ಉದ್ಯೋಗಾವಕಾಶಕ್ಕೆ ಎಲ್ಲೆಡೆ ಸ್ಪರ್ಧೆ: ಬಸವರಾಜು
ಮೈಸೂರು: ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾರ್ಥಿಗಳ ಉದ್ಯೋಗ ಮಾಹಿತಿ ಮಾರ್ಗದರ್ಶಿ ಸಂಸ್ಥೆಯ ಸಹಯೋಗದಲ್ಲಿ ಬಿಕಾಂ ಮತ್ತು ಬಿಬಿಎಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ವೃತ್ತಿ ಮತ್ತು ವೃತ್ತಿ ಪ್ರದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಾಕಾಶಕ್ಕೂ ಹೆಚ್ಚು ಸ್ಪರ್ಧೆ ಎದುರಾಗಿದೆ. ಯಶಸ್ಸು ಸಾಧಿಸಲು ಪರಿಶ್ರಮ ದಾರಿ ಬಿಟ್ಟು ಬೇರೆ ಅಡ್ಡ ದಾರಿ ಇಲ್ಲ ಎಂಬುದನ್ನು ಮರೆಯಬಾರದು ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಸಂಪನ್ಮೂಲ ವ್ಯಕ್ತಿಗಳು ವೃತ್ತಿ ಮತ್ತು ಕೌಶಲ್ಯತೆ ಕುರಿತು ಉಪನ್ಯಾಸ ನೀಡಿದರು. ಉದ್ಯೋಗಾವಕಾಶಗಳ ಕುರಿತು ಸಲಹೆ ನೀಡಲಾಯಿತು. ಪ್ರಾಂಶುಪಾಲ ಡಾ.ಎ.ಎಂ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ನಿರ್ದೇಶಕ ಬಾಲಚಂದ್ರಗೌಡ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ. ವಿದ್ಯಾ ಇದ್ದರು.
ಕೌಶಲ್ಯ ತರಬೇತಿ
ಎಚ್.ಡಿ. ಕೋಟೆ: ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ನಗರ ಸ್ವಯಂ ಉದ್ಯೋಗ ಯೋಜನೆ ಹಾಗೂ ನಗರ ಮಹಿಳಾ ಸ್ವಯಂ ಉದ್ಯೋಗ ಕಾರ್ಯಕ್ರಮಕ್ಕಾಗಿ 2013-14ನೇ ಸಾಲಿನ ಸರಗೂರು ಪಪಂ ವ್ಯಾಪ್ತಿಯ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸರಗೂರು ಪಪಂಯಿಂದ ಉಚಿತವಾಗಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅ. 25ರ ಸಂಜೆ 4ರೊಳಗೆ ಸಲ್ಲಿಸುವಂತೆ ಪಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಸಮಾರೋಪ
ಮೈಸೂರು: ಜ್ಞಾನಬುತ್ತಿ ಶಿಕ್ಷಣ ಸಂಸ್ಥೆಯು ಐಬಿಪಿಎಸ್ ಬ್ಯಾಂಕ್ ಪ್ರೊಬೇಷನರಿ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಅ. 15ರ ಸಂಜೆ 6ಕ್ಕೆ ಮಹಾರಾಣಿ ಎನ್ಟಿಎಂ ಶಾಲಾ ಆವರಣದಲ್ಲಿ ನಡೆಯಲಿದೆ. ಮುಕ್ತ ವಿವಿ ಕುಲಪತಿ ಎಂ.ಜಿ. ಕೃಷ್ಣನ್ ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಶುಭ ಹಾರೈಸುವರು. ಪ್ರಾಧ್ಯಾಪಕ ಎಂ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು.
ಕೆ-ಸೆಟ್ ತರಬೇತಿ
ಮೈಸೂರು: ರಾಮಸ್ವಾಮಿ ವೃತ್ತದ ಬಳಿಯ ವಿದ್ಯಾಭವನವು ಮೈಸೂರು ವಿವಿ ನಡೆಸುವ ಕೆ- ಸೆಟ್ ಪರೀಕ್ಷೆಯ ಅಭ್ಯರ್ಥಿಗಳಿಗಾಗಿ ಸಾಮಾನ್ಯ ಪತ್ರಿಕೆ ಹಾಗೂ ಎಂಬಿಎ, ಅರ್ಥಶಾಸ್ತ್ರ, ಎಂ.ಕಾಂ, ಭೂಗೋಳಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳಿಗೆ ತರಬೇತಿ ಆಯೋಜಿಸಿದೆ. ಆಸಕ್ತರು ಡಾ.ಎ.ಎನ್. ಸೋಮಶೇಖರ್-ದೂ. 2481873 ಸಂಪರ್ಕಿಸಬಹುದು.
ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ
ಮೈಸೂರು: ಕೆಎಡಿಜೆ ಕೋಚಿಂಗ್ ಕೇಂದ್ರವು ಬ್ಯಾಂಕಿಂಗ್ ಪ್ರೊಬೇಷನರಿ ಅಧಿಕಾರಿ, ಕ್ಲರಿಕಲ್ ಪೋಸ್ಟ್, ಎಂಬಿಎ, ಕೆಎಎಸ್, ಪಿಎಸ್ಐ ಮತ್ತು ಕೆ- ಸೆಟ್ ಪರೀಕ್ಷೆಗೆ ತರಬೇತಿ ಶಿಬಿರ ಆರಂಭಿಸುತ್ತಿದೆ. ಆಸಕ್ತರು ಮೊ. 9742974258 ಸಂಪರ್ಕಿಸಬಹುದು.
ಮುಖಂಡರ ಆಯ್ಕೆ
ಮೈಸೂರು: ಜೆ.ಪಿ.ನಗರ ನವೋದಯ ಬಡಾವಣೆ ಕೊಪ್ಪಲೂರು ಕಾಲೋನಿ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘವು ಮುಖಂಡರನ್ನು ಆಯ್ಕೆ ಮಾಡಿದೆ. ಕಾಲೋನಿಯ ದೊಡ್ಡ ಯಜಮಾನರಾಗಿ ಷಣ್ಮುಗಂ, ಚಿಕ್ಕ ಯಜಮಾನರಾಗಿ ಶಂಕರ್, ಶಾಸ್ತ್ರೀಯ ಯಜಮಾನರಾಗಿ ನಂಜುಂಡ, ಎಂ.ಎಸ್. ಆನಂದ್, ಪಂಚಾಯಿತಿ ಕಾರ್ಯದರ್ಶಿಯಾಗಿ ಸುಬ್ರಮಣ್ಯ, ಯಜಮಾನರಾಗಿ ಕೃಷ್ಣ, ಕುಪ್ಪೆ ಕೋಲಕಾರರು ಆಯ್ಕೆಯಾಗಿದ್ದಾರೆ. ಛೇರ್ಮನ್ ಆಗಿ ಪಿ.ಎಸ್. ಸುಬ್ರಮಣಿ, ಉಪ :ಪೇರ್ಮನ್ ಆಗಿ ಬಿ. ಮಾರಯ್ಯ, ಕಾರ್ಯಾಧ್ಯಕ್ಷರಾಗಿ ಮುರುಗೇಶ್, ಉಪಾಧ್ಯಕ್ಷರಾಗಿ ಬಿ. ರವಿ, ಕಾರ್ಯದರ್ಶಿಯಾಗಿ ಭರತ್, ಸಹ ಕಾರ್ಯದರ್ಶಿಯಾಗಿ ಆರ್. ನಾಗರಾಜ್, ಸಂಘಟನ ಕಾರ್ಯದರ್ಶಿಯಾಗಿ ಶಿವಮೂರ್ತಿ, ವಿ.ವಿ. ಮುರುಗೇಶ್, ನಿರ್ದೇಶಕರಾಗಿ ಸುಬ್ರಮಣಿ, ಸುರೇಶ್ ಆಯ್ಕೆಯಾಗಿದ್ದಾರೆ.