ಬೌದ್ಧ ಧರ್ಮ ಸ್ವೀಕರಿಸಿದ್ದರೆ ಆಡಳಿತ ಚುಕ್ಕಾಣಿ
ಕ.ಪ್ರ.ವಾರ್ತೆ , ಟಿ.ನರಸೀಪುರ , ಅ. 16
ದೇಶದಲ್ಲಿರುವ ದಲಿತ ಸಮುದಾಯಗಳು ಬೌದ್ಧ ಧರ್ಮವನ್ನು ಸಾಮೂಹಿಕವಾಗಿ ಸ್ವೀಕಾರ ಮಾಡಿ, ಒಂದೇ ಧರ್ಮದಡಿ ಒಗ್ಗೂಡಿದ್ದರೆ ದೇಶದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬಹುದಿತ್ತು ಎಂದು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಹೇಳಿದರು. ತ್ರಿವೇಣಿ ನಗರದಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯ ಧಮ್ಮ ವಿಜಯ ಮತ್ತು ಅಂಬ್ಕೇಡರ್ ಅವರ ಧಮ್ಮ ಪರಿವರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಬುದ್ಧ ಧರ್ಮದ ನೀತಿಗಳನ್ನು ಪಾಲಿಸಿಕೊಂಡು ಬಂದಿದ್ದರೆ ದೇಶವನ್ನು ಆಳುತ್ತಿದ್ದೆವು ಎಂದು ತಿಳಿಸಿದರು.
ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಮಾತನಾಡಿ, ಸಾಮ್ರಾಟ ಅಶೋಕ ಚಕ್ರವರ್ತಿ ಕಳಿಂಗ ಯದ್ಧದಲ್ಲಿನ ಸಾವು ನೋವನ್ನು ನೋಡಿ ಶಾಂತಿಯತೆಯ ಪರಿಕಲ್ಪನೆಯೊಂದಿಗೆ ಖಡ್ಗವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ರಾಜಧರ್ಮವನ್ನಾಗಿ ಸ್ವೀಕರಿಸುತ್ತಾರೆ. ನಂತರ ಇಡೀ ಜಗತ್ತಿಗೆ ಬೌದ್ಧ ಧರ್ಮದ ಸಂದೇಶವನ್ನು ಸಾರುವ ದಿನವನ್ನೆ ಧಮ್ಮ ವಿಜಯವೆಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ನಾಗಯ್ಯ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಚಿನ್ನಸ್ವಾಮಿ, ತಾಪಂ ಸದಸ್ಯ ಬಸವರಾಜು, ಗ್ರಾಪಂ ಸದಸ್ಯ ಎಂ. ಮಿಥುನ್, ವಕೀಲ ಮೂರ್ತಿ ಇದ್ದರು.
ಉಪ್ಪಾರರಿಗೆ ಮನೆ ನಿರ್ಮಿಸಿಕೊಡಲು ಮನವಿ
ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದವರು ಅಧಿಕ ಸಂಖ್ಯೆಯಲ್ಲಿದ್ದು, ಅವರಲ್ಲಿ ಕೆಲವರು ತೀರಾ ಬಡತನದಿಂದ ಬಳಲುತ್ತಿದ್ದಾರೆ. ಇನ್ನೂ ಗುಡಿಸಲಿನಲ್ಲಿ ವಾಸಿಸುತ್ತಿರುವ ಉಪ್ಪಾರರಿಗೆ ಮನೆ ನಿರ್ಮಿಸಿಕೊಡುವಂತೆ ಉಪ್ಪಾರ ಸಮಾಜ ಪರಿವರ್ತನಾ ಸಮಿತಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮಂಗಳವಾರ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ವರುಣ ಕ್ಷೇತ್ರದ ಮತದಾರರ ಕೃತಜ್ಞತೆ ಸಮಾವೇಶದಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು.ಗುಡಿಸಲು ಮುಕ್ತ ಸಮಾಜ ನಿರ್ಮಾಣದ ಭರವಸೆ ನೀಡುವ ತಾವು ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಅನೇಕ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅವರಿಗೆ ಮನೆ ನಿರ್ಮಿಸಿಕೊಡುವಂತೆ ಸಮಿತಿಯ ಕೆ.ಎನ್. ಲಿಂಗಪ್ಪ ಮನವಿ ಮಾಡಿದರು.
ಎಸ್ಜೆಎಸ್ವೈ ತರಬೇತಿ
ಎಚ್.ಡಿ. ಕೋಟೆ: ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ನಗರ ಸ್ವಯಂ ಉದ್ಯೋಗ ಯೋಜನೆ ಹಾಗೂ ನಗರ ಮಹಿಳಾ ಸ್ವಯಂ ಉದ್ಯೋಗ ಕಾರ್ಯಕ್ರಮಕ್ಕಾಗಿ 2013-14 ನೇ ಸಾಲಿನಲ್ಲಿ ಪಪಂ ಸರಗೂರು ವ್ಯಾಪ್ತಿಯ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ಯಾಂಡಲ್, ಸೋಪ್, ಫೆನಾಯಿಲ್ ತಯಾರಿಕೆ, ಕಂಪ್ಯೂಟರ್, ಎಂಎಸ್ ಆಫೀಸ್, ಇಂಟರ್ನೆಟ್, ಡಿಟಿಪಿ, ಅಕೌಂಟಿಂಗ್, ಟ್ಯಾಲಿ, ಸಾಫ್ಟ್ ಸ್ಕಿಲ್, ಸ್ಪೋಕನ್ ಇಂಗ್ಲಿಷ್, ಕಮ್ಯುನಿಕೇಷನ್ ಸ್ಕಿಲ್, ಬ್ಯೂಟಿಷಿಯನ್ ತರಬೇತಿ, ಲಘು ವಾಹನ ಚಾಲನ ತರಬೇತಿ, ಹಾಗೂ ಭಾರಿ ವಾಹನ ಚಾಲನ ತರಬೇತಿ ನೀಡಲು ಆಯೋಜಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿಯನ್ನು ಸರಗೂರು ಪಪಂನಿಂದ ಉಚಿತವಾಗಿ ಪಡೆದು ಅಗತ್ಯ ದಾಖಲಾತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅ.25ರ ಸಂಜೆ 4ರೊಳಗೆ ಸಲ್ಲಿಸಬೇಕು. ಸರಗೂರು ಪಟ್ಟಣ ವ್ಯಾಪ್ತಿಯಲ್ಲಿ ಬಿಪಿಎಲ್ ಕುಟುಂಬದ ನಿರುದ್ಯೋಗಿಯಾಗಿರಬೇಕು, 18 ವರ್ಷದಿಂದ 30 ವರ್ಷ ಒಳಗಿರಬೇಕು. ಜಾತಿ ಮತ್ತು ಚಾಲ್ತಿಯಲ್ಲಿನ ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು(ವಾರ್ಷಿಕ ಆದಾಯ 23,124 ರು. ಒಳಗಿರಬೇಕು). ಫೋಟೋ-4, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಲಗತ್ತಿಸಬೇಕು. ವಾಸಸ್ಥಳ ದೃಢೀಕರಣ ಪತ್ರ ಲಗತ್ತಿಸಬೇಕು. ವಿವರಕ್ಕೆ ಟಿ. ಕೆಂಪದಾಸಯ್ಯ ಸಮುದಾಯ ಸಂಘಟನಾಧಿಕಾರಿ ಮೊ. 92424 16756 ಸಂಪರ್ಕಿಸಬಹುದು.
ಶರಣ ಸಾಹಿತ್ಯ ಪರಿಷತ್ಗೆ ಆಯ್ಕೆ
ಎಚ್.ಡಿ. ಕೋಟೆ: ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಾಗಿ ಕುಮಾರಸ್ವಾಮಿ(ಅಧ್ಯಕ್ಷ), ಚಂದ್ರಮೌಳೇಶ್ವರ ಸ್ವಾಮೀಜಿ, ಪಡವಲು ವಿರಕ್ತ ಮಠದ ಮಹದೇವ ಸ್ವಾಮೀಜಿ(ಗೌರವಾಧ್ಯಕ್ಷರು), ಮಹದೇವಸ್ವಾಮಿ, ಗಿರೀಶ್ಮೂರ್ತಿ(ಉಪಾಧ್ಯಕ್ಷರು), ಗುರುಸ್ವಾಮಿ(ಕಾರ್ಯದರ್ಶಿ), ವಿಶ್ವನಾಥ್(ಸಹ ಕಾರ್ಯದರ್ಶಿ), ಮಹದೇವಸ್ವಾಮಿ(ಖಜಾಂಚಿ) ಹಾಗೂ ಮಹಿಳಾ ಸಂಚಾಲಕರನ್ನಾಗಿ ಮಹದೇವಮ್ಮ, ಮಂಗಳಗೌರಿ, ಸುಧಾಮಣಿ, ಜಗದಾಂಬ(ಮಹಿಳಾ ಸಂಚಾಲಕರು), ರವಿಕುಮಾರ್, ನಾಗೇಶ್(ಮಾಧ್ಯಮ ಸಲಹೆಗಾರರು) ನೇಮಕಗೊಂಡಿದ್ದಾರೆ.
ಸಾವಿನ ಬಗ್ಗೆ ಶಂಕೆ
ಎಚ್.ಡಿ. ಕೋಟೆ: ತಾಲೂಕು ಗುಡುಮಾರನಹಳ್ಳಿ ಸೇತುವೆ ಬಳಿಯ ಕಾಲುವೆಯಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಮೃತನ ತಮ್ಮ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ತಾಲೂಕಿನ ಮಲಾರ ಕಾಲೋನಿಯ ಲೇ. ಜವರಯ್ಯ ಎಂಬವರ ಪುತ್ರ ಶಿವಣ್ಣ(46) ಮೃತಪಟ್ಟ ವ್ಯಕ್ತಿ. ತಮ್ಮ ಚಂದ್ರಶೇಖರ್ ಮೂರ್ತಿ ಶಿವಣ್ಣನು ಅಪಘಾತದಲ್ಲಿ ಮೃತಪಟ್ಟಿಲ್ಲ, ಆತನನ್ನು ತಾಲೂಕು ಕೋಡಸೀಗೆ ಗ್ರಾಮದ ಶಿವಲಿಂಗೇಗೌಡರು ಶಿವಣ್ಣನನ್ನು ಕೊಲೆ ಮಾಡಿರುವುದಾಗಿ ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೊಡಸೀಗೆ ಗ್ರಾಮದ ಶಿವಲಿಂಗೇಗೌಡ ಹಾಗೂ ಶಿವಣ್ಣ ಅವರ ಕುಟುಂಬದ ನಡುವೆ ಕಳೆದ 10 ವರ್ಷದಿಂದಲೂ ಜಮೀನು ವಿಚಾರದಲ್ಲಿ ಗಲಾಟೆಯು ನಡೆಯುತ್ತಿದ್ದು, ಶಿವಲಿಂಗೇಗೌಡರು ಶಿವಣ್ಣನನ್ನು ಹತ್ಯೆ ಮಾಡಿದ್ದಾರೆ ಆದ್ದರಿಂದ ಕೂಲೆ ಆರೋಪಿಯನ್ನು ಬಂಧಿಸುವಂತೆ ಕುಟುಂಬ ವರ್ಗದವರು ಒತ್ತಾಯಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.