'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ'
ಕೆ.ಆರ್. ನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದ್ದು, ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಸಂಸದೆ ರಮ್ಯಾ ಹೇಳಿದರು.
ಭಾಷೆ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವ ಬಿಜೆಪಿಯವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಸದಾ ಬಡವರ, ನೊಂದವರ, ದೀನ-ದಲಿತರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದ ಅವರು, ರಾಹುಲ್ ಗಾಂಧಿಯವರ ಯುವ ನಾಯಕತ್ವ ಅಗತ್ಯವಿದೆ ಎಂದು ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೊಂದವರಿಗೆ ಸ್ಪಂದನೆ: ತಾನು ಸಂಸದೆಯಾದ ನಂತರ ಕ್ಷೇತ್ರದ ಪ್ರವಾಸ ಮಾಡಿದ ಮೇಲೆ ಕೆಲವು ಮರೆಯಲಾರದ ಅನುಭವಗಳಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕಿಂತ ರಾಜಕೀಯ ಕ್ಷೇತ್ರಕ್ಕೆ ಮತ್ತು ಸಮಾಜ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಕ್ಷೇತ್ರ ವ್ಯಾಪ್ತಿಯ 250 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅನುದಾನ ಬಿಡುಗಡೆಯಾಗಿದ್ದು, ಪಿಎಂಜಿಎಸ್ ಯೋಜನೆಯಡಿ ವಿವಿಧ ರಸ್ತೆಗಳ ಅಭಿವೃದ್ಧಿಗೆ 80 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೆ ಸ್ಪರ್ಧಿಸುವೆ: ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಪ್ರಶ್ನಿಸಿ, ನೀವು ಯಾವ ಬಣ ಎಂದು ಪ್ರಶ್ನಿಸಿದಾಗ, ಉತ್ತಮ ಕಾರ್ಯಕರ್ತರು, ಮುಖಂಡರಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದರಲ್ಲದೆ, ಅಲ್ಲಿ ಯಾವುದೆ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮತ್ತು ಕಾರ್ಯಕರ್ತರು ಬಯಸಿದರೆ ಅಭ್ಯರ್ಥಿಯಾಗುತ್ತೇನೆ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು. ತಾ. ಪ್ರಧಾನ ಕಾರ್ಯದರ್ಶಿ ಹೆಬ್ಬಾಳು ರಾಜಶೇಖರ್, ಎಪಿಎಂಸಿ ಉಪಾಧ್ಯಕ್ಷ ತೋಟಪ್ಪನಾಯಕ, ಪುರಸಭಾ ಮಾಜಿ ಸದಸ್ಯರಾದ ಎಸ್. ಯೋಗಾನಂದ, ಅಸ್ಲಂ, ಯುವ ಕಾಂಗ್ರೆಸ್ ಮುಖಂಡ ರಾಘು, ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್, ಮಹದೇವನಾಯಕ ಇದ್ದರು.