ನಾಳೆ ಧಮ್ಮ ವಿಜಯ
ಟಿ.ನರಸೀಪುರ: ತ್ರಿವೇಣಿ ನಗರದ ನಳಂದ ಬುದ್ಧ ವಿಹಾರದಲ್ಲಿ ಅ. 14ರ ಸಂಜೆ 5ಕ್ಕೆ ಸಾಮ್ರಾಟ್ ಅಶೋಕ ಚಕ್ರವರ್ತಿ ಧಮ್ಮ ವಿಜಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಧಮ್ಮ ಪರಿವರ್ತನ ದಿನ ಕಾರ್ಯಕ್ರಮ ನಡೆಯಲಿದೆ. ಬೋಧಿರತ್ನ ಭಂತೇಜಿ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ ಉದ್ಘಾಟಿಸುವರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಶಿಕಲಾ ನಾಗರಾಜು, ಪುಟ್ಟಬಸವಯ್ಯ, ಮಹದೇವಯ್ಯ, ನಾಗಯ್ಯ, ಡಾ. ಚಿನ್ನಸ್ವಾಮಿ, ಕೆ.ಎಸ್. ಸುಂದರರಾಜ್, ಸಿ. ವೆಂಕಟೇಶ್ ಇದ್ದರು.
ಅಕ್ರಮ ಮದ್ಯ ಮಾರಾಟ: ದೂರು
ಕೆ.ಆರ್. ನಗರ: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕೆಸ್ತೂರು ಮಂಜುನಾಥ ಆರೋಪಿಸಿದ್ದಾರೆ. ಇದರಿಂದ ಸಂಜೆ ವೇಳೆ ಮಹಿಳೆಯರು, ಮಕ್ಕಳು ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡಲು ತೊಂದರೆಯಾಗಿದ್ದು, ತೆರೆದ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದು, ಹೇಳುವವರು- ಕೇಳುವವರು ಇಲ್ಲದಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಅಕ್ರಮ ಮದ್ಯ ಮಾರಾಟಗಾರರು ಉಡಾಫೆಯ ಉತ್ತರ ನೀಡುತ್ತಾರೆ ಎಂದು ದೂರಿದ್ದಾರೆ. ಈ ಹಿಂದೆ ಗ್ರಾಮಸ್ಥರು ಮದ್ಯ ಮಾರಾಟ ಮಾಡದಂತೆ ನಿರ್ಣಯಿಸಿದ್ದರು ಅದಕ್ಕೆ ಯಾವುದೇ ಗೌರವ ನೀಡದೆ ಮತ್ತೆ ಹಳೆ ಚಾಳಿ ಮುಂದುವರಿಸಿರುವುದರಿಂದ ಅಕ್ರಮದ ಬಗ್ಗೆ ಯಾರಿಗೆ ದೂರ ಬೇಕು ಎಂಬುವುದು ತಿಳಿಯದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೂಡಲೇ ಸಂಬಂಧಿತ ಇಲಾಖೆಯ ಅಧಿಕಾರಿಗಳು ಶಿಸ್ತುಕ್ರಮ ಕೈಗೊಂಡು ಕೆಸ್ತೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಶೇಖರ್ಗೆ ಡಾಕ್ಟರೇಟ್
ಹುಣಸೂರು: ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಡಾ. ಖೈಸರ್ ಎಂ. ಖಾನ್ ಮಾರ್ಗದರ್ಶನದಲ್ಲಿ ಎಚ್.ಪಿ. ಶೇಖರ್ಗೆ 'ಇನ್ಫರ್ಮೇಶನ್ ನೀಡ್ಸ್ ಅಂಡ್ ಕಮ್ಯೂನಕೇಶನ್ ಪ್ಯಾಟ್ರನ್ ಆಫ್ ಕಾರ್ಪೊರೇಶನ್ ಬ್ಯಾಂಕ್ ಎಕ್ಸಿಕ್ಯೂಟಿವ್ ಇನ್ ಇಂಡಿಯಾ ಎ ಸ್ಟಡಿ' ವಿಷಯದ ಬಗ್ಗೆ ಸಂಶೋಧನೆಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.