ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

8 ಲಕ್ಷ ಲಾಭ ಕಲ್ಲಂಗಡಿ, ಸೌತೆ, ಸುನಾಮಿ!

Vishwanath S
Updated On : 17 Oct 2013, 12:23 pm

ಕ.ಪ್ರ.ವಾರ್ತೆ , ಮೈಸೂರು , ಅ. 16
ಕಬ್ಬು, ಜೋಳ ಬೆಳೆಯುತ್ತಿದ್ದ ರೈತನೊಬ್ಬ ಕಲ್ಲಂಗಡಿ, ಸೌತೆ, ಸುನಾಮಿ ಕಾಯಿ ಬೆಳೆದು 8 ಲಕ್ಷ ಲಾಭ ಮಾಡಿದ್ದಾರೆ.
ಮೈಸೂರು ತಾಲೂಕು ಹಳ್ಳಿಕೆರೆಹುಂಡಿಯ ವೆಂಕಟೇಶ್ ಎಂಬವರಿಗೆ 4 ಎಕರೆ ಜಮೀನಿದೆ. ಜಮೀನಿನಲ್ಲಿ ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ಮೊದಲು ಅವರು ಸಂಪೂರ್ಣವಾಗಿ ಕಬ್ಬು, ಜೋಳ ಬೆಳೆಯುತ್ತಿದ್ದರು. ಈಗ ಅದನ್ನು ಎರಡು ಎಕರೆಗೆ ಸೀಮಿತಗೊಳಿಸಿಕೊಂಡು, ಉಳಿದ ಎರಡು ಎಕರೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಹಳ್ಳಿಕೆರೆಹುಂಡಿ ಗ್ರಾಮವು ತೋಟಗಾರಿಕೆ ಇಲಾಖೆಯ ಗುಚ್ಛ ಗ್ರಾಮವಾಗಿ ಆಯ್ಕೆಯಾದ ನಂತರ ಇಲಾಖಾ ಅಧಿಕಾರಿಗಳ ಸಲಹೆ ಮೇರೆಗೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದರು. ತಾಯಿ ಚೆನ್ನಮ್ಮ, ಸೋದರ ಬಾನಪ್ಪ ಸಾಥ್ ನೀಡಿದರು.
ಮೊದಲಿಗೆ 2 ಎಕರೆಯಲ್ಲಿ ಕಲ್ಲಂಗಡಿ ಬೆಳೆದರು. 35ರಿಂದ 40 ಟನ್ ಇಳುವರಿ ಬಂದಿತು. ನಂತರ ಮಂಗಳೂರು ಸೌತೆ ಬೆಳೆದರು. ಅದು ಕೂಡ ಸುಮಾರು 45 ಟನ್‌ಗಳಷ್ಟು ಇಳುವರಿ ಬಂದಿತು. ಈಗ ಸುನಾಮಿ ಕಾಯಿ ಬೆಳೆದಿದ್ದಾರೆ. ಕಲ್ಲಂಗಡಿಯನ್ನು ರಿಲಯನ್ಸ್‌ನವರು ಖರೀದಿಸಿದರು. 2.50 ಲಕ್ಷ ಆದಾಯ ಬಂದಿತು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು 1.15 ಲಕ್ಷ ವೆಚ್ಚವಾಗಿತ್ತು. ಆದರೆ ತೋಟಗಾರಿಕೆ ಇಲಾಖೆಯವರು ಇದಕ್ಕೆ ಸಹಾಯಧನ ನೀಡುತ್ತಾರೆ.
ಮಂಗಳೂರು ಸೌತೆಯನ್ನು ಮೈಸೂರಿನ ಎಪಿಎಂಸಿ ಮಾರಕಟ್ಟೆಯಲ್ಲಿ ಮಾರಾಟ ಮಾಡಲಾಯಿತು. 2 ಲಕ್ಷ ಆದಾಯ ಬಂದಿತು. ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಎಂದು 25ರಿಂದ 30,000 ರು. ವೆಚ್ಚವಾಗಿತ್ತು.
ಈಗ ಸುನಾಮಿ ಕಾಯಿ 25 ಟನ್ ಇಳುವರಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರತಿ ಕೆಜಿಗೆ 6ರಿಂದ 7 ರು. ಇದೆ. ಒಟ್ಟಾರೆ ತೋಟಗಾರಿಕೆ ಬೆಳೆಯಿಂದ ಹೆಚ್ಚು ಆದಾಯ ಗಳಿಸುತ್ತಾ ವಾರ್ಷಿಕ 4ರಿಂದ 5 ಲಕ್ಷ ರು. ನಿವ್ವಳ ಲಾಭ ಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಯಿಂದ ಬಂದ ಆದಾಯದಿಂದಲೇ ಒಂದು ಜೊತೆ ಎತ್ತು, ಸ್ಕೂಟರ್ ಖರೀದಿಸಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎಕಡೆ ಜಮೀನನ್ನು ಸಮತಟ್ಟು ಮಾಡಿಸಿದ್ದಾರೆ.
 ಕಬ್ಬು, ಜೋಳಕ್ಕಿಂತ ತರಕಾರಿ ಬೆಳೆಗಳು ಲಾಭದಾಯಕ. ಹೀಗಾಗಿ ನಾನು ಒಂದರ ನಂತರ ಒಂದು ತರಕಾರಿ ಬೆಳೆಯನ್ನೇ ಬೆಳೆಯತ್ತಿದ್ದೇನೆ. ಕಲ್ಲಂಗಡಿ, ನಂತರ ಮಂಗಳೂರು ಸೌತೆ, ಈಗ ಸುನಾಮಿ ಕಾಯಿ ಬೆಳೆದೆ. ಇದೀಗ ಟೊಮೊಟೋ ಬೆಳೆಯಲು ಸಿದ್ಧತೆ ಮಾಡಿದ್ದೇನೆ.
   -ವೆಂಕಟೇಶ್, ರೈತ, ಹಳ್ಳಿಕೆರೆಹುಂಡಿ
 ತೋಟಗಾರಿಕೆ ಇಲಾಖೆಯು ಬೆಳೆಗಾರರಿಗೆ ಇಲಾಖೆಯಿಂದ ದೊರೆಯುವ ಸಹಾಯಧನದ ಜೊತೆಗೆ ಸಮಗ್ರ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಯೋಜನೆಯಡಿ ಕ್ಲಸ್ಟರ್ ಗ್ರಾಮಗಳನ್ನು ರೂಪಿಸಿ, ಅಗತ್ಯ ಸಲಹೆ- ಸೂಚನೆ-ಮಾರ್ಗದರ್ಶನ ನೀಡಲಾಗುತ್ತಿದೆ. ಇದನ್ನು ಬಳಕೆ ಮಾಡಿಕೊಂಡು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭ ಮಾಡುತ್ತಿದ್ದಾರೆ.
     -ಕೃಷ್ಣಮುರ್ತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
     -ಎನ್. ನಂಜಯ್ಯ, ಸಹಾಯಕ ತೋಟಗಾರಿಕೆ ನಿರ್ದೇಶಕರು
  ಕಲ್ಲಂಗಡಿ, ಮಂಗಳೂರು ಸೌತೆ, ಸುನಾಮಿ ಕಾಯಿ ಅಲ್ಪಾವಧಿಯ ಬೆಳೆಗಳು. ಕಬ್ಬು ವಾರ್ಷಿಕ, ಬತ್ತ ಅರ್ಧ ವಾರ್ಷಿಕ ಬೆಳೆ. ಆದರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ವೆಂಕಟೇಶ್ ಒಂದು ವರ್ಷದಲ್ಲಿ 8 ಲಕ್ಷ ರು. ಲಾಭ ಮಾಡಿದ್ದಾರೆ. ಹೀಗಾಗಿ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸುತ್ತಿದ್ದೇನೆ.
    -ಎಂ.ಬಿ. ಸಿದ್ದೇಗೌಡ, ಜಿಪಂ ಸದಸ್ಯರು, ವರುಣ ಕ್ಷೇತ್ರ

ಏನಿದು ಸುನಾಮಿ ಕಾಯಿ?
ಸುನಾಮಿ ಕಾಯಿ ನೋಡಲು ಸೋರೆಕಾಯಿ ಇದ್ದಂತೆ ಇದೆ. ಆದರೆ ಇದು ಸೋರೆಕಾಯಿ ಅಲ್ಲ. ನಮ್ಮಲ್ಲಿ ಇದನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಕೇರಳದ ಜನರಿಗೆ ಇದು ಅತ್ಯಂತ ಪ್ರಿಯವಾದುದು. ಅಲ್ಲಿ ಮಾಂಸಾಹಾರ ಅಡುಗೆ ಜೊತೆ ಸುನಾಮಿ ಕಾಯಿ ಬಳಸುತ್ತಾರೆ. ಹೀಗಾಗಿ ಸುನಾಮಿ ಕಾಯಿಯನ್ನು ಕೇರಳದವರು ಬಂದು ತೆಗೆದುಕೊಂಡು ಹೋಗುತ್ತಾರೆ.

ಹಿತ್ತಲಲ್ಲಿ 85 ಕೆಜಿ ತೂಕದ ಬಾಳೆ ಗೊನೆ
ಮೈಸೂರು:
ಹುಣಸೂರು ಪಟ್ಟಣದ ಎನ್‌ಇಎಸ್ ವಸತಿ ಗೃಹಗಳಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ತಮ್ಮ ಮನೆಯ ಹಿತ್ತಲಲ್ಲಿ 85 ಕೆ.ಜಿ. ತೂಕದ ಬಾಳೆ ಗೊನೆ ಬೆಳೆದಿದ್ದಾರೆ.
ಮೈಸೂರು ದಸರಾ ಅಂಗವಾಗಿ ಕರ್ಜನ್ ಉದ್ಯಾನದಲ್ಲಿ ಕಳೆದ ವರ್ಷ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಗುತ್ತಿಗೆದಾರ ಸುಧಾಮ ಎಂಬವರು ಪತ್ನಿ ಜೊತೆ ಬಂದಿದ್ದರು. ಅಲ್ಲಿ ಪಚ್ಚ ಬಾಳೆ ಗಿಡವೊಂದನ್ನು ಖರೀದಿಸಿ, ಮನೆಯ ಹಿತ್ತಲಲ್ಲಿ ಹೋಗಿ ನೆಟ್ಟರು. ಅದರ ಬುಡಕ್ಕೆ ಅಡುಗೆ ಮನೆಯಿಂದ ಹೊರಹೋಗುವ ನೀರು ಹಾಯಿಸಿ, ತರಕಾರಿ ತ್ಯಾಜ್ಯ ಹಾಕತೊಡಗಿದರು. ಪರಿಣಾಮ ಗಿಡ ಉತ್ತಮವಾಗಿ ಬೆಳೆದು, ಕಳೆದ ವರ್ಷ 70 ಕೆ.ಜಿ.ಯ ಗೊನೆ ಬಿಟ್ಟಿತು. ಸುತ್ತಮುತ್ತಲಿನ ನಿವಾಸಿಗಳು ಆ ಗೊನೆ ನೋಡಿ ಅಚ್ಚರಿಪಟ್ಟರು.
ಈ ವರ್ಷ ಅದೇ ಗಿಡ 85 ಕೆಜಿ ಗೊನೆ ಬಿಟ್ಟಿತು. ಒಂದು ಚಿಪ್ಪಿನಲ್ಲಿ 36-38 ಹಣ್ಣುಗಳು ಇದ್ದಿದ್ದು ವಿಶೇಷ. ಸುಧಾಮ ಅವರು ನೆಂಟರಿಷ್ಟರು ಹಾಗೂ ಸ್ನೇಹಿತರಿಗೆ ಈ ಹಣ್ಣುಗಳನ್ನು ಹಂಚಿದರು. ಗಿಡದಿಂದ ಗೊನೆ ಬೀಳಬಾರದು ಎಂಬ ಕಾರಣಕ್ಕಾಗಿ ಗೊನೆಗೆ ಕೋಲುಗಳನ್ನು ಕೊಟ್ಟು ನಿಲ್ಲಿಸಲಾಗಿತ್ತು.
ಮನೆಯ ಹಿತ್ತಲಲ್ಲಿ ಬೆಳೆದಿರುವ ಬಾಳೆಗಿಡ 85 ಕೆ.ಜಿ.ಯ ಗೊನೆ ಬಿಟ್ಟಿರುವ ವಿಷಯ ತಿಳಿದು, ತೋಟಗಾರಿಕೆ ಇಲಾಖೆಯ ಅಧಿಕಾರಿ ಸೋಮಶೇಖರಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಅಡುಗೆ ಮನೆಯ ತ್ಯಾಜ್ಯ ನೀರು ಹಾಗೂ ತರಕಾರಿ ತ್ಯಾಜ್ಯದಂಥ ಪೌಷ್ಟಿಕ ಗೊಬ್ಬರ ಸಿಕ್ಕಿರುವುದರಿಂದ ಈ ಬಾಳೆಗಿಡ ಉತ್ತಮವಾಗಿ ಬೆಳೆದಿದೆ. ಅಕ್ಕಪಕ್ಕ ಯಾವುದೇ ಗಿಡಗಳು ಇಲ್ಲದಿರುವುದರಿಂದ ಎಲ್ಲಾ ಪೌಷ್ಟಿಕ ಅಂಶಗಳನ್ನು ಆ ಗಿಡವೇ ಹೀರಿಕೊಂಡಿರುವುದರಿಂದ ಬಾಳೆ ಗೊನೆ ಚೆನ್ನಾಗಿ ಬಂದಿದೆ ಎಂಬುದು ಸೋಮಶೇಖರಗೌಡರ ಅಭಿಪ್ರಾಯ.
ಮನೆಯ ಕೈತೋಟದಲ್ಲಿ, ಶಾಲೆಯ ಕೈತೋಟದಲ್ಲಿ ಈ ರೀತಿಯ ಗಿಡಗಳನ್ನು ಬೆಳೆಸಬಹುದು ಎಂಬುದು ಅವರ ಸಲಹೆ.


-ಅಂಶಿ ಪ್ರಸನ್ನಕುಮಾರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement