ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ಲಬ್ ಮೇಲೆ ದಾಳಿಗೆ ಆಕ್ಷೇಪ

Vishwanath S
Updated On : 25 Oct 2013, 12:21 pm

ಪಿರಿಯಾಪಟ್ಟಣ: ರಾಜಾಪುರ ರಿಕ್ರಿಯೇಶನ್ ಕ್ಲಬ್ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದ್ದು, ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕ್ಲಬ್‌ನ ಅಧ್ಯಕ್ಷ ಗೋವಿಂದೇಗೌಡ ಹೇಳಿದರು. ಅ.22ರ ರಾತ್ರಿ ಪೊಲೀಸರು ಕ್ಲಬ್ ಮೇಲೆ ದಾಳಿ ನಡೆಸಿ, ಸದಸ್ಯರ ಮೇಲೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿರಿಯಾಪಟ್ಟಣದ ಸರ್ಕಲ್‌ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್ ಹಾಗೂ ಎಸ್‌ಐ ರಫೀಕ್ ಅವರು ಯಾವುದೇ ಮಾಹಿತಿ ನೀಡದೆ ಕ್ಲಬ್ಬಿನ ಮೇಲೆ ಏಕಾಏಕಿ ದಾಳಿ ನಡೆಸಿ, ಸದಸ್ಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡು ಕ್ಲಬ್‌ನ ಪೀಠೋಪಕರಣಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು. ಕ್ಲಬ್‌ನ ಗೌರವಾಧ್ಯಕ್ಷ ಧನಪಾಲ್, ಕಾರ್ಯದರ್ಶಿ ಎಂ.ಜೆ. ಸ್ವಾಮಿ ಇದ್ದರು.
ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಕ.ಪ್ರ.ವಾರ್ತೆ ,  ಎಚ್.ಡಿ.ಕೋಟೆ ,  ಅ. 24
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡುವುದಾಗಿ ತಾಪಂ ಪ್ರಭಾರ ಅಧ್ಯಕ್ಷ ಬಿ.ಜಿ. ಮಹೇಂದ್ರ ಹೇಳಿದರು.
ತಾಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಹೇಳಿದರು. ತಾಪಂನಿಂದ ಅಭಿವೃದ್ಧಿ ಕೆಲಸ ಮಾಡಲು ಶಾಸಕರ ಸಹಕಾರ ಕೋರುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಆಂತರಿಕ ಒಪ್ಪಂದದಂತೆ ತಾಪಂ ಅಧ್ಯಕ್ಷೆ ಲಕ್ಷ್ಮಿ ರಮೇಶ್ 10 ತಿಂಗಳ ಅಧಿಕಾರದ ನಂತರ ರಾಜಿನಾಮೆ ನೀಡಿದ ಹಿನ್ನೆಲೆ, ತಾಪಂ ಉಪಾಧ್ಯಕ್ಷ ಬಿ.ಜಿ. ಮಹೇಂದ್ರ ಅಧಿಕಾರ ವಹಿಸಿಕೊಂಡರು. ತಾಪಂ ಸದಸ್ಯೆ ಜಯಲಕ್ಷ್ಮಿ, ಜೆಡಿಎಸ್ ಮುಖಂಡರಾದ ದೊಡ್ಡನಾಯಕ, ಟಿ.ವೆಂಕಟೇಶ್, ಚಾ. ನಂಜುಂಡಮೂರ್ತಿ, ಡಿ. ಸುರೇಂದ್ರ, ನಾರಾಯಣಗೌಡ, ಡಿ.ಆರ್. ಮಹೇಶ್, ರಾಜಣ್ಣ, ಮಂಜು. ಬೆಟ್ಟಸ್ವಾಮಿ, ಪರಶಿವ, ರವಿ, ಹಲಗೇಗೌಡ, ತಂಗವೇಲು, ಪಾಪಣ್ಣ  ಭಾಗವಹಿಸಿದ್ದರು.
ದಸರಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ
ಟಿ. ನರಸೀಪುರ: ಮೈಸೂರಿನಲ್ಲಿ ನಡೆದ ಮಕ್ಕಳ ದಸರಾ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಬಿನಿ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ದ್ವಿತೀಯ ಬಹುಮಾನ ದೊರೆತಿದೆ.
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕಳೆದ ಅ.6 ರಿಂದ 9ರವರೆಗೆ ನಡೆದ ಮಕ್ಕಳ ದಸರಾ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಬಿನಿ ಕಾಲೋನಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ನಟರಾಜ್ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ಪಾಸ್ಕಲ್ ನಿಯಮವನ್ನು ವಿವರಿಸುವ ವಿಜ್ಞಾನ ಮಾದರಿಗಾಗಿ ಶಾಲೆಗೆ ದ್ವಿತೀಯ ಬಹುಮಾನ ಲಭ್ಯವಾಗಿದೆ. ಜಿಪಂ ಸಿಇಒ ಗೋಪಾಲ್, ಬಸವರಾಜ್ ಬಹುಮಾನ ವಿತರಿಸಿದರು. ವಸ್ತುಪ್ರದರ್ಶನದಲ್ಲಿ ಮಾದರಿಯ ವಿವರಣೆಯನ್ನು ವಿದ್ಯಾರ್ಥಿನಿಯರಾದ ಪ್ರಿಯಾ ಹಾಗೂ ಕಾವ್ಯ ನೀಡಿದರು.
ಮುಡುಕುತೊರೆ ದೇಗುಲದಲ್ಲಿ ಕಳವು
ಟಿ. ನರಸೀಪುರ: ತಾಲೂಕಿನ ಮುಡುಕುತೊರೆ ಶ್ರೀ ಭ್ರಮರಾಂಭಿಕ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿಯ ಬೀಗ ಮುರಿದು ಹಣ ದೋಚಿರುವ ಘಟನೆ ಬುಧವಾರ ರಾತ್ರಿ ಜರುಗಿದೆ. ತಾಲೂಕಿನ ತಲಕಾಡು ಸಮೀಪದ ಸೋಮಶೈಲ ಕ್ಷೇತ್ರವೆಂಬ ಮುಡುಕುತೊರೆಯಲ್ಲಿ ಕಳೆದ ಬುಧವಾರ ರಾತ್ರಿ ದೇವಾಲಯದ ಭ್ರಮರಾಂಭಿಕ ಅಮ್ಮನವರ ಗುಡಿಯಲ್ಲಿದ್ದ ಹುಂಡಿಯ ತಳಭಾಗದಲ್ಲಿದ್ದ ಬೀಗ ಮುರಿದು, ಅದರಲ್ಲಿದ್ದ ನಗದು ಹಣವನ್ನು ಕಳ್ಳರು ಕಳವು ಮಾಡಿದ್ದಾರೆ. ಅದರಲ್ಲಿದ್ದ ಚಿಲ್ಲರೆ ಹಣ ಹಾಗೂ ಹರಕೆ ಕಾಣಿಕೆಗಳನ್ನು ಮುಟ್ಟದೆ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಚಿನ್ನಾಭರಣ ಕಳವು
ಪಿರಿಯಾಪಟ್ಟಣ: ಚಿನ್ನ ಬೆಳ್ಳಿ ಅಂಗಡಿಯ ಬೀಗ ಮುರಿದಿರುವ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಬುಧವಾರ ರಾತ್ರಿ ಜರುಗಿದೆ. ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಸುನಿಲ್ ಕುಮಾರ್ ಜೈನ್ ಎಂಬವರಿಗೆ ಸೇರಿದ ರಿಶಬ್ ಜುವೆಲರ್ಸ್‌ನ ರೋಲಿಂಗ್ ಶೆಟರ್ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು, ಸುಮಾರು 2.5 ಲಕ್ಷ ಬೆಲೆ ಬಾಳುವ ಬೆಳ್ಳಿ ಸಾಮಗ್ರಿಗಳು ಹಾಗೂ 50 ಸಾವಿರ ಮೌಲ್ಯದ ಚಿನ್ನದ ಚೈನ್‌ಗಳನ್ನು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ನಂಜುಂಡ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್, ಎಸ್‌ಐ ರಫೀಕ್ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಧ್ರುವನಾರಾಯಣ್ ವಿದೇಶ ಪ್ರವಾಸ
ಮೈಸೂರು: ಭಾರತದ ಸಂಸದರ ನಿಯೋಗವು ಅ.26 ರಂದು ತುರ್ಕ್‌ಮೆನಿಸ್ತಾನ್ ಮತ್ತು ಅರ್ಮೇನಿಯಾಕ್ಕೆ ತೆರಳಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಆರ್. ಧ್ರುವನಾರಾಯಣ್ ಅವರು ಸಹ ನಿಯೋಗದೊಂದಿಗೆ ತೆರಳಲಿದ್ದಾರೆ. ಅ. 26 ರಿಂದ ನ. 2 ರವರೆಗೆ ಪ್ರವಾಸ ನಿಗದಿಯಾಗಿದೆ.
ಅಕ್ರಮ ನಡೆಸಿಲ್ಲ: ಜಿಟಿಡಿ
ಮೈಸೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧ್ಯಕ್ಷನಾಗಿ ನಾನು ಯಾವುದೇ ರೀತಿಯ ಭ್ರಷ್ಟಾಚಾರ, ಅಕ್ರಮ ಮಾಡಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಚ್‌ಬಿಯಲ್ಲಿ ಅಧ್ಯಕ್ಷ ಅಕ್ರಮ ಮಾಡಲು ಯಾವುದೇ ಅವಕಾಶ ಇಲ್ಲ. ಐಎಎಸ್ ಸೇರಿದಂತೆ ಸರ್ಕಾರದ 7-8 ಮಂದಿ ಅಧಿಕಾರಿಗಳು ಕೆಎಚ್‌ಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲವೆಂದು ಈಗಾಗಲೇ 2-3 ಬಾರಿ ಸ್ಪಷ್ಟಪಡಿಸಿದ್ದೇನೆ ಎಂದರು. ಹೀಗಿರುವಾಗ ವಸತಿ ಸಚಿವ ಅಂಬರೀಷ್ ಅವರ ಹೇಳಿಕೆಯನ್ನು ತಿರುಚಿ ಕೆಲವು ಪತ್ರಿಕೆಗಳು ನನ್ನ ತೇಜೋವಧೆ, ಮಾನಹಾನಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement