'ಪಿಯು ಉಪನ್ಯಾಸಕರ ಸಮಸ್ಯೆ ಬಗೆಹರಿಸಿ'
ಕ.ಪ್ರ.ವಾರ್ತೆ , ಮೈಸೂರು , ಅ. 16
ಕರ್ನಾಟಕ ಲೋಕಸೇವಾ ಆಯೋಗವು ಸಿಇಟಿ ಮೂಲಕ 2009ರಲ್ಲಿ ನೇಮಕಾತಿ ಮಾಡಿಕೊಂಡ ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕೂಡಲೇ ಪರಿಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೊಂದ ಉಪನ್ಯಾಸಕರು ಮನವಿ ಸಲ್ಲಿಸಿದ್ದಾರೆ.
ಕೆಸಿಎಸ್ಆರ್ ಪ್ರಕಾರ 2011 ಸೆಪ್ಟಂಬರ್ ತಿಂಗಳಿಗೆ ನಮ್ಮ ಪ್ರೊಬೆಷನರಿ ಅವಧಿ ತೃಪ್ತಿಕರವಾಗಿ ಮುಗಿದಿದೆ. ಆದರೆ ಇಲಾಖೆಯು ನಮ್ಮ ಪ್ರೊಬೆಷನರಿ ಅವಧಿಯನ್ನು ತೃಪ್ತಿಕರ ಎಂದು ಇದುವರೆವಿಗೂ ಘೋಷಿಸಿಲ್ಲ. ಹಾಗಾಗಿ ನಾವು ನಾಲ್ಕು ವರ್ಷಗಳಿಂದ ವಾರ್ಷಿಕ ಬಡ್ತಿ ತಡೆ, ವರ್ಗಾಣೆಗೆ ಅವಕಾಶದಿಂದ ವಂಚಿತರಾಗಿದ್ದೇವೆ. ಉಪನ್ಯಾಸಕರು ಆಕಸ್ಮಿಕ ಮರಣ ಹೊಂದಿ ಅವರ ಕುಟುಂಬಗಳು ಕನಿಷ್ಠ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಂಡ ಮೊದಲ ತಂಡ ನಮ್ಮದಾಗಿದ್ದು, ತಂಡದ ಶೇ.80ರಷ್ಟು ಸ್ನಾತಕೋತ್ತರ ಪದವಿಯ ಜತೆ ಪಿಎಚ್ಡಿ, ಎಂಫಿಲ್, ನೆಟ್, ಸ್ಲೆಟ್ ಮೊದಲಾದ ಉನ್ನತ ಶಿಕ್ಷಣ ಪಡೆದವರಿದ್ದಾರೆ. ಇಲಾಖೆಯು ನೇಮಕಾತಿ ಆದೇಶದಲ್ಲಿ ಸೇವೆಗೆ ಸೇರಿದ ನಾಲ್ಕು ವರ್ಷದೊಳಗೆ ಉಪನ್ಯಾಸಕರು ಬಿಇಡಿ ಪದವಿ ಪಡೆಯಬೇಕೆಂಬ ಅವೈಜ್ಞಾನಿಕ ಷರತ್ತನ್ನು ವಿಧಿಸಲಾಗಿದೆ. ಅಧಿಸೂಚನೆ ಇಲ್ಲದೆ ಷರತ್ತು ವಿಧಿಸಿದ ಈ ಆದೇಶವನ್ನು ಮುಂದಿಟ್ಟುಕೊಂಡು ಪ್ರೊಬೆಷನರಿ ಅವಧಿಯ ಘೋಷಣೆ ತಡೆಹಿಡಿದು ನಮ್ಮನ್ನು ಅಭದ್ರತೆಯ ಕೂಪಕ್ಕೆ ತಳ್ಳಿಹಾಕಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಉಪನ್ಯಾಸಕರ ಪ್ರೊಬೆಷನರಿ ಘೋಷಣೆ ಹೊರಡಿಸುವುದು, 90 ದಿನಗಳ ಇಂಡಕ್ಷನ್ ತರಬೇತಿಗೆ ಒಲವು ತೋರುವ ಸಂಬಂಧ ಉನ್ನತ ಶಿಕ್ಷಣ ಸಚಿವರೊಂದಿಗೆ ಹಾಗೂ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರಿಂದ ಸೂಚನೆ ಕೊಡಿಸಲು ಒತ್ತಾಯಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಚರ್ಚಿಸಲು ಅ.21ರಂದು ಉಪನ್ಯಾಸಕರ ಸಭೆ ಏರ್ಪಡಿಸಿದ್ದು, ರಾಜ್ಯದ ವಿವಿಧೆಡೆ ಇರುವ 2009ರ ನೇಮಕಾತಿ ತಂಡದ ಉಪನ್ಯಾಸಕರು ಭಾಗವಹಿಸುವಂತೆ ಕೋರಲಾಗಿದೆ.