ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಗುಲ ಎದುರೇ ಅಕ್ರಮ ಕಾಮಗಾರಿ

Rashmi Kasaragodu
Updated On : 12 Oct 2013, 10:35 am


ಕ.ಪ್ರ.ವಾರ್ತೆ   ನಂಜನಗೂಡು   ಅ. 12
ದಕ್ಷಿಣಕಾಶಿ ನಂಜುಂಡೇಶ್ವರನ ನೂರಾರು ಮಂದಿ ಭಕ್ತರ ಸೌಲಭ್ಯಕ್ಕೆ ಅಡ್ಡಿಯಾದ ಕಾನೂನೊಂದು ಉಳ್ಳವರ ಮುಂದೆ ಬಾಲ ಮುದುರಿಕೊಂಡು ಕುಳಿತಿರುವ ಕಥೆ ಇದು.
ಪುರಾತತ್ವ ಇಲಾಖೆಯ ಕಾನೂನು ಕಟ್ಟಲೆಯನ್ನೆ ಧಿಕ್ಕರಿಸಿ ನಂಜುಂಡೇಶ್ವರ ದೇವಳದ ಹೊರ ಪ್ರಾಕಾರದ ಕೇವಲ 20 ಅಡಿ ಸಮೀಪ (ಶಂಕರ ಮಠದ ಪಕ್ಕ)ದ 120್ಢ55 ಅಳತೆ ನಿವೇಶನದಲ್ಲಿ ವಾಣಿಜ್ಯೋದ್ದೇಶ ಕಟ್ಟಡ ನಿರ್ಮಾಣ ಕಾಮಗಾರಿಯೊಂದು ಗುಟ್ಟಾಗಿ ನಡೆದಿದೆ. ಹಿಂದೊಮ್ಮೆ ಈ ಕುರಿತು 'ಕನ್ನಡಪ್ರಭ' ಪ್ರಕಟಿಸಿದ ವರದಿ ಸಂಬಂಧಪಟ್ಟವರನ್ನು ಎಚ್ಚರಿಸಿದರ ಪರಿಣಾಮ, ಕಾಮಗಾರಿ ಸ್ಥಗಿತಗೊಂಡಿತ್ತು. ಇದಾದ ಸುಮಾರು ನಾಲ್ಕೈದು ವರ್ಷಗಳ ನಂತರ ನಿರ್ಮಾಣ ಕಾರ್ಯ ಮತ್ತೆ ಗುಟ್ಟಾಗಿ ಚಾಲನೆ ಪಡೆದಿರುವುದು ನಾಕರಿಕರ ಗಮನ ಸೆಳೆದಿದೆ. ರಸ್ತೆಗೆ ಮುಖ ಮಾಡಿದಂತೆ ಹಳೆಯ ಕಟ್ಟಡವನ್ನು ಹಾಗೆಯೆ ಉಳಿಸಿಕೊಂಡು ಯಾರ ಗಮನಕ್ಕೂ ಬಾರದಂತೆ ಹಿಂದೆ ಕಟ್ಟಡ ಕಟ್ಟಲಾಗುತ್ತಿದೆ. ಈಗಾಗಲೆ ಆರ್ಸಿಸಿ ವರೆವಿಗೆ ನಿರ್ಮಾಣ ಕಾರ್ಯ ನಡೆದಿದೆ.
ದೇವಳಕ್ಕೆ ಸೇರಿದ ನಿವೇಶನದಲ್ಲಿ ಭಕ್ತರ ಸೌಲಭ್ಯಕ್ಕಾಗಿ ಯಾತ್ರಿಭವನ ಸಮೀಪ 100 ಕೊಠಡಿಗಳ ನಿರ್ಮಾಣ ಯೋಜನೆಗಾಗಿ ಮುಜರಾಯಿ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು 100 ಮೀ. ಒಳಗಿನ ನಿರ್ಬಂಧಿತ ಪ್ರದೇಶವೆಂಬ ಕಾರಣ ನೀಡಿ, ಸಾರಾಸಗಟಾಗಿ ತಳ್ಳಿ ಹಾಕಿದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಇಲಾಖೆ (ಎಎಸ್ಐ ) ಈಗ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾದರೂ ಹೇಗೆ  ಇಲ್ಲವೇ ಕಾನೂನಿನ ಕಣ್ಣಿಗೆ ಮಣ್ಣೆರಚಿ ಕಾಮಗಾರಿ ನಡೆದಿದೆಯೇ  ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪುರಾತತ್ವ ಇಲಾಖೆಯ 2010ರ ನೂತನ ಕಾಯಿದೆಯ ರೀತ್ಯ ದೇವಾಲಯದ 100 ಮೀ. ಸುತ್ತಳತೆ ನಿರ್ಬಂಧಿತ ಪ್ರದೇಶ. ಅದರ ಮುಂದಿನ 200 ಮೀ.  ನಿಯಂತ್ರಿತ ಪ್ರದೇಶ. ನಿರ್ಬಂಧಿತ ಪ್ರದೇಶ ಸುರಕ್ಷಿತ ಪ್ರದೇಶವಾಗಿದ್ದು, ಈ ಸ್ಥಳದಲ್ಲಿ ಸಾರ್ವಜನಿಕ ಉದ್ದೇಶವೂ ಸೇರಿದಂತೆ ಯಾವುದೇ ನಿರ್ಮಾಣ ಕಾರ್ಯ ನಡೆಯುವಂತಿಲ್ಲ ಎನ್ನುತ್ತದೆ ಕಾನೂನು. ಪರಿಣಾಮವಾಗಿ ಸೂಕ್ತ ನಿವೇಶನವಿಲ್ಲದೆ ದೇವಾಲಯದ 2ನೇ ಹಂತದ ಅಭಿವೃದ್ಧಿ ಯೋಜನೆ ನಿಧಾನಗತಿಯಲ್ಲಿ ಸಾಗುವಂತಾಗಿದೆ. ಕಾಯಿದೆ ಉಲ್ಲಂಘನೆಯಾದಲ್ಲಿ ಎರಡು ವರ್ಷ ಕಾರಾಗೃಹ ಅಥವಾ  ರು. ಒಂದು ಲಕ್ಷ ದಂಡ ಇಲ್ಲವೇ ಎರಡೂ ಶಿಕ್ಷೆಯನ್ನು ವಿಧಿಸಲಾಗಿದೆ. ನಂಜುಂಡೇಶ್ವರನಿಗೇ ಬ್ರೇಕ್ ಹಾಕಿರುವ ಕಾನೂನು, ಖಾಸಗಿ ವ್ಯಕ್ತಿಯೊಬ್ಬರಿಗೆ ಲೆಕ್ಕಕ್ಕಿಲ್ಲದಂತಾಗಿದ್ದಾದರೂ ಹೇಗೆ ಎಂಬುದು ಇಲ್ಲಿನ ಪ್ರಶ್ನೆ.
ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷಗಳನ್ನು ಕುರೂಪಗೊಳಿಸುವ ಪ್ರಯತ್ನದಲ್ಲಿ ತೊಡಗುರುವವರಿಗೆ ಮಾತ್ರವಲ್ಲದೆ, ಕ್ರಮ ಕೈಗೊಳ್ಳದ ಪುರಾತ್ವ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಪಟ್ಟವರನ್ನೂ ತಪ್ಪಿತಸ್ಥರೆಂದು ಕಾಯಿದೆ ಹೇಳುತ್ತದೆ.
ನಂಜನಗೂಡು ಮೋಹನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement