ಜಯಂತಿ ಅರ್ಥಪೂರ್ಣವಾಗುತ್ತಿಲ್ಲ
ಕ.ಪ್ರ.ವಾರ್ತೆ , ಮೈಸೂರು , ಅ. 18
ಇಂದು ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿಲ್ಲ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಮೈಸೂರು ನಗರ ಜೆಡಿಎಸ್ ವತಿಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರ್ಕಾರ ಮಹನೀಯರ ಜಯಂತಿ ಆಚರಣೆಗಾಗಿ ರಜೆ ಘೋಷಿಸಿದೆ. ಆದರೆ ಈ ರಜಾ ದಿನಗಳು ಅಧಿಕಾರಿ ವರ್ಗಕ್ಕೆ ಮೋಜು ಮಾಡುವ ಮಜಾ ದಿನವಾಗಿದ್ದು, ಕುಟುಂಬದೊಂದಿಗೆ ಪಿಕ್‌ನಿಕ್‌ಗೆ ಹೋಗುವುದನ್ನು ಕಾಣಬಹುದು. ಇಲ್ಲಿನ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಎಷ್ಟು ಅಧಿಕಾರಿಗಳು ಇಂತಹ ಜಯಂತಿಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳು ಜಯಂತಿ ಆಚರಿಸಿರುವ ಬಗ್ಗೆ ವರದಿಯನ್ನೂ ಹಾಗೂ ಜಯಂತಿ ಆಚರಣೆಯಲ್ಲಿ ಎಷ್ಟು ಮಂದಿ ಸಿಬ್ಬಂದಿ ಭಾಗವಹಿಸಿದ್ದರು ಎಂಬುವ ವರದಿಯನ್ನು ತರಸಿಕೊಂಡು ಅರ್ಥಪೂರ್ಣ ಜಯಂತಿ ಆಚರಣೆಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದರು.
ಇಂತಹ ಜಯಂತಿಗಳು ಅಧಿಕಾರಿಗಳಿಗೆ ಒಂದು ರೀತಿಯ ಉಪಯೋಗವಾದರೆ, ರಾಜಕಾರಣಿಗಳಿಗೆ ಮತ್ತೊಂದು ರೀತಿಯ ಉಪಯೋಗಕ್ಕೆ ಬರಲಿದೆ. ಆಯಾಯ ಜನಾಂಗದ ಮಹನೀಯರ ಜಯಂತಿಯನ್ನು ತಮ್ಮ ಪಕ್ಷದ ಹಾಗೂ ವೈಯಕ್ತಿಕ ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ವೇದಿಕೆಗಳಲ್ಲಿ ಭಾಗವಹಿಸುವ ಮೂಲಕ ಸಮುದಾಯದ ಗಮನ ಸೆಳೆಯುವವರ ಸಂಖ್ಯೆ ಹೆಚ್ಚಾಗಿ ಕಾಣಬಹುದು ಎಂದು ಅವರು ಹೇಳಿದರು.
ಬೇಟೆಯಾಡಿ ಬದುಕುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಪರಿವರ್ತನೆ ಹೊಂದುವ ಮೂಲಕ ಮಹಾಕಾವ್ಯ ರಚಿಸಿ, ಅದರ ಮುಖೇನ ಜಗತ್ತಿಗೆ ತತ್ವ, ಸಂದೇಶಗಳನ್ನು ಸಾರಿದರು. ಹುಟ್ಟುವಾಗ ಯಾರೂ ಸಹ ಮಹಾನ್ ವ್ಯಕ್ತಿಯಾಗಿರುವುದಿಲ್ಲ. ನಂತರ ತಮ್ಮ ನಡುವಿಳಿಕೆ ಹಾಗೂ ಸಾಧನೆಯಿಂದ ಅದ್ಭುತ ಕೊಡುಗೆ ನೀಡುತ್ತಾರೆ. ಅಂಥವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಎನ್.ಎಂ. ರಾಜೇಶ್ವರಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಸ್.ಬಿ.ಎಂ. ಮಂಜು, ಉಪ ಮೇಯರ್ ವಿ. ಶೈಲೇಂದ್ರ, ಪಾಲಿಕೆ ಸದಸ್ಯರಾದ ಕೆ.ಟಿ. ಚೆಲುವೇಗೌಡ, ಆರ್. ಲಿಂಗಪ್ಪ, ಕೆ.ವಿ. ಮಲ್ಲೇಶ್, ಶಿವಣ್ಣ, ಮಹದೇವಪ್ಪ, ನಟರಾಜು, ಬಾಲು ಹಾಗೂ ಮಹಿಳಾ ನಗರಾಧ್ಯಕ್ಷೆ ಪ್ರೇಮಾ ಶಂಕರೇಗೌಡ ಇದ್ದರು.
ಪಾಲಿಕೆ ನೌಕರರಿಂದ ಆಚರಣೆ
ಮೈಸೂರು: ಪಾಲಿಕೆ ನೌಕರರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರ ಪಾಲಿಕೆಯ ಸಂಘದ ಕಚೇರಿಯಲ್ಲಿ ಶುಕ್ರವಾರ ಆಚರಿಸಿದರು. ಮೈಸೂರು ಮಹಾನಗರ ಪಾಲಿಕೆ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಸಂಘ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಉಪ ಮೇಯರ್ ವಿ. ಶೈಲೇಂದ್ರ ವಾಲ್ಮೀಕಿ ಮಹತ್ವ ತಿಳಿಸಿದರಲ್ಲದೆ, ಸಂಘಟನೆಯ ಮೂಲಕ ಹೆಚ್ಚಿನ ಪ್ರಗತಿ ಕಾಣಬಹುದು. ಈ ದಿಸೆಯಲ್ಲಿ ನಗರ ಪಾಲಿಕೆ ನೌಕರರು ವೇದಿಕೆ ರಚಿಸಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ನೌಕರರ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂಘಕ್ಕೆ ಅಗತ್ಯವಾಗಿರುವ ಪೀಠೋಪಕರಣಗಳನ್ನು ಒದಗಿಸುವಂತೆ ಮುಖಂಡರು ಮನವಿ ಮಾಡಿದರು. ಆಯುಕ್ತ ಪಿ.ಜಿ. ರಮೇಶ್, ಸಂಘದ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಪೆಂಚಾಲಯ್ಯ, ಮಂಜುನಾಥ್, ಖಜಾಂಚಿ ಪುಟ್ಟಸ್ವಾಮಿ, ಸಂಚಾಲಕ ಶಿವಸಿದ್ದು, ಲೋಕೇಶ್ ಇದ್ದರು.
ಸರ್ವಜನಾಂಗ ವೇದಿಕೆಯಿಂದ
ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಚರಿಸಿತು.
ವೇದಿಕೆ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಪಿ.ಮಹದೇವ್, ಎಂ. ಪ್ರಭುದೇವ್, ಎಲ್. ಮಹದೇವಪ್ಪ, ಶಿವಪ್ಪ, ಸಲೀನಾ ಮೇರಿ, ಸಿ. ಯಶೋಧ, ಕೆ.ಆರ್. ಚಿಕ್ಕಣ್ಣ, ರಾಜಮ್ಮ, ಆರ್. ಲಕ್ಷ್ಮಣ್ ರಾಜ್, ರೇವಣ್ಣ, ಯಶೋಧರಾಜ್, ಹಿರೇಮಠ್, ವಿಜಯಕುಮಾರ್, ಮಂಜುನಾಥ್, ಗುರುಸಿದ್ದಯ್ಯ, ಆರ್. ಸಿದ್ದಯ್ಯ, ಬಿ. ಜಗದೀಶ್ ಭಾಗವಹಿಸುವರು. ನಂತರ ಮೆರವಣಿಗೆಯಲ್ಲಿ ತೆರಳಿದ ಮುಖಂಡರು ಕಲಾಮಂದಿರಕ್ಕೆ ತಲುಪಿದರು.