ಭಾರತೀಯ ಸಂಸ್ಕೃತಿ ಜನಕ ವಾಲ್ಮೀಕಿ
ಕ.ಪ್ರ.ವಾರ್ತೆ , ಮೈಸೂರು , ಅ. 18
ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿ ಜನಕ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲೆಯ ನಾಯಕ ಜನಾಂಗದ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರು ಮಂದಿ ಮಹಾಕವಿಗಳಲ್ಲಿ ಮಹರ್ಷಿ ವಾಲ್ಮೀಕಿ ಸಹ ಒಬ್ಬರು. ಮನುಷ್ಯ ತನ್ನ ಸಂಸಾರಕ್ಕೆ ಹಾಗೂ ಸಮಾಜಕ್ಕೆ ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಮಾನವೀಯ ಮೌಲ್ಯಗಳೇನು ಮತ್ತು ಕರ್ತವ್ಯಗಳೇನು ಎಂಬುದನ್ನು ತಮ್ಮ ಕಾವ್ಯದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಮಹರ್ಷಿ ಅವರು ಕೇವಲ ಭಾರತ ಮಾತ್ರವಲ್ಲ ಪ್ರಪಂಚದ ಇತಿಹಾಸ ಸೇರಿರುವ ಮಹಾಕವಿ. ಮಹಿಳೆಯರ ಬಗ್ಗೆ ಅಪಾರ ಸಂವೇದನೆ ತೋರಿಸಿದ ಮೊದಲ ಮಹಾಕವಿ. ಸೀತೆ, ಸೂರ್ಪನಖಿ ಹಾಗೂ ಮಂಡೋದರಿಯ ಬಗ್ಗೆ ರಾಮಾಯಣದಲ್ಲಿ ತೋರಿಸಿಕೊಟ್ಟಿದ್ದಾರೆ.
ಅಲ್ಲದೆ ಬುಡಕಟ್ಟು ಜನಾಂಗದ ನಾಯಕ ಆಂಜನೇಯ ಅವರ ನಿಷ್ಠೆಯನ್ನು ತೋರಿಸಿರುವುದು ಆದರ್ಶ. ರಾಮಾಯಣ ಮಾನವನ ಉದ್ಧಾರದ ಸಂಕೇತ ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಗೈರಾದ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಓದಲಾಯಿತು.
ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಎನ್.ಎಂ. ರಾಜೇಶ್ವರಿ, ಜಿ.ಪಂ. ಅಧ್ಯಕ್ಷ ಎಂ. ಮಹದೇವು, ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ಸಿದ್ದರಾಜು, ಗೋ. ಮಧುಸೂದನ್, ತನ್ವೀರ್ ಸೇಠ್, ಉಪ ಮೇಯರ್ ವಿ. ಶೈಲೇಂದ್ರ, ತಾ.ಪಂ. ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಜಿಲ್ಲಾಧಿಕಾರಿ ಸಿ. ಶಿಖಾ, ಎಂಡಿಎ ಆಯುಕ್ತ ಎಸ್. ಪಾಲಯ್ಯ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಎಸ್ಪಿ ಅಭಿನವ್ ಖರೆ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್ ಸ್ವಾಗತಿಸಿದರು. ಭುವನೇಶ್ವರಿ ನಿರೂಪಿಸಿದರು. ಇದಕ್ಕೂ ಮುನ್ನ ಮೈಸೂರು ರಂಗಸ್ವಾಮಿ ತಂಡದವರು ಗೀತಗಾಯನ ನಡೆಸಿಕೊಟ್ಟರು.
ಅಡ್ಡಪಲ್ಲಕ್ಕಿ ಆಕರ್ಷಕ ಉತ್ಸವ
ಮೈಸೂರು: ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ಸಡಗರ ಸಂಭ್ರಮದಲ್ಲಿ ಶುಕ್ರವಾರ ನಡೆಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲೆಯ ನಾಯಕರ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ಈ ಉತ್ಸವವನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು.
ಶಾಸಕರಾದ ವಾಸು, ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ಸಿದ್ದರಾಜು, ಉಪ ಮೇಯರ್ ವಿ. ಶೈಲೇಂದ್ರ, ಜಿಲ್ಲಾಧಿಕಾರಿ ಸಿ. ಶಿಖಾ, ನಾಯಕ ಸಂಘದ ಮುಖಂಡರಾದ ಕಾಟೂರು ದೇವರಾಜು, ಮಧುವನ ಚಂದ್ರು, ದ್ಯಾವಪ್ಪ ನಾಯಕ, ಟೆನ್ನಿಸ್ ಗೋಪಿ ಇದ್ದರು. ಮೆರಣಿಗೆಯಲ್ಲಿ ನಂದಿಧ್ವಜ, ನಾದಸ್ವರ, ವೀರಗಾಸೆ, ಡೊಳ್ಳು ಕುಣಿತ, ತಮಟೆ ನಗಾರಿ, ಕಂಸಾಳೆ, ಪೂಜಾ ಕುಣಿತ ಹಾಗೂ ಕೋಲಾಟ ಜಾನಪದ ತಂಡಗಳು ತಮ್ಮ ಕಲಾ ಪ್ರದರ್ಶನ ಮೆರೆದವು. ಅಲ್ಲದೆ ವಾಲ್ಮೀಕಿ ಅವರು ರಾಮಾಯಣ ರಚಿಸುವ ದೃಶ್ಯ, ರಾಮ- ಸೀತೆ ಒಳಗೊಂಡ ರಾಮಾಯಣದ ದೃಶ್ಯ ಹಾಗೂ ಸಿದ್ದಪಾಜಿ ಪವಾಡಗಳ ದೃಶ್ಯದಲ್ಲಿನ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು.
ನಂತರ ಅರಮನೆ ಮುಂಭಾಗದಿಂದ ಹೊರಟ ಮೆರೆವಣಿಗೆಯು ಕೆ.ಆರ್. ವೃತ್ತದ ಮೂಲಕ ದೇವರಾಜ ಅರಸು ರಸ್ತೆಯಲ್ಲಿ ಸಾಗಿ, ಜೆಎಲ್ಬಿ ರಸ್ತೆ ಮುಖಾಂತರ ವಿನೋಬ ರಸ್ತೆಯಲ್ಲಿ ತೆರಳಿ ಕಲಾಮಂದಿರ ತಲುಪಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯುದ್ದಕ್ಕೂ ತಾಳವಾದ್ಯದೊಂದಿಗೆ ಕುಣಿದು ಕುಪ್ಪಳಿಸಿದ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.