'ಶಾಸಕ-ಸಂಸದ ಭಿನ್ನಾಭಿಪ್ರಾಯ ಬದಿಗೊತ್ತಿ ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಆರಂಭಿಸಲಿ'
ಕ.ಪ್ರ.ವಾರ್ತೆ ಕೆ.ಆರ್. ನಗರ ಅ. 12
ಚುಂಚನಕಟ್ಟೆ ರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿ, 20 ತಿಂಗಳಾಗಿದ್ದರೂ ವರೆಗೆ ಪುನರಾರಂಭವಾಗದಿರಲು ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಮತ್ತು ಮೈಸೂರು ಸಂಸದ ಎಚ್. ವಿಶ್ವನಾಥ್ ವೈಯಕ್ತಿಕ ಬಿನ್ನಭಿಪ್ರಾಯಗಳೇ ಕಾರಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ್ ಆರೋಪಿಸಿದರು.
ಇವರಿಬ್ಬರ ಭಿನ್ನಾಭಿಪ್ರಾಯಕ್ಕೆ ರೈತರ ಜೀವನಾಡಿಯಾಗಿರುವ ಕಾರ್ಖಾನೆ ಮತ್ತು ರೈತರು ಬಲಿಯಾಗುತ್ತಿರುವುದು ಖಂಡನೀಯ. ಕೂಡಲೆ ಇವರು ಪರಸ್ಪರ ಕುಳಿತು ಮಾತನಾಡಿ, ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಖಾನೆ ಆರಂಭಿಸಲು ಗಮನಹರಿಸಬೇಕೆಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಸರ್ಕಾರ ಬಸವ ವಸತಿ ಯೋಜನೆಯ ಮನೆ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿರುವುದರಿಂದ ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜತೆಗೆ ತೀರಾ ಬಡವರು ಅರ್ಧಕ್ಕೆ ಮನೆ ನಿರ್ಮಾಣ ನಿಲ್ಲಿಸಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ಹಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್ ಜೈನ್, ರಾಮಕೃಷ್ಣ, ವಕ್ತಾರ ಎನ್. ರಾಜಕುಮಾರ್, ಹಿರಿಯ ಮುಖಂಡ ಗೋಪಾಲ್, ಚಾಮುಂಡೇಶ್ವರಿ ಕ್ಷೇತ್ರದ ಉಪಾಧ್ಯಕ್ಷ ಮಂಜು, ರಾಜ್ಯ ಪರಿಷತ್ ಸದಸ್ಯ ಶಶಿಧರ್ಮೂರ್ತಿ ಇದ್ದರು.