ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೆಗ್ಗಡೆ ಹೆಸರಿಗೆ ಕಳಂಕ; ಗಡಿಪಾರಿಗೆ ಆಗ್ರಹ

Vishwanath S
Updated On : 19 Oct 2013, 12:11 pm

ಕ.ಪ್ರ.ವಾರ್ತೆ ,  ಮೈಸೂರು ,  ಅ. 18
ವರ್ಷದ ಹಿಂದೆ ನಡೆದ ಉಜಿರೆಯ ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ. ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೂ ಒಬ್ಬ ಧರ್ಮಸ್ಥಳದ ಮಂಜುನಾಥಸ್ವಾಮಿಯ ಭಕ್ತನಾಗಿ, ವೀರೇಂದ್ರ ಹೆಗ್ಗಡೆ ಅವರ ಸೇವಾ ಕಾರ್ಯವನ್ನು ಮೆಚ್ಚಿಕೊಂಡು ಬಂದವನು. ಈ ರೀತಿಯ ಆರೋಪಗಳನ್ನು ಕೇಳಿ ನನಗೆ ನೋವಾಗಿದೆ. ಚಿಕ್ಕವನಾಗಿದ್ದಾಗಿನಿಂದಲೂ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದೇನೆ. ನಾನು ಶಾಸಕನಾಗಿದ್ದಾಗ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಇಂದಿಗೂ ಶ್ರೀಕ್ಷೇತ್ರ ಸಂಪರ್ಕ ಹೊಂದಿದ್ದೇನೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘನತೆ ಹೆಚ್ಚಳ: ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಮಾಡಿರುವ ಆರೋಪದಿಂದ ಕೋಟ್ಯಂತರ ಭಕ್ತ ಸಮೂಹಕ್ಕೆ ನೋವುಂಟಾಗಿದೆ. ಇದರ ಹಿಂದೆ ನಿಂತು ಷಡ್ಯಂತ್ರ ರೂಪಿಸಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಂಡು, ಅವರನ್ನು ಗಡಿಪಾರು ಮಾಡಬೇಕು. ಸದರಿ ಪ್ರಕರಣ ನಡೆದು ಒಂದು ವರ್ಷವಾಗಿದೆ. ಸಿಐಡಿ ತನಿಖೆಯೂ ನಡೆಯುತ್ತಿದೆ. ಹಾಗೆ ಉನ್ನತ ಮಟ್ಟದ ತನಿಖೆಯನ್ನೂ ನಡೆಸುವಂತೆ ಸಲಹೆ ನೀಡಿರುವುದು ಅವರ ಘನತೆಯನ್ನು ಹೆಚ್ಚಿಸಿದೆ ಎಂದರು.
ಹೆಗ್ಗಡೆ ಅವರ ಸೇವಾ ಕಾರ್ಯಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಾದರಿಯಾಗಿವೆ. ಸ್ತ್ರೀಯರ ಸ್ವಸಹಾಯ ಸಂಘಗಳು, ರಾಜ್ಯದ 22 ಜಿಲ್ಲೆಗಳಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ನನಗೆ ತಿಳಿದಂತೆ 3 ಲಕ್ಷ ಸ್ವಸಹಾಯ ಸಂಘದಲ್ಲಿ 30 ಲಕ್ಷ ಮಹಿಳೆಯರು ಸದಸ್ಯರಾಗಿ ಉಳಿತಾಯ ಯೋಜನೆ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾವಿತ್ರ್ಯತೆಗೆ ಧಕ್ಕೆ ಬೇಡ: ಧರ್ಮಸ್ಥಳದ ವ್ಯಾಪ್ತಿಯಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲಿ ಎಂದು ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರು ಒತ್ತಾಯಿಸಿದ್ದಾರೆ. 1974ರಲ್ಲಿ ವೀರೇಂದ್ರ ಹೆಗ್ಗಡೆ ಅವರು ಬೆಳ್ತಂಗಡಿ ತಾಲೂಕಿನ ಭೂ ನ್ಯಾಯ ಮಂಡಲಿ ಮುಂದೆ ಅರ್ಜಿ ಸಲ್ಲಿಸಿ ತಾವು ಘೋಷಣೆ ಮಾಡಿದಂತೆ 4,500 ಎಕರೆ ಭೂಮಿಯನ್ನು ಕೃಷಿ ಮಾಡುತ್ತಿದ್ದವರಿಗೆ ಕೊಡಿಸಿದ್ದಾರೆ. ಸರ್ಕಾರವೇ ಎಚ್ಚೆತ್ತು ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದಿಗಂಬರ ಜೈನ ಸಮಾಜದವರು ಅ.19ರಂದು ಮೌನ ಮೆರವಣಿಗೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement