ಕ್ಯಾಪ್ಟನ್ ಅರ್ಜುನ ತೂಕ ಇಳಿಕೆ
ವಿಶೇಷ ವರದಿ
ಕ.ಪ್ರ.ವಾರ್ತೆ , ಮೈಸೂರು , ಅ. 16
ಕಳೆದ ವರ್ಷದಿಂದ ಜಂಬೂಸವಾರಿಯಲ್ಲಿ ಬಲರಾಮ- ಅರ್ಜುನರ ಪಾತ್ರಗಳು ಅದಲು- ಬದಲಾಗಿವೆ. ಅರ್ಜುನ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಕೊನೆಯಲ್ಲಿ ಸಾಗಿದರೆ, ಬಲರಾಮ ನಿಶಾನೆಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗುತ್ತಿದ್ದಾನೆ. ಈಗ ತೂಕದಲ್ಲೂ ಸಹ ಅವರ ಪಾತ್ರಗಳು ಅದಲು-ಬದಲು.
ಏಕೆಂದರೆ ಈವರೆಗೆ ತೂಕ ಹೆಚ್ಚಳದಲ್ಲಿ ಅರ್ಜುನನೇ ಬಲಶಾಲಿ. ಆತ 'ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮವಾ...' ಎಂದು ಎಲ್ಲರಿಗೂ ಸವಾಲು ಹಾಕುತ್ತಿದ್ದ. ಆದರೆ ಈ ಬಾರಿ ಬಲರಾಮನೇ ಬಲಭೀಮ. ಪ್ರತಿ ಬಾರಿ ದಸರೆಗೆ ಬಂದಾಗಲೂ ಆನೆಗಳಿಗೆ ರಾಜಾತಿಥ್ಯ. ಹೀಗಾಗಿ ನಾಡಿನಿಂದ ಕಾಡಿಗೆ ಮರಳುವುದರೊಳಗೆ ಅರ್ಜುನ ಭಾರಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದ. ಆದರೆ ಕ್ಯಾಪ್ಟನ್ ಅರ್ಥಾತ್ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಹೊಣೆ ವಹಿಸಿಕೊಂಡ ಮೇಲೆ ಅರ್ಜುನ ತೂಕ ಹೆಚ್ಚಳದಲ್ಲಿ ಮಾಜಿ ಕ್ಯಾಪ್ಟನ್ ಬಲರಾಮನಿಗಿಂತ ಹಿಂದೆ ಬಿದ್ದಿದ್ದಾನೆ.
2010ರಲ್ಲಿ ಅರ್ಜುನ ಮೈಸೂರಿಗೆ ಬಂದಾಗ 4,040 ಕೆ.ಜಿ. ತೂಗುತ್ತಿದ್ದ, ಹೋಗಬೇಕಾದರೆ 4,541 ಕೆ.ಜಿ. ಆಗಿದ್ದ. 2011ರಲ್ಲಿ ಬಂದಾಗ 4575 ಕೆ.ಜಿ. ಇದ್ದ, ಹೋಗಬೇಕಾದರೆ 5,055 ಕೆ.ಜಿ. ಆಗಿದ್ದ. 2012ರಲ್ಲಿ ಮೈಸೂರಿಗೆ ಬಂದಾಗ 5080 ಕೆ.ಜಿ. ಇದ್ದ, ಹೋಗಬೇಕಾದರೆ 5,520 ಕೆ.ಜಿ. ಆದ. ಈ ಬಾರಿ ದಸರೆಗೆ ಬಂದಾಗ 5,535 ಕೆ.ಜಿ. ಇದ್ದ, ಹೋಗಬೇಕಾದರೆ 5,810 ಕೆ.ಜಿ. ಇದ್ದಾನೆ. ಮೂರು ವರ್ಷಗಳಲ್ಲಿ 1,120 ಕೆ.ಜಿ. ಹೆಚ್ಚಾಗಿದ್ದಾನೆ. ಸರಾಸರಿ ಪ್ರತಿವರ್ಷ 500 ಕೆ.ಜಿ. ಹೆಚ್ಚಾಗಿದ್ದಾನೆ. ಆದರೆ ಈ ವರ್ಷ ಆತನ ಹೆಚ್ಚಳ 275 ಕೆ.ಜಿ. ಮಾತ್ರ.
ದ್ರೋಣನ ನಂತರ ಸತತ 14 ಬಾರಿ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಸಾಗಿರುವ ದಾಖಲೆ ಹೊಂದಿರುವ ಬಲರಾಮ 2010ರಲ್ಲಿ ಮೈಸೂರಿಗೆ ಬರುವ ಮುನ್ನ 4420 ಕೆ.ಜಿ. ಇದ್ದ, ಮೈಸೂರಿನಿಂದ ಹೋಗಬೇಕಾದರೆ 4,550 ಕೆ.ಜಿ. ಆಗಿದ್ದ. 2011ರಲ್ಲಿ ಮೈಸೂರಿಗೆ ಬರಬೇಕಾದರೆ 4,500 ಕೆ.ಜಿ. ಇದ್ದ, ಹೋಗಬೇಕಾದರೆ 4,610 ಕೆ.ಜಿ. ಆದ. 2012ರಲ್ಲಿ ಮೈಸೂರಿಗೆ ಬರಬೇಕಾದರೆ 4400 ಕೆ.ಜಿ. ಇದ್ದ, ಹೋಗಬೇಕಾದರೆ 4,535 ಕೆ.ಜಿ. ಆದ. ಈ ಬಾರಿ ಮೈಸೂರಿಗೆ ಬಂದಾಗ 4630 ಕೆ.ಜಿ. ಇದ್ದ, ಹೋಗಬೇಕಾದರೆ 5,295 ಕೆ.ಜಿ. ಆಗಿದ್ದಾನೆ.
ಒಟ್ಟು 3 ವರ್ಷಗಳಲ್ಲಿ 720 ಕೆ.ಜಿ. ಹೆಚ್ಚಾಗಿದ್ದಾನೆ. ಸರಾಸರಿ 150ರಿಂದ 200 ಕೆ.ಜಿ. ಹೆಚ್ಚಾಗಿದ್ದಾನೆ. ಆದರೆ ಈ ವರ್ಷ 665 ಕೆ.ಜಿ. ಹೆಚ್ಚಾಗಿದ್ದಾನೆ.
ಪ್ರತಿವರ್ಷ ಬಲರಾಮ ಅತ್ಯಂತ ಕಡಿಮೆ ತೂಕ ಹೆಚ್ಚಿಸಿಕೊಳ್ಳುವ ಆನೆಯಾಗಿರುತ್ತಿದ್ದ, ಅರ್ಜುನ ಭಾರಿ ತೂಕ ಹೆಚ್ಚಿಸಿಕೊಂಡ ಆನೆ ಆಗುತ್ತಿದ್ದ. ಈ ವರ್ಷ ಬಲರಾಮ ಟಾಪ್ ಒನ್, ಅರ್ಜುನ ಕೊನೆ.