ಖಾತ್ರಿ ಯೋಜನೆ ಗ್ರಾಪಂ ಪಾಲಿಗೆ ವರದಾನ
ಕ.ಪ್ರ.ವಾರ್ತೆ ಟಿ.ನರಸೀಪುರ ಅ. 12
ಕೋಟ್ಯಂತರ ರು.ಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಉದ್ಯೋಗ ಖಾತರಿ ಯೋಜನೆ ಗ್ರಾಪಂಗಳಿಗೆ ವರದಾನವಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ತಾಲೂಕಿನ ಟಿ. ದೊಡ್ಡಪುರ ಗ್ರಾಮದಲ್ಲಿ ಶನಿವಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರು.10 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಜೀವ್ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಾಮಗಾರಿಗಳಿಗಾಗಿ ರು.1.50 ಕೋಟಿ ಗಳವರೆಗೂ ಕ್ರಿಯಾ ಯೋಜನೆ ತಯಾರಿಸಬಹುದು ಎಂದು ತಿಳಿಸಿದರು.
ಪಂಚಾಯಿತಿಗಳಿಗೆ ಶಾಸನಬದ್ಧವಾಗಿ ರಾಜ್ಯ ಸರ್ಕಾರ ನೀಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಉದ್ಯೋಗ ಖಾತರಿ ಯೋಜನೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ರು.12 ಲಕ್ಷ ಕೋಟಿ ಗಾತ್ರದ ಬಜೆಟ್ನಲ್ಲಿ 40 ಸಾವಿರ ಕೋಟಿ ರು.ಗಳನ್ನು ಉದ್ಯೋಗ ಖಾತರಿ ಯೋಜನೆಗೆ ಮೀಸಲಿಡಲಾಗಿದೆ. ಕರ್ನಾಟಕಕ್ಕೂ ನಾಲ್ಕು ಸಾವಿರ ಕೋಟಿ ರು.ಗಳನ್ನು ನೀಡಲಾಗಿತ್ತು. ದೇಶದಲ್ಲಿಯೇ ರಾಜಸ್ಥಾನ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ತಾಲೂಕಿನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುದಾನ ಬಳಸಿ ನಾಲ್ಕು ರಾಜೀವ್ಗಾಂಧಿ ಸೇವಾ ಕೇಂದ್ರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಟಿ. ದೊಡ್ಡಪುರದಲ್ಲಿ ಮೊದಲ ಕಟ್ಟಡವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಗ್ರಾಪಂ ಬಳಕೆಗೆ ಈ ಕಟ್ಟಡವನ್ನು ಬಳಕೆ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಜನಪರ ಯೋಜನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನರಸೀಪುರ-ಮೈಸೂರು ಮುಖ್ಯರಸ್ತೆ ವಿಸ್ತರಣೆ ಸೇರಿದಂತೆ ಈ ಭಾಗದ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ರು.522 ಕೋಟಿ ಪ್ಯಾಕೇಜ್ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ ಎಂದು ಅವರು ಹೇಳಿದರು.
ನೂರಾರು ವರ್ಷಗಳಿಂದಲೂ ಮೈಸೂರು ಮುಖ್ಯ ರಸ್ತೆ ಕಿರಿದಾಗಿದೆ. 56 ಕೋಟಿ ರು.ಗಳ ವೆಚ್ಚದಲ್ಲಿ ಕಪಿಲಾ ನದಿಗೆ ನಿರ್ಮಾಣಗೊಂಡಿರುವ ನೂತನ ಸೇತುವೆ ಉದ್ಘಾಟನೆ ಸದ್ಯದಲ್ಲಿಯೆ ನೆರವೇರಲಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪುಟ್ಟನಂಜಮ್ಮ, ಉಪಾಧ್ಯಕ್ಷ ಬಿ. ಮರಿಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಕಾರ್ಯನಿರ್ವಾಹಕ ಅಧಿಕಾರಿ ಜೈಕೃಷ್ಣ, ಜಿಪಂ ತಾಂತ್ರಿಕ ಉಪವಿಭಾಗದ ಎಇಇ ಪಿ. ಲಕ್ಷ್ಮಣ್ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ. ಶೈಲಜಾ, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ಸಿ. ರಾಜಶೇಖರ, ಎಂಜಿನಿಯರ್ ಸುರೇಶ್, ವೈದ್ಯಾಧಿಕಾರಿ ಡಾ.ಎಸ್.ಸಿ. ಮಹದೇವಸ್ವಾಮಿ ಇದ್ದರು.