ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹರ್ಷಿ ವಾಲ್ಮೀಕಿ ಎಲ್ಲ ಜನರ ಆಸ್ತಿ

Vishwanath S
Updated On : 19 Oct 2013, 12:12 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಅ.  18
ಶ್ರೀರಾಮನ ಜೀವನ ಚರಿತ್ರೆಯಾಗಿರುವ ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿಯವರು ಎಲ್ಲ ಜನರ ಆಸ್ತಿ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪುರಸಭಾ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರ ನಾಯಕರು ಮತ್ತು ಮಹಾನ್ ದಾರ್ಶನಿಕರನ್ನು ಒಂದೇ ಜಾತಿಗೆ ಸೀಮಿತ ಮಾಡುವ ಚಾಳಿ ಹೋಗಬೇಕು. ಇಂತಹ ಮಹಾಪುರುಷರ ಹುಟ್ಟುಹಬ್ಬಗಳನ್ನು ಒಂದೇ ಜಾತಿಯವರು ಆಚರಿಸುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಸಮಾಜ ಸುಧಾರಣೆಗೆ ದುಡಿದು ದೇಶದ ಏಳಿಗೆಗೆ ಕೊಡುಗೆ ನೀಡಿದ ಮಹನೀಯರ ಜಯಂತಿ ಕಾರ್ಯಕ್ರಮ ಆಚರಿಸುವಾಗ ಚುನಾವಣೆ ವೇಳೆಯಲ್ಲಿ ರಾಜಕೀಯ ನಾಯಕರು ಬರುತ್ತಾರೆ. ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ಈ ಪರಿಪಾಠ ನಿಲ್ಲಿಸಿ ನಿರಂತರವಾಗಿ ಎಲ್ಲರು ಒಂದಾಗಿ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಮುಕ್ತ ವಿವಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ. ಮಂಜುನಾಥ್, ವಾಲ್ಮೀಕಿ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.
ಮೆರವಣಿಗೆಯಲ್ಲಿ ಸಂಸದೆ ರಮ್ಯಾ ಪಾಲ್ಗೊಂಡು ವಾಲ್ಮೀಕಿಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ನೆರೆದಿದ್ದವರನ್ನು ಹುರಿದುಂಬಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹಿಂತಿರುಗಿದರು.
ಕಾರ್ಯಕ್ರಮದ ಆರಂಭಕ್ಕೂ ಮೊದಲು ಪದವಿ ಪೂರ್ವ ಕಾಲೇಜಿನಿಂದ ಅಂಬೇಡ್ಕರ್ ವೃತ್ತ, ಗರುಡಗಂಭ ವೃತ್ತ, ಪುರಸಭಾ ವೃತ್ತದ ಮೂಲಕ ನಡೆದ ವಾಲ್ಮೀಕಿಯವರ ಭಾವಚಿತ್ರ ಸಹಿತ ಆಕರ್ಷಕ ಕಲಾತಂಡಗಳು, ವೀರಗಾಸೆ ಕುಣಿತ, ಶ್ರೀರಾಮ, ವಾಲ್ಮೀಕಿ ಮತ್ತು ಹನುಮಂತನ ವೇಷಧಾರಿಗಳ ಅದ್ಧೂರಿ ಮೆರವಣಿಗೆ ನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಅಧ್ಯಕ್ಷೆ ಶಕುಂತಲಾ ರಮೇಶ್, ಮಾಜಿ ಅಧ್ಯಕ್ಷರಾದ ಕವಿತಾ ರವಿ, ಹೇಮಾವತಿ, ಸದಸ್ಯರಾದ ನಾಗಣ್ಣ, ರಾಮಪ್ಪ, ತಂದ್ರೆರವಿ, ವಿಜಯಲಕ್ಷ್ಮಿ, ಹೊಸೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಟಿ. ಕೀರ್ತಿ, ತಾಲೂಕು ನಾಯಕರ ಸಂಘದ ಅಧ್ಯಕ್ಷ ಎಚ್.ಎನ್. ಚೌಡನಾಯಕ, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಟಿ. ಅಣ್ಣೇಗೌಡ, ನಾಯಕ ಸಮಾಜದ ಮುಖಂಡ ಹಂಪಾಪುರ ಕುಮಾರ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಹಸೀಲ್ದಾರ್ ಬಿ.ಎನ್. ವೀಣಾಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ. ಬಸವರಾಜು, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement