ಮಕ್ಕಳನ್ನು ದೈಹಿಕ ಸದೃಢರನ್ನಾಗಿಸಿ: ಡಾ. ಬಸವರಾಜು
ಕ.ಪ್ರ.ವಾರ್ತೆ , ಮೈಸೂರು , ಅ. 18
ಶಿಕ್ಷಣದ ಜೊತೆಗೆ ಮಕ್ಕಳನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕಾಗಿದೆ ಎಂದು ಮೈಸೂರು ವಿವಿ ಕುಲಸಚಿವ ಡಾ.ಸಿ. ಬಸವರಾಜು ಅಭಿಪ್ರಾಯಪಟ್ಟರು.
ಜ್ಞಾನಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ನಡೆದ ಶಾಲಾ ಪೋಷಕರ 2013ನೇ ಸಾಲಿನ ಕ್ರೀಡಾಕೂಟಕ್ಕೆ ಬಲೂನುಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದೈಹಿಕ ಶಿಕ್ಷಣವು ಆಧುನಿಕ ದಿನಮಾನಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.
ದೈಹಿಕ ಶಿಕ್ಷಣವು ಮಕ್ಕಳನ್ನು ಕ್ರಿಯಾತ್ಮಕವಾಗಿರುವಂತೆ ಮಾಡುತ್ತದೆ ಹಾಗೂ ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಅದಕ್ಕಾಗಿ ಪೋಷಕರು ಕ್ರೀಡೆಗಳಲ್ಲಿ ಭಾಗವಹಿಸಿ ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಮಾತನಾಡಿ, ಪೋಷಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಮನಸ್ಸನ್ನು ಸಂತೋಷ ಪಡಿಸಬೇಕಾಗಿದೆ ಹಾಗೂ ಅವರಲ್ಲಿನ ಪ್ರತಿಭೆಯನ್ನು ತೋರ್ಪಡಿಸಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿ ಅವರನ್ನು ಭವಿಷ್ಯದ ಸ್ಪರ್ಧೆಗಳಿಗೆ ತಯಾರು ಮಾಡಬೇಕಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲ ವೆಂಕಟೇಶನ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸುಖಲತಾ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸವನ್ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಮುಕುಂದ್ ಭಾಗವಹಿಸಿದ್ದರು.
ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಂಡೋವಿ ಮೋಟರ್ಸ್ ಅಧ್ಯಕ್ಷ ಗಣಪತಿ ಮಾತನಾಡಿ, ಶಾಲೆಗಳಲ್ಲಿ ಪೋಷಕರಿಗಾಗಿಯೇ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸುವುದು ಅತ್ಯಂತ ವಿರಳ. ಅದಕ್ಕಾಗಿ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪಾಲಕರು ಅತ್ಯಂತ ಪುಣ್ಯವಂತರು. ಅದು ಅಲ್ಲದೆ ಪೋಷಕರು ಕ್ರೀಡೆಗಳಲ್ಲಿ ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶರಾಗಬೇಕು ಎಂದು ಹೇಳಿದರು.ರಿಚಾ ಸ್ವಾಗತಿಸಿದರು. ಯೋಗೀಶ್ ನಿರೂಪಿಸಿದರು. ತಿಲೊಕೇಶ್ ವಂದಿಸಿದರು.