ದಸರಾ; ಗೋಪುರ ಕುಸಿದು ಮಹಿಳೆಗೆ ಗಾಯ
ಕ.ಪ್ರ.ವಾರ್ತೆ , ಮೈಸೂರು , ಅ. 16
ದಸರಾ ವೀಕ್ಷಣೆಗಾಗಿ ತೆರಳಿದ್ದ ಮಹಿಳೆಯ ಮೇಲೆ ಕಾವೇರಿ ಎಂಪೋರಿಯಂ ಕಟ್ಟಡದ ಮೇಲಿನ ಗೋಪುರ ಕುಸಿದು ಬಿದ್ದು ಶ್ವಾಸಕೋಶಕ್ಕೆ ಪೆಟ್ಟಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾವೇರಿ ಎಂಪೋರಿಯಂ ಮುಂದೆ ಹಾಕಲಾಗಿದ್ದ ಕುರ್ಚಿಗಳಲ್ಲಿ ಶ್ರುತಿ ಎಂಬವರು ಕುಳಿತಿದ್ದರು. ಈ ವೇಳೆ ಯಾರೋ ಸಾರ್ವಜನಿಕರು ದಸರಾ ವೀಕ್ಷಣೆಗೆ ಕಟ್ಟಡದ ಮೇಲೆ ಏರುವಾಗ ಗೋಪುರ ಕುಸಿದು ಕೆಳಗೆ ಬಿದ್ದು, ಶ್ರುತಿ ಅವರ ಬಲಗೈ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಪೆಟ್ಟಾಯಿತು. ಕೂಡಲೆ ಅವರನ್ನು ಸಮೀಪದ ಕೆ.ಆರ್. ಆಸ್ಪತ್ರೆ ಮತ್ತು ಮಿಷನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಸೌಲಭ್ಯದ ಕೊರತೆ ಇದೆ ಎಂಬ ಕಾರಣಕ್ಕೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ವಾಸಕೋಶದ ನರ ತುಂಡಾಗಿರುವುದರಿಂದ ಹೊಟ್ಟೆಯಲ್ಲಿ ರಕ್ತಸ್ರಾವವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ಶ್ರುತಿ ಅವರ ಬಲಗೈ ಸ್ವಾಧೀನ ಕಳೆದುಕೊಂಡಿದೆ ಎಂದು ಪತಿ ನಾಗೇಂದ್ರ ತಿಳಿಸಿದ್ದಾರೆ.
ಬಡತನದಲ್ಲಿ ಜೀವನ ನಡೆಸುತ್ತಿರುವ ದಂಪತಿ ಈಗ ಜಿಲ್ಲಾಡಳಿತದ ನೆರವು ಕೋರಿದ್ದಾರೆ. ನಾಗೇಂದ್ರ ಅವರ ಮೊ. 99009 34431.
ಬೈಕ್ ಡಿಕ್ಕಿ; ಸೈಕಲ್ ಸವಾರ ಸಾವು
ಕ.ಪ್ರ.ವಾರ್ತೆ , ಮೈಸೂರು , ಅ. 16
ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿನಕಲ್ ವರ್ತುಲ ರಸ್ತೆ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ಹತ್ತಿರ ಬುಧವಾರ ಸಂಜೆ ನಡೆದಿದೆ. ಹುಣಸೂರು ರಸ್ತೆಯಲ್ಲಿರುವ ಯಶಸ್ವಿನಿ ಚೌಲ್ಟ್ರಿ ಹಿಂಭಾಗದ ನಿವಾಸಿ ಪುಟ್ಟೇಗೌಡ ಎಂಬವರ ಪುತ್ರ ಸಿದ್ದೇಗೌಡ(60) ಮೃತಪಟ್ಟವರು. ಇವರು ಗಾರೆ ಕೆಲಸ ಮಾಡಿಕೊಂಡಿದ್ದು, ಸೈಕಲ್ನಲ್ಲಿ ಹಿನಕಲ್ಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಪಲ್ಸರ್ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಹಾಗೂ ಹೂಟಗಳ್ಳಿ ನಿವಾಸಿ ಕಾರ್ತಿಕ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆ ಎಸ್ಐ ಡಿ. ಯೋಗೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರು-ಬೈಕ್ ಡಿಕ್ಕಿ; 8 ಮಂದಿಗೆ ಗಾಯ
ಮೈಸೂರು: ಮುಂದೆ ಹೋಗುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿ 8 ಮಂದಿ ಗಾಯಗೊಂಡಿರುವ ಘಟನೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಎದುರು ಬುಧವಾರ ಸಂಜೆ ನಡೆದಿದೆ. ಬೆಂಗಳೂರು ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಈ ಅಪಘಾತದಲ್ಲಿ ಬೈಕಿನಲ್ಲಿದ್ದ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಕಾರಿನಲ್ಲಿದ್ದ ನಾಲ್ವರು ಸೇರಿ 8 ಮಂದಿ ಗಾಯಗೊಂಡಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಎನ್.ಆರ್. ಸಂಚಾರ ಠಾಣೆ ಎಸ್ಐ ಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.