ಕುಡಿವ ನೀರಿಗೆ ತೊಂದರೆ; ನಿವಾಸಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಅ. 16
ಅಸಮರ್ಪಕ ನೀರು ಸರಬರಾಜು ಮಾಡುತ್ತಿರುವುದನ್ನು ವಿರೋಧಿಸಿದ ನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಬುಧವಾರ ಗುರುರಾಜ ಬಡಾವಣೆಯಲ್ಲಿರುವ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಎದುರು ಪ್ರತಿಭಟಿಸಿದರು.
ನಗರ ಪಾಲಿಕೆ ಸದಸ್ಯರಾದ ಬಿ.ಎಂ. ನಟರಾಜ್, ಅನಂತು, ಮಹಾದೇವಮ್ಮ, ಸೌಕತ್ ಪಾಷ, ರಜನಿ ಅಣ್ಣಯ್ಯ ಅವರು ಸಾರ್ವಜನಿಕರೊಂದಿಗೆ ನೀರು ಸರಬರಾಜು ಕೇಂದ್ರಕ್ಕೆ ತೆರಳಿ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಗೋಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಾಲಿಕೆ ಸದಸ್ಯ ಬಿಎಂ. ನಟರಾಜ್ ಮಾತನಾಡಿ, ಐದು ವಾರ್ಡ್ಗಳಲ್ಲಿ ನೀರಿಗೆ ತೊಂದರೆ ಆಗುತ್ತಿದ್ದು, ಜಸ್ಕೋ ಅಧಿಕಾರಿಗಳು ಮತ್ತು ನಗರ ಪಾಲಿಕೆಯ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಕೊಡದೆ ತೊಂದರೆ ಉಂಟಾಗಿದೆ. ಗುರುವಾರ ಬೆಳಗ್ಗೆ 9ಕ್ಕೆ ನಗರ ಪಾಲಿಕೆ ಆಯುಕ್ತರೊಂದಿಗೆ ಎಲ್ಲ ಅಧಿಕಾರಿಗಳು ಬಂದು ಸಭೆ ನಡೆಸಿ ನೀರಿನ ಸಮಸ್ಯೆ ಪರಿಹರಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಇದ ವೇಳೆ ಮುಖಂಡರಾದ ಶಶಿಕುಮಾರ್, ನರಸಿಂಹಯ್ಯ ರಾಜು, ಮೂರ್ತಿ, ನಾಗರಾಜು, ನಟರಾಜ್, ಸೋಮಣ್ಣ, ಲಕ್ಷ್ಮೇಗೌಡ, ಮಹಿಳಾ ಸಂಘದ ಸದಸ್ಯರು ಇದ್ದರು.
ಕೃಷ್ಣರಾಜ ಕ್ಷೇತ್ರ ಬಿಜೆಪಿಗೆ ನೇಮಕ
ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿಯ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಅಧ್ಯಕ್ಷ ಆರ್. ರಾಮಪ್ರಸಾದ್ ಹೇಳಿದ್ದಾರೆ. ಆರ್. ನಾಗರಾಜ, ಎಚ್.ವಿ. ರವಿಶಂಕರ್, ಮಹೇಶ್ ರಾಜೇ ಅರಸ್, ವಿನಯ್, ಪಂಕಜ, ವನಜಾಭೀಮಯ್ಯ(ಉಪಾಧ್ಯಕ್ಷರು), ಎಂ.ಎನ್. ರಾಜೇಶ್ ಜಾದವ್, ಕೆ. ಗೋಕುಲ್ ಗೋವರ್ಧನ್(ಪ್ರಧಾನ ಕಾರ್ಯದರ್ಶಿ), ಸಂತೋಷ್, ಬಿ.ಕೆ. ಸುರೇಶ್, ಕೆ.ಎನ್. ಚಂದ್ರಶೇಖರ್, ಜಯಸಿಂಹ, ಅನುಸೂಯ, ಕೆ.ಎನ್. ಅರುಣ್(ಕಾರ್ಯದರ್ಶಿ), ಎಸ್. ಪುರುಷೋತ್ತಮ್(ಕೋಶಾಧ್ಯಕ್ಷರು). ಯುವ ಮೋರ್ಚಾ- ಜಯಶಂಕರ್(ಅಧ್ಯಕ್ಷರು), ಎಸ್. ಹೇಮಂತ್(ಪ್ರಧಾನ ಕಾರ್ಯದರ್ಶಿ). ಮಹಿಳಾ ಮೋರ್ಚಾ- ಡಿ.ಸಿ. ಮಂಜುಳ(ಅಧ್ಯಕ್ಷರು), ಅಶ್ವಿನಿ(ಪ್ರಧಾನ ಕಾರ್ಯದರ್ಶಿ), ಎಸ್.ಸಿ. ಮೋರ್ಚಾ- ಟಿ.ಪಿ. ರಮೇಶ್(ಅಧ್ಯಕ್ಷರು), ಶ್ರೀಕಂಠ(ಪ್ರಧಾನ ಕಾರ್ಯದರ್ಶಿ), ಎಸ್ಟಿ ಮೋರ್ಚಾ- ಸುರೇಶ್(ಅಧ್ಯಕ್ಷರು), ಮಂಜುನಾಥ್(ಪ್ರಧಾನ ಕಾರ್ಯದರ್ಶಿ), ಸ್ಲಂ ಮೋರ್ಚಾ- ವೈ. ವೆಂಕಟೇಶ್(ಅಧ್ಯಕ್ಷರು), ಮಂಜುನಾಥ್(ಪ್ರಧಾನ ಕಾರ್ಯದರ್ಶಿ), ಒಬಿಸಿ ಮೋರ್ಚಾ- ಎಸ್.ಕೆ. ಮಂಜುನಾಥ್(ಅಧ್ಯಕ್ಷರು), ದೀಪಕ್(ಪ್ರಧಾನ ಕಾರ್ಯದರ್ಶಿ).
ಬೊಂಬೆ ಸ್ಪರ್ಧೆ; ಬಹುಮಾನ ವಿತರಣೆ
ಕ.ಪ್ರ.ವಾರ್ತೆ , ಮೈಸೂರು , ಅ. 16
ಭಾರತ ವಿಕಾಸ ಪರಿಷದ್ ಮತ್ತು ರಾಮ್ಸನ್ಸ್ ಕಲಾ ಪ್ರತಿಷ್ಠಾನ ಏರ್ಪಡಿಸಿದ್ದ ದಸರಾ ಬೊಂಬೆ ಜೋಡಣೆ ಸ್ಪರ್ಧೆಯ ಎ ಗ್ರೇಡ್ ವಿಭಾಗದಲ್ಲಿ ಗೀತಾ ಶ್ರೀಹರಿ ಪ್ರಥಮ ಬಹುಮಾನ ಪಡೆದರು.
ನಜರ್ಬಾದ್ನ ಬೊಂಬೆ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಲ್ಪ ರಾಜಗೋಪಾಲ್ ದ್ವಿತೀಯ ಬಹುಮಾನ, ಪ್ರಿಯಾಂಕ ತೃತೀಯ ಬಹುಮಾನ ಸುಚೇತ ಸಂಜಯ್ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಬಿ ಗ್ರೇಡ್ ವಿಭಾಗದಲ್ಲಿ ಕೆ. ವಸಂತಿ ಉದಯರಾಜ್ ಅರಸ್ ಪ್ರಥಮ, ಅನಿತ ಅಚ್ಚುತ್ ದ್ವಿತೀಯ, ಗೀತಾ ರಾವ್ ತೃತೀಯ ಮತ್ತು ಸುಧಾ ಪ್ರಸಾದ್ ಸಮಾಧಾನಕರ ಬಹುಮಾನ ಪಡೆದರು. ಸಿ ಗ್ರೇಡ್ ವಿಭಾಗದಲ್ಲಿ ನಾಗವೇಣಿ ಪ್ರಥಮ, ಉಷಾ ದ್ವಿತೀಯ, ಗಣೇಶ್ ರಾಜೇಶ್ವರಿ ತೃತೀಯ ಮತ್ತು ರಾಜೇಶ್ವರಿ ಸಮಾಧಾನಕರ ಬಹುಮಾನ ಪಡೆದುಕೊಂಡರು.
ನೃತ್ಯ ಕಲಾವಿದೆ ವಿದುಷಿ ಕೃಪಾ ಪಡ್ಕೆ ಅವರು ಬಹುಮಾನ ವಿತರಿಸಿ ಮಾತನಾಡಿ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ವೀಳ್ಯದೆಲೆ, ರೇಷ್ಮೆ, ಶ್ರೀಗಂಧದಂತೆಯೆ ಬೊಂಬೆ ಪ್ರದರ್ಶನ ಪ್ರಮುಖವಾಗಿದೆ. ಬೊಂಬೆ ಕೂರಿಸುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಡಿ. ರಾಮಸಿಂಗ್, ಪರಿಷದ್ ಅಧ್ಯಕ್ಷ ಅ.ಚ. ಅಶೋಕಕುಮಾರ್ ಇದ್ದರು.
ಚಾಮರಾಜನಗರ ಜಿಲ್ಲೆಯ ಮಳಿಗೆ ಉದ್ಘಾಟನೆ
ಕ.ಪ್ರ.ವಾರ್ತೆ , ಮೈಸೂರು , ಅ. 16
ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಚಾಮರಾಜನಗರ ಜಿಲ್ಲೆಯ ಸಂಸ್ಕೃತಿ, ಕಲೆ ಹಾಗೂ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ವಸ್ತುಪ್ರದರ್ಶನದ ಮಳಿಗೆಯನ್ನು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸಿದರು.
ಈ ಮಳಿಗೆಯ ಮುಂಭಾಗದಲ್ಲಿ ಈ ಬಾರಿ 16ನೇ ಶತಮಾನದಲ್ಲಿ ನಿರ್ಮಾಣವಾದ ವೈಶಿಷ್ಟ್ಯಪೂರ್ಣವಾದ ಯಳಂದೂರು ತಾಲೂಕಿನಲ್ಲಿರುವ ಬಳೇಮಂಟಪ ನಿರ್ಮಿಸಿದ್ದು, 26 ಅಡಿ ಅಗಲವನ್ನು 16 ಅಡಿ ಎತ್ತರವನ್ನು ಹೊಂದಿದೆ. ನಿರ್ಮಾಣವಾಗಿರುವ ಬಳೇ ಮಂಟಪದಲ್ಲಿ ಸುಮಾರು 160 ಉಬ್ಬು ಚಿತ್ರಗಳಿಂದ ಕಲಾತ್ಮಕವಾಗಿ ನಿರ್ಮಾಣವಾಗಿದೆ. ಇನ್ನುಳಿದಂತೆ ಒಳಭಾಗದಲ್ಲಿ ಬಂಡೀಪುರದ ಅಭಯಾರಣ್ಯ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಹೊಗೇನಕಲ್ ಫಾಲ್ಸ್, ಆದಿವಾಸಿಗಳ ಮನೆ, ಅನ್ನಭಾಗ್ಯ, ಕ್ಷೀರಭಾಗ್ಯ, ಕಿರುನೀರು ಕುಡಿವ ಯೋಜನೆ, ವಸತಿ ಯೋಜನೆ, ಮಳೆನೀರು ಕೊಯ್ಲು ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸಲಾಗಿದೆ.
ಈ ಮಳಿಗೆಯ ನಿರ್ಮಾಣವನ್ನು ನೆಲೆ ಸಂಸ್ಥೆ ನಿರ್ಮಿಸಿದೆ. ವಿನ್ಯಾಸ ಕೆ.ಆರ್. ಗೋಪಾಲಕೃಷ್ಣ, ಕಲೆ ವರುಣ್ ನಿರ್ವಹಿಸಿದ್ದಾರೆ. ಜಿಪಂ ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ಉಪಾಧ್ಯಕ್ಷ ಪಿ. ಮಹದೇವಪ್ಪ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ ಹಾಗೂ ನೋಡಲ್ ಅಧಿಕಾರಿ ಚನ್ನಕೇಶವಯ್ಯ ಭಾಗವಹಿಸಿದ್ದರು.
ಕಿರುಚಿತ್ರಕ್ಕೆ ಮುಹೂರ್ತ
ಕ.ಪ್ರ.ವಾರ್ತೆ , ಹುಣಸೂರು , ಅ. 16
ಆರ್ಸಿಎನ್ ಪ್ರೊಡಕ್ಷನ್ನ ಎರಡನೇ ಕಾಣಿಕೆ ಮುಸ್ಸಂಜೆ ಬದುಕು ಎಂಬ ಕಿರುಚಿತ್ರದ ಮುಹೂರ್ತ ತಾಲೂಕಿನ ಗಾವಡಗೆರೆ ಹೋಬಳಿಯ ಕಟ್ಟೆಮಳಲವಾಡಿ ಗ್ರಾಮದ ಉದ್ಭವ ಕೋಡಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಹುಣಸೂರು ತಾಲೂಕಿನ ಆರ್ಸಿಎನ್ ಮಾಲೀಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಪಿ. ಸಾಯಿನಾಥ್ ಅವರು ನಿರ್ಮಿಸುತ್ತಿರುವ ಈ ಕಿರುಚಿತ್ರದ ಮೊದಲ ದೃಶ್ಯವನ್ನು ಯುವ ನಾಯಕ ನಟ ದರ್ಶನ್ ಹಾಗೂ ನವ ನಾಯಕ ನಟಿ ಸ್ನೇಹಾ ಅಭಿನಯಿಸಿದ ದೃಶ್ಯಕ್ಕೆ ನಿವೃತ್ತ ಪ್ರಾಂಶುಪಾಲರು ಕಸಾಪ ಕೋಶಾಧ್ಯಕ್ಷ ಮೋದೂರು ಮಹೇಶಾರಾಧ್ಯ ಕ್ಲಾಪ್ ಮಾಡಿದರು.
ನಿರ್ಮಾಪಕ ವಿ.ಪಿ. ಸಾಯಿನಾಥ್ ಮಾತನಾಡಿದರು. ಹುಣಸೂರಿನ ರಂಗ ಭೂಮಿಯ ಹಿರಿಯ ಕಲಾವಿದ ನಾರಾಯಣ್ ರೈ ಕ್ಯಾಮರಾ ಚಾಲನೆ ನೀಡಿ, ಮಾತನಾಡಿದರು. ತಾರಾಗಣದಲ್ಲಿ ಕಲಾವಿದರಾದ ರಾಮು ಲೋಕೇಶ್ ಬಾಬು, ನಾಗೇಂದ್ರ, ನಟೇಶ್, ನಾರಾಯಣ ರೈ, ಉದಯ್, ನಾಗರತ್ನಮ್ಮ ಅಭಿನಯಿಸುವರು.
ಹುಣಸೂರು ತಾಲೂಕು ಕಸಾಪ ಕಾರ್ಯದರ್ಶಿ ಸೋಮಶೇಖರ್, ಮಹದೇವ್, ಹರೀಶ್, ಕಾವ್ಯ ಹರೀಶ್, ತನ್ವೀರ್ ಭಾಗವಹಿಸಿ, ಶುಭ ಕೋರಿದರು.