ್ಪ ಅವರು ಅರಮನೆ ಪ್ಯಾಲೇಸ್, ಪ್ರಕಾಶ್ ಆರ್.ಜಿ. ಹಳ್ಳಿ ಎಲ್ಲವೂ ನೀನೆ, ಕೆ.ಎಂ. ಭೈರಪ್ಪ ನಾ ಕವನ ಕಟ್ಟೋದಿಲ್ಲ, ಕುಮಾರ ಕವಿ ಅವರು ಡಾಟ್ ಡಾಟ್ ಡಾಟ್, ಕೆ. ಮಹಾದೇವನಾಯಕ ಮಾನವನಿಗೆಷ್ಟು ಬೆಲೆ, ಉಡುಪಿಯ ಪೂರ್ಣಿಮಾ ಅವರು ಮಾತುಗಳು ಕವಿತೆ ವಾಚಿಸಿದರು.
ಕೋಲಾರದ ದ್ವಾರನಕುಂಟೆ ಪಾತಣ್ಣ, ಶಿವಮೊಗ್ಗದ ಚಂದ್ರಶೇಖರ್ ಅಜಾದ್, ನಾಗರಾಜ ತಲಕಾಡು, ತಿರುಮಲಾಪುರ ನಾರಾಯಣ, ವಿ.ಆರ್. ಕಾರ್ಪೆಂಟರ್, ವಿ.ಎಂ. ಮಂಜುನಾಥ್, ಮಂಜು ಕೋಡಿಉಗನೆ, ರಮೇಶ್ ಗು.ಚಿ, ಎನ್. ರಾಜೇಶ್ವರಿ, ವೀರಣ್ಣ ಮಡಿವಾಳರ, ವೆಂಕಟಗಿರಿ ದಳವಾಯಿ , ಶರತ್ ಚಕ್ರವರ್ತಿ, ಶಾಂತನಾಯಕ ಶಿರಗಾನಹಳ್ಳಿ, ಶಿವಕುಮಾರ್ ಕಂಪ್ಲಿ, ಸ್ಮಿತಾ ಅಮೃತರಾಜ್ ಹಾಗೂ ಹರೀಶ್ ಕಟ್ಟೆ ಅವರು ಕವನ ಓದಿದರು.
ಅಧ್ಯಕ್ಷತೆ ವಹಿಸಿದ್ದ ಹೆಸರಾಂತ ಕವಿ ಲಕ್ಷ್ಮೀಪತಿ ಕೋಲಾರ ಅವರು ಎರಡು ಕವಿತೆಗಳನ್ನು ಮಾತ್ರ ವಾಚಿಸಿದರು. ಗಂಟಲಿನ ತೊಂದರೆ ಇರುವ ಕಾರಣ ಅವರ ಭಾಷಣವನ್ನು ಸಮಿತಿ ಕಾರ್ಯಾಧ್ಯಕ್ಷ ಸಿ.ನಾಗಣ್ಣ ಓದಿದರು. ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿಯಾಗಿದ್ದರು. ಸಮಿತಿ ಅಧ್ಯಕ್ಷ ಪ್ರೊ. ಕೆ.ಎಸ್. ಭಗವಾನ್ ಇದ್ದರು. ರಾಜ್ಯದ ನಾನಾ ಭಾಗಗಳಿಂದ 31 ಮಂದಿ ಕವಿಗಳು ಭಾಗವಹಿಸಿದ್ದರು.
ಯುವಕರ ಗೋಷ್ಠಿಯೋ... ಹಿರಿಯರ ಗೋಷ್ಠಿಯೋ...
'ಇದು ಯುವಕರ ಕವಿಗೋಷ್ಠಿಯೋ ಅಥವಾ ಹಿರಿಯರ ಕವಿಗೋಷ್ಠಿಯೋ' ಎಂಬ ಮಾತು ಶುಕ್ರವಾರ ನಡೆದ ಕವಿ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಂದ ಕೇಳಿಬಂತು. ದಸರಾ ಕವಿಗೋಷ್ಠಿ ಉಪಸಮಿತಿಯು ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಎರಡನೇ ದಿನದ ಕವಿಗೋಷ್ಠಿಯಲ್ಲಿ ಯುವಕರೊಂದಿಗೆ ಹಿರಿಯರು ಸಹ ಕವಿತೆ ವಾಚಿಸಿದ್ದು ಚರ್ಚೆಗೆ ಗ್ರಾಸವಾಯಿತು. ಯುವ ಕವಿಗೋಷ್ಠಿ ಎಂದರೆ ಸಾಮಾನ್ಯ 40ರ ಆಸುಪಾಸಿನಲ್ಲಿರುವವರು ಭಾಗವಹಿಸುತ್ತಾರೆ ಎಂಬ ಭಾವನೆ ಇತ್ತು. ಆದರೆ ಅಲ್ಲಿ ಭಾಗವಹಿಸಿದ್ದವರಲ್ಲಿ ಮೂವರು ಹಿರಿಯ ನಾಗರಿಕರಿದ್ದರು. ಅಲ್ಲದೆ 45 ಕ್ಕೂ ಹೆಚ್ಚಿನ ವಯೋವಾನದವರು ಸಹ ಕವನ ವಾಚಿಸಿದ್ದುಂಟು. ಅದ್ದರಿಂದಾಗಿ ಇದು ಯುವಕವಿಗೋಷ್ಠಿಯೋ ಅಥವಾ ಹಿರಿಯರ ಕವಿಗೋಷ್ಠಿಯೋ ಎಂಬುವ ಅನುಮಾನ ವ್ಯಕ್ತಪಡಿಸಿದ್ದು ಸಹಜ.
ಮಾ. ವೆಂಕಟೇಶ್