ಆರೋಗ್ಯ ಸಂಶೋಧನೆಗೆ ಆದ್ಯತೆ ಇರಲಿ
ಕ.ಪ್ರ.ವಾರ್ತೆ ಮೈಸೂರು ಅ. 12
ಶಿಕ್ಷಣ ಮತ್ತು ಆರೋಗ್ಯ ಕುರಿತ ಸಂಶೋಧನೆಯಿಂದ ಮಾತ್ರ ಆಧುನಿಕ ಭಾರತ ನಿರ್ಮಾಣ ಸಾಧ್ಯ ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಟಿ. ರಾಮಸಾಮಿ ಹೇಳಿದರು.
ಜೆಎಸ್ಎಸ್ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಜೆಎಸ್ಎಸ್ ವಿಶ್ವವಿದ್ಯಾನಿಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಆಧುನಿಕ ಭಾರತ ಇಂದು ಅನೇಕ ಸವಾಲು ಎದುರಿಸುತ್ತಿದೆ. ಜನ ಸಾಮಾನ್ಯರು ಶಿಕ್ಷಣ ಹಕ್ಕು, ಆಹಾರದ ಹಕ್ಕು, ಉದ್ಯೋಗಾವಕಾಶದ ಹಕ್ಕಿನ ಸವಾಲು ಎದುರಿಸುತ್ತಿದ್ದಾರೆ.
ಮಾನವ ಆರೋಗ್ಯ ಗಂಭೀರ ವಿಷಯವಾಗಿದೆ. ಪ್ರಸ್ತುತ ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕಿದೆ. ಆಧುನಿಕ ಶಿಕ್ಷಣ ಪ್ರಮುಖವಾಗಿ ಉದ್ಯೋಗಾಧಾರಿತವಾಗಿದೆ. ಆಧುನಿಕ ಭಾರತ ನಿರ್ಮಾಣವಾಗಬೇಕಿದ್ದರೆ ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಬೇಕು ಎಂದರು.
ಸಮಾಜದ ಸಂತೋಷಕ್ಕೆ ಶಿಕ್ಷಣದ ಕಾಣಿಕೆ ಏನೂ ಇಲ್ಲ ಎಂಬುದು ನನ್ನ ಅಭಿಪ್ರಾಯ.
ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಗೆ ಪುರುತಾನ ಭಾರತ ವಿಭಿನ್ನ ಕೊಡುಗೆ ನೀಡಿದೆ. ಆಯುರ್ವೇದ ಮತ್ತು ಸಿದ್ಧೌಷಧ ಪುರುತಾನ ಔಷಧಗಳು. ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಹಲವು ಪ್ರಥಮಗಳನ್ನು ಸಾಧಿಸಿದೆ. ಶಸ್ತ್ರ ಚಿಕಿತ್ಸಾ ಸಾಧನಗಳು, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಅನೇಕ ಪ್ರಥಮ ಸಾಧನೆ ಭಾರತದ್ದಾಗಿದೆ. ಪುರುತಾನ ಔಷಧವು ಸಂಯೋಜನಾತ್ಮಕ ಜೀವ ವಿಜ್ಞಾನ ಮತ್ತು ಸಮಗ್ರ ವಿಧಾನಗಳನ್ನು ರೂಪಿಸಿದೆ. ಪಾರಂಪರಿಕ ಜ್ಞಾನವನ್ನು ಆರೋಗ್ಯ ಸೇವೆಗಾಗಿ ಮತ್ತು ಸಮಾಜಿಕ ಸೇವೆಯಾಗಿ ಬಳಸಿಕೊಳ್ಳಲಾಗಿತ್ತು ಎಂದು ಹೇಳಿದರು.
ಇಂದಿನ ಜಾಗತಿಕ ಸಂದರ್ಭದಲ್ಲಿ ಮಾನವ ಆರೋಗ್ಯ ಒಂದು ಗಂಭೀರ ಸಮಸ್ಯೆಯಾಗಿದೆ. ಆರೋಗ್ಯ ಸಂಶೋಧನೆಯು ಶಿಶು ಮರಣ ತಪ್ಪಿಸಬೇಕು. ಆದರೆ ಆರೋಗ್ಯ ಒಂದು ವ್ಯಾಪಾರವೋ? ಅಥವಾ ಸೇವೆಯೋ? ಎಂಬ ಗೊಂದಲ ಉಂಟಾಗಿದೆ.
ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ. ವೈದ್ಯಕೀಯ ಶಿಕ್ಷಣ ಒಂದು ರೀತಿಯ ಸವಾಲು ಎದುರಿಸುತ್ತಿದೆ. ಔಷಧ ಸಂಶೋಧನೆಗೆ ಹೆಚ್ಚು ವೆಚ್ಚವಾಗುತ್ತಿದೆ. ಸಂಶೋಧನೆ ಮತ್ತು ಔಷಧಾಭಿವೃದ್ಧಿಗೆ ಹಣ ತೊಡಗಿಸುವ ಪ್ರಕ್ರಿಯೆ ಹೆಚ್ಚಾಗಿ ಖಾಸಗಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಆಧುನಿಕ ಯುಗದಲ್ಲಿ ಉನ್ನತ ಆರೋಗ್ಯ ಶಿಕ್ಷಣ ಪಡೆಯಲು ಹೆಚ್ಚು ವೆಚ್ಚವಾಗುತ್ತಿದೆ ಎಂದು ಅವರು ಹೇಳಿದರು.
ಕುಲಾಧಿಪತಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್, ಕುಲಸಚಿವರಾದ ಡಾ. ಆರ್. ವಿಜಯಸಿಂಹ, ಡಾ.ಬಿ. ಮಂಜುನಾಥ್ ಇದ್ದರು. ಕುಲಪತಿ ಡಾ.ಬಿ. ಸುರೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.