20ರಂದು ಗೊಮ್ಮಟಗಿರಿಯಲ್ಲಿ ಮಸ್ತಕಾಭಿಷೇಕ
ಕ.ಪ್ರ.ವಾರ್ತೆ , ಹುಣಸೂರು , ಅ. 16
ನಗರ ಜೀವನದ ಒತ್ತಡದಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಲು, ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಗ್ರಾಮೀಣ ಜನಜೀವನವನ್ನು ಕಾಣಲು ಹಂಬಲಿಸುತ್ತಿದ್ದೀರಾ, ಹಾಗಿದ್ದರೆ ಬನ್ನಿ ಮೈಸೂರಿಗೆ ಸಮೀಪವಿರುವ ಹುಣಸೂರು ತಾಲೂಕಿನ ಗೊಮ್ಮಟಗಿರಿ ಕ್ಷೇತ್ರಕ್ಕೆ. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನಂತೆ ಪುಟ್ಟದಾಗಿ ಮೈದಳೆದಿರುವ ಗೊಮ್ಮಟೇಶ್ವರನನ್ನು ಇಲ್ಲಿ ಕಾಣಬಹುದು.
ಮೈಸೂರಿನಿಂದ ಇಲವಾಲ ಮಾರ್ಗವಾಗಿ 12 ಕಿ.ಮೀ. ದೂರಲ್ಲಿರುವ ಈ ಪ್ರದೇಶ ಈಗ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಇದಕ್ಕೆ ಇಲ್ಲಿರುವ ಪರಿಸರ ಕಾರಣ. ಮೈಸೂರು- ಹುಣಸೂರು ರಸ್ತೆಯಲ್ಲಿ ಇಲವಾಲ ಸಮೀಪ ಬಲಕ್ಕೆ ತಿರುಗಿ ಅಥವಾ ಮನುಗನಹಳ್ಳಿ ಗೇಟ್ ಬಳಿ ಬಲಕ್ಕೆ ತಿರುಗಿ ಗೊಮ್ಮಟಗಿರಿ ತಲುಪಬಹುದು. ಈ ರಸ್ತೆಗಳಲ್ಲಿ ಗ್ರಾಮೀಣ ಪರಿಸರ ಸ್ವಾಗತಿಸುತ್ತದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಹಸಿರಿನ ಗಿಡ-ಮರಗಳು ಆಲ್ಲಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತಾಪಿ ಜನರು, ಹಸು-ಕರುಗಳನ್ನು ಮೇಯಿಸುವ ಹುಡುಗರನ್ನು ನೋಡುತ್ತಾ ಇಲವಾಲದಿಂದ ಸುಮಾರು 2.5 ಕಿ.ಮೀ ದೂರ ಹಾದಿ ಸವೆಸಿದರೆ ಗೊಮ್ಮಟಗಿರಿ ಕ್ಷೇತ್ರ ಸಿಗುತ್ತದೆ. ಅಲ್ಲಿ ಗುಡ್ಡದ ಮೇಲೆ 16 ಅಡಿ ಎತ್ತರದ ಭಗವಾನ್ ಗೊಮ್ಮಟೇಶ್ವರನ ಮೂರ್ತಿ ಇದೆ.
ಅಭಿವೃದ್ಧಿ ನಿರೀಕ್ಷೆಯಲ್ಲಿ...: ಶ್ರವಣಗುಡ್ಡ ಎಂದು ಕರೆಯುವ ಈ ಗುಡ್ಡದ ಮೇಲೆ ಗೊಮ್ಮಟೇಶ್ವರ ನಿಂತಿದ್ದಾನೆ. ಇಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಸೆಪ್ಟಂಬರ್ ಕೊನೆ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳಲ್ಲಿ ಮಸ್ತಕಾಭಿಷೇಕ ನಡೆಯುತ್ತದೆ. ಆಗ ಮಾತ್ರ ಇಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆಯೇ ಹೊರತು, ಇತರೆ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿದ್ದೆ ಆದಲ್ಲಿ, ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಯಾವುದೆ ಸಂದೇಹವಿಲ್ಲ.
ಇತ್ತೀಚಿನ ದಿನಗಳಲ್ಲಿ ಈ ಸ್ಥಳ ಪ್ರೇಮಿಗಳ ಪಿಸುಮಾತಿಗೆ ಪ್ರಾಶಸ್ತ್ಯವಾದ ಸ್ಥಳ ಎಂಬಂತಾಗಿದೆ. ಭಾನುವಾರ, ಸರ್ಕಾರಿ ರಜಾ ದಿನಗಳು ಹಾಗೂ ಬಿಡುವಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರೇಮಿಗಳು ಮೋಟಾರ್ ಬೈಕ್ಗಳಲ್ಲಿ ಬರುತ್ತಾರೆ. ಯಾರ ಅಡ್ಡಿ, ತೊಂದರೆಗಳಿಲ್ಲದೆ ವಿಶ್ರಾಂತಿ ಪಡೆದು ಹೋಗುತ್ತಾರೆ ಎಂದು ಅಕ್ಕಪಕ್ಕದ ಗ್ರಾಮಸ್ಥರು ಹೇಳುತ್ತಾರೆ.
ಪಾಳು ಬಿದ್ದ ಜಲಮಂದಿರ: 200 ಅಡಿ ಎತ್ತರದ ಕಲ್ಲು ಬಂಡೆಯ ಮೇಲಿನ ಗೊಮ್ಮಟಗಿರಿ ಇದು. ಈ ಗಿರಿಯ ಪಾದದಲ್ಲಿ 24 ಜೈನ ತೀರ್ಥಂಕರರ ಪುಟ್ಟ-ಪುಟ್ಟ ಬಸದಿಗಳು, ನೂರಾರು ಎಕರೆ ಪ್ರದೇಶದಲ್ಲಿ ಗಿಡ-ಮರಗಳು ಗಮನ ಸೆಳೆಯುತ್ತವೆ. ಪಕ್ಕದಲ್ಲೆ ಇರುವ ಗೊಮ್ಮಟಗಿರಿ ಜಲಮಂದಿರ ಮಾತ್ರ ಈಗ ನಿರ್ಲಕ್ಷ್ಯಕ್ಕೊಳಗಾಗಿ ಪಾಳು ಬಿದ್ದಿದೆ.
ಸುತ್ತಮುತ್ತಲ ಸಾಕಷ್ಟು ಸಸ್ಯ ಸಂಪತ್ತಿದೆ. ಕಣ್ಣು ಹಾಯಿಸದ ಕಡೆಯಲೆಲ್ಲ ಹಸಿರು ಗಿಡ ಮರಗಳು, ಸಣ್ಣ, ಸಣ್ಣ ಗುಡ್ಡಗಳನ್ನು ನೋಡಿ ಆನಂದಿಸಬಹುದು. ಈ ಸಹಜ ನೈಸರ್ಗಿಕ ಅಂಶಗಳಿಂದಾಗಿ ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಕಲ್ಲು ಬಂಡೆಯ ಮೇಲೆ 80 ಮೆಟ್ಟಿಲುಗಳನ್ನು ಮಾಡಲಾಗಿದೆ. 16 ಅಡಿ ಎತ್ತರದ ಆಕಷಂಕವಾದ ಗೊಮ್ಮಟೇಶ್ವರನನ್ನು ಕಾಣಬಹುದು. ಮೇಲಿಂದ ಸುಂದರ ಪರಿಸರವನ್ನು ನೋಡಿ ಆನಂದಿಸಬಹುದು. ಕುಟುಂಬ ಸಮೇತ ಹೋಗಿ ಗೊಮ್ಮಟೇಶ್ವರನ ನೋಡಿ ಬರಲು ಉತ್ತಮ ಅವಕಾಶವಿದೆ ಬೇಕಿದ್ದರೆ, ಅಲ್ಲಿಯೇ ಮರಗಳ ನೆರಳಿನಲ್ಲಿ ಊಟ-ತಿಂಡಿ ಸಿದ್ದಮಾಡಿಕೊಂಡು ತಿಂದು ಕಾಲ ಕಳೆಯಬಹುದು.
ಗೊಮ್ಮಟಗಿರಿಯಲ್ಲಿ ಬಹಳ ವಿಸ್ತಾರವಾದ ಜಾಗವಿದ್ದು, ಸುಂದರವಾದ ವಿಧವಾದ ತಳಿಯ ಗಿಡಗಳ ತೋಪು, ಗೋಶಾಲೆ, ವಿದ್ಯಾಶ್ರಮ, ಪ್ರವಾಸಿ ಮಂದಿರ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ತಾಣವನ್ನಾಗಿಸಿದರೆ, ರಾಜ್ಯದಲ್ಲಿ ಮೈಸೂರು ಜಿಲ್ಲೆ ಮತ್ತಷ್ಟು ಹೆಸರು ವಾಸಿಯಾಗಲಿದೆ. ಬೇರೆ ದೇಶದಿಂದ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೂರದಿಂದ ಬಂದ ಯಾತ್ರಿಕರು ಪ್ರಸ್ತುತವಾಗಿ ವಾಸ್ತವ್ಯ ಮಾಡಲು ಮೈಸೂರು, ಹುಣಸೂರು ಇಲ್ಲವೇ ಮನುಗನಹಳ್ಳಿಯಲ್ಲಿ ಖಾಸಗಿ ವ್ಯವಸ್ಥೆ ಮಾಡಿಕೊಳ್ಳಬಹುದು.
64ನೇ ವರ್ಷದ ಮಸ್ತಕಾಭಿಷೇಕ
ಗೊಮ್ಮಟಗಿರಿಯ ಗೋಮ್ಮಟೇಶ್ವರ ಸ್ವಾಮಿಗೆ ಈ ಬಾರಿ ನಡೆಯುವ ಮಸ್ತಕಾಭಿಷೇಕವನ್ನು ಅ.20ರಂದು 64ನೇ ವರ್ಷದ ಮಸ್ತಕಾಭಿಷೇಕ ಪೂಜಾ ಮಹೋತ್ಸವ ಹಮ್ಮಿಕೊಳ್ಳಲು ಶ್ರೀ ಗೋಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಾ. ಡಿ. ಪ್ರಭಾಮಂಡಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಹಾಗೂ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವರು. ಜೊತೆಗೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹಬ್ಬದ ಸಡಗರ, ಪ್ರಸಿದ್ಧ ಜಾತ್ರೆಯಾಗಿದೆ ಎಂದು ಕಾರ್ಯದರ್ಶಿ ಡಾ. ಎಂ.ವಿ. ಶಾಂತಕುಮಾರ್ ತಿಳಿಸಿದ್ದಾರೆ. ಸರ್ಕಾರ ಗೊಮ್ಮಟಗಿರಿಯತ್ತ ಗಮನಿಸಿ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ಸ್ಥಾಪಿಸಿ, ಸೂಕ್ತ ಅನುದಾನ ನೀಡಿ, ಆ ಮೂಲಕ ಅಭಿವೃದ್ಧಿಪಡಿಸಿ ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
-ಧರ್ಮಾಪುರ ನಾರಾಯಣ್