ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಮಾನತೆ ಹೆಸರಲ್ಲಿ ಸ್ವೇಚ್ಛಾಚಾರ'

Vishwanath S
Updated On : 17 Oct 2013, 12:25 pm

ಕ.ಪ್ರ.ವಾರ್ತೆ , ಮೈಸೂರು , ಅ. 16
ಸಮಾನತೆಯ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರ ಮಹಿಳೆಯರನ್ನು ಅಧೋಗತಿಗೆ ಕೊಂಡೊಯ್ಯುತ್ತದೆ ಎಂದು ಲೇಖಕ ಡಿ.ಎನ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಾಗನವ ಕಲಾ ಸಾಹಿತ್ಯ ವೇದಿಕೆಯು ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ದಸರಾ ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಯಾರೊ ಒಂದಿಬ್ಬರು ಪುರುಷರು ಮಾಡಿದ ತಪ್ಪಿಗೆ ಕೆಲವು ಮಹಿಳಾ ಸಂಘಟನೆಗಳು ಇಡೀ ಪುರುಷ ಸಮಾಜವನ್ನೆ ದೂಷಿಸುವುದು ಸರಿಯಲ್ಲ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸಂಸಾರದ ಜವಾಬ್ದಾರಿ ವಹಿಸಿಕೊಳ್ಳುವುದು ಮಹಿಳೆಯರೆ. ಅಲ್ಲಿ ಮಹಿಳೆಯರ ನಿರ್ಧಾರಗಳೆ ಅಂತಿಮ. ಆದರೆ ಎಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿರುತ್ತದೆಯೊ ಅಲ್ಲಿ ಸಮಾನತೆಯ ಹೆಸರಿನಲ್ಲಿ ಸ್ವೇಚ್ಛಾಚಾರ ನಡೆಯುತ್ತದೆ. ಇದು ಮಹಿಳೆಯರ ಅಧೋಗತಿಗೆ ಕಾರಣವಾಗುತ್ತಿದೆ ಎಂದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಯಾರಿಗೂ ಕಡಿಮೆ ಇಲ್ಲ. ಹೀಗಿರುವಾಗ ಸಮಾನತೆಯನ್ನು ಪುರುಷರಿಂದ ಕಿತ್ತುಕೊಳ್ಳುವ ಅಗತ್ಯವೂ ಇಲ್ಲ. ಮಹಿಳೆಯರು ಕಾವ್ಯ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಆ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಬೇಕು. ಸಾಮಾಜಿಕ ಬದ್ಧತೆಯೊಂದಿಗೆ ಕಾವ್ಯ ರಚನೆ ಮಾಡಬೇಕು. ಕೇವಲ ಕವನ ವಾಚಿಸಿ ಮನೆಯಲ್ಲಿಯೆ ಇರಿಸಿಕೊಳ್ಳಬಾರದು. ಪುಸ್ತಕ ರೂಪದಲ್ಲಿ ಹೊರ ತರಬೇಕು ಎಂದು ಅವರು ಹೇಳಿದರು. ಈಗ ಪ್ರಕಾಶನ ಸಂಸ್ಥೆಗಳು ವ್ಯಾಪಾರೀಕರಣಕ್ಕೆ ವಾಲಿವೆ. ದೊಡ್ಡ ದೊಡ್ಡ ಸಾಹಿತಿಗಳಿಗೆ ಟೋಪಿ ಹಾಕುವ ಪ್ರಕಾಶಕರೂ ಇದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ತಮ್ಮದೆ ಪ್ರಕಾಶನವಾದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಸುಮಾರು 30ಕ್ಕೂ ಹೆಚ್ಚು ಮಂದಿ ಕವನ ವಾಚಿಸಿದರು. ಲೇಖಕಿ ನಾಗಲಕ್ಷ್ಮಿ ಹರಿಹರೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ. ರಘುರಾಂ, ಎಂಜಿನಿಯರ್ ಸಂಸ್ಥೆ ಅಧ್ಯಕ್ಷ ಟಿ. ಅನಂತಪದ್ಮನಾಭ, ಸಂಸ್ಕೃತ ಪ್ರಾಧ್ಯಾಪಕಿ ಕಮಲಾ ಜೈನ್, ಲೇಖಕಿ ಶಾಮಲಾಮೂರ್ತಿ, ವೇದಿಕೆ ಅಧ್ಯಕ್ಷ ಹೊಮ್ಮ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement