ಹಾಕಿ; ಹರಿಯಾಣ- ಮೈಸೂರು ಮುಖಾಮುಖಿ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಅಖಿಲ ಭಾರತ ಆಹ್ವಾನಿತ ಮಹಿಳಾ ತಂಡಗಳ ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರ ಜಯ ಗಳಿಸಿದ ಹರಿಯಾಣ ತಂಡ ಮತ್ತು ಮೈಸೂರು ಡಿವೈಇಎಸ್ ತಂಡ ಮೊದಲ ಸೆಮಿ ಫೈನಲ್ ಪ್ರವೇಶಿಸಿವೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಶುಕ್ರವಾರ ನಡೆದ ಪೂಲ್ ಎ ಗುಂಪಿನ ಪಂದ್ಯಾವಳಿಯಲ್ಲಿ ಹರಿಯಾಣದ ಶಹಬಾದ್ ಹಾಕಿ ಅಕಾಡೆಮಿಯ ಜಸ್ಪ್ರೀತ್ ಕೌರ್ ಅವರ ಮೂರು ಗೋಲ್ಗಳ ನೆರವಿನೊಂದಿಗೆ ಸಾಯ್ ಭೋಪಾಲ್ ತಂಡವನ್ನು 4-1 ಅಂತರದಿಂದ ಪರಾಭವಗೊಳಿಸಿ, ಮೊದಲ ಸೆಮಿಫೈನಲ್ ಪ್ರವೇಶಿಸಿತು.
ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗ್ವಾಲಿಯರ್ನ ಎಂ.ಪಿ. ಹಾಕಿ ಅಕಾಡೆಮಿ ಮತ್ತು ಭೋಪಾಲ್ನ ಸಾಯಿ ತಂಡ ಮುಖಾಮುಖಿ ಆಗಲಿವೆ. ಶನಿವಾರ ಬೆಳಗ್ಗೆ 7ಕ್ಕೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಮೊದಲ ಮತ್ತು ಎರಡನೆ ಸೆಮಿ ಫೈನಲ್ನಲ್ಲಿ ಜಯಗಳಿಸಿದ ತಂಡಗಳಿಗೆ ಪ್ಲೇಸ್ ಮ್ಯಾಚ್ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಗಳು ಅಂತಿಮ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಪಂದ್ಯದ ವಿವರ
ಸಾಯಿ ಎಸ್ಟಿಸಿ ಮಡಿಕೇರಿ ಮತ್ತು ಒರಿಸ್ಸಾದ ಸ್ಪೋರ್ಟ್ಸ್ ಹಾಸ್ಟೆಲ್ ರೌರ್ಕೆಲ ನಡುವೆ ನಡೆದ ಪಂದ್ಯದಲ್ಲಿ ಉಭಯ ತಂಡಗಳು 1-1 ಅಂಕ ಪಡೆದದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಭೋಪಾಲ್ ಸಾಯಿ ಮತ್ತು ಹರಿಯಾಣದ ಶಹಾಬಾದ್ ಹಾಕಿ ಅಕಾಡೆಮಿ ನಡುವಿನ ಪಂದ್ಯದಲ್ಲಿ ಹರಿಯಾಣ ತಂಡವು 4-1 ಅಂತರದಿಂದ ಜಯಗಳಿಸಿತು. ತಂಡದ ಪರ ಜಸ್ಪ್ರೀತ್ ಕೌರ್(39, 52, 57 ನಿ.) ಮೂರು ಗೋಲ್ ಬಾರಿಸಿ ಮಿಂಚಿದರು. ಹರ್ಮಿಂದರ್ ಕೌರ್(49 ನಿ.) ಒಂದು ಗೋಲ್ ಬಾರಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರಿನ ಡಿವೈಇಎಸ್ ತಂಡವು, ಗ್ವಾಲಿಯರ್ನ ಎಂಪಿ ಹಾಕಿ ಅಕಾಡೆಮಿ ತಂಡದ ವಿರುದ್ಧ 4-1 ಅಂತರದಿಂದ ಸೋತಿತು. ಗ್ವಾಲಿಯರ್ ತಂಡದ ದೀಕ್ಷಾ ತಿವಾರಿ(24 ನಿ.), ತಾರಿಣಿ ಕುಮಾರಿ(28 ನಿ.) ತಲಾ ಒಂದು ಗೋಲ್ ಮತ್ತು ಪ್ರಿಯಾಂಕ(37, 50 ನಿ.) ಎರಡು ಗೋಲ್ ಬಾರಿಸಿದರು. ಮೈಸೂರು ತಂಡದ ಪರ ಕಾವ್ಯಶ್ರೀ(47 ನಿ.) ಒಂದು ಗೋಲ್ ಪಡೆದರು.
ಡಿ.ಎನ್. ಮಹೇಂದ್ರ