ಸಹಕಾರ ಸಂಘಗಳ ಚುನಾವಣೆಯಲ್ಲೂ ಹಣಬಲ
ಗ್ರಾಮ ಪಂಚಾಯ್ತಿಯಿಂದ ಲೋಕಸಭಾ ಚುನಾವಣೆವರೆಗೂ ಮತದಾರರನ್ನು ಓಲೈಸಲು ಹಣ ವೆಚ್ಚ ಮಾಡಲಾಗುತ್ತಿದೆ...
ವಿಶೇಷ ವರದಿ
ಕ.ಪ್ರ.ವಾರ್ತೆ , ಮೈಸೂರು , ಅ. 18
ಗ್ರಾಮ ಪಂಚಾಯ್ತಿಯಿಂದ ಲೋಕಸಭಾ ಚುನಾವಣೆವರೆಗೂ ಮತದಾರರನ್ನು ಓಲೈಸಲು ಹಣ ವೆಚ್ಚ ಮಾಡಲಾಗುತ್ತಿದೆ. ಇದು ಶಿಕ್ಷಕರು, ಪದವೀಧರರು, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಗೂ ವಿಸ್ತರಣೆಯಾಯಿತು. ವಿಧಾನಪರಿಷತ್, ರಾಜ್ಯಸಭೆಗೆ ಆಯ್ಕೆಯಾಗಲು ಹಣ ವೆಚ್ಚ ಮಾಡುವಂತಾಯಿತು. ಇದೀಗ ಇದೇ ಮೊದಲ ಬಾರಿಗೆ ಸಹಕಾರ ಸಂಘಗಳ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ನ.11ರಂದು ಮೈಸೂರು- ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಈ ಚುನಾವಣೆಗೆ ಎಲ್ಲ ತಾಲೂಕುಗಳಿಂದಲೂ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ತಾಲೂಕಿನಲ್ಲಿರುವ ಅರ್ಹ ಸಹಕಾರ ಸಂಘಗಳ ನಿರ್ದೇಶಕರು ಓರ್ವ ಪ್ರತಿನಿಧಿಯನ್ನು (ಡೆಲಿಗೇಟ್) ಚುನಾಯಿಸಬೇಕು. ಈ ರೀತಿ ಚುನಾಯಿತರಾದ ಪ್ರತಿನಿಧಿಗಳು ತಮ್ಮ ತಾಲೂಕಿನ ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ. ಮೊದಲು ಅರ್ಹ ಸಹಕಾರ ಸಂಘದಿಂದ ಪ್ರತಿನಿಧಿಯನ್ನು ಆಯ್ಕೆ ಮಾಡಲು ಐವರು ಸದಸ್ಯರ ಬೆಂಬಲ ಬೇಕು. ಏಕೆಂದರೆ 8 ಮಂದಿ ನಿರ್ದೇಶಕರು ಹಾಗೂ ಓರ್ವ ಮೇಲ್ವಿಚಾರಕನಿಗೆ ಮತದಾನದ ಹಕ್ಕು ಇರುತ್ತದೆ.
ಅಲ್ಲಿ ಐವರ ಬೆಂಬಲ ಪಡೆದವರೇ ಮೇಲುಗೈ. ಮೊದಲು ಆ ಐವರನ್ನು ತಮ್ಮತ್ತ ಸೆಳೆಯಲು 50,000ದಿಂದ 1 ಲಕ್ಷದವರೆಗೂ ನೀಡಲಾಗುತ್ತದೆ. ಆ ಐವರು ಸೇರಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಈ ಪ್ರತಿನಿಧಿ ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನು ಚುನಾಯಿಸುತ್ತಾನೆ. ಈತನಿಗೆ 2.50 ಲಕ್ಷದವರೆಗೆ ನೀಡಲಾಗುತ್ತದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು 1 ಕೋಟಿವರೆಗೆ ವೆಚ್ಚವಾಗುತ್ತಿದೆ ಎಂದರೆ ಸಹಕಾರ ಕ್ಷೇತ್ರ ಎಲ್ಲಿಗೆ ಬಂದು ತಲುಪುತ್ತಿದೆ? ಇದಲ್ಲದೆ ಗುಂಡು- ತುಂಡು ಪಾರ್ಟಿಗಳೂ ನಡೆಯುತ್ತಿವೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರ ನಡುವೆ ಪೈಪೋಟಿ ಇದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ವಿ.ದೇವರಹಟ್ಟಿ ಹಾಗೂ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ ಕಣ್ಣಿಟ್ಟಿದ್ದಾರೆ.
ಕೆ.ಆರ್.ನಗರ ತಾಲೂಕಿನಲ್ಲಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ವಿ. ದೇವರಹಟ್ಟಿ ಕಣಕ್ಕಳಿಯಲು ಸಜ್ಜಾಗಿದ್ದಾರೆ. ಅದೇ ರೀತಿ ಜೆಡಿಎಸ್‌ನಿಂದ ಎಸ್.ಟಿ. ಕೀರ್ತಿ ಕಣಕ್ಕಿಳಿಯಲಿದ್ದಾರೆ. ಇಲ್ಲಿನ ಹಾಲಿ ಉಪಾಧ್ಯಕ್ಷ ಸಿದ್ದೇಗೌಡ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಹುಣಸೂರು ತಾಲೂಕಿನಲ್ಲಂತೂ ಉಭಯ ಪಕ್ಷಗಳ ನಡುವೆ ತೀವ್ರ ಹಣಾಹಣಿ ಇದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ- ಜೆಡಿಎಸ್, ಮೈಮುಲ್ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಡೇರಿ ರಾಮಕೃಷ್ಣೇಗೌಡ- ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕಿಳಿಯುವ ಸಂಭವ ಇದೆ. ಹುಣಸೂರು ತಾಲೂಕಿನಲ್ಲಿ ಮತದಾನಕ್ಕೆ ಅರ್ಹವಾದ 18 ಸಹಕಾರ ಸಂಘಗಳಿದ್ದು, ಅಲ್ಲಿಂದ ತಲಾ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ. ಈ ರೀತಿ ಆಯ್ಕೆಯಾದ 18 ಮಂದಿಯಲ್ಲಿ ಕಾಂಗ್ರೆಸ್ ಬೆಂಬಲಿತ- 10, ಜೆಡಿಎಸ್ ಬೆಂಬಲಿತ- 8 ಮಂದಿ ಇದ್ದರು. ಶುಕ್ರವಾರ ಉಭಯ ಪಕ್ಷಗಳ ನಡುವೆ ಸಮಬಲ ಕಂಡು ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತಷ್ಟು ಏರುಪೇರು ಆಗಬಹುದು.