ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತನಿಖಾ ತಂಡ ಪಾಲಿಕೆಗೆ ಭೇಟಿ

Vishwanath S
Updated On : 25 Oct 2013, 12:21 pm

ಮೈಸೂರು: ಮೈಸೂರು ನಗರಪಾಲಿಕೆ ವಿವಿಧ ಶಾಖೆಗಳಿಗೆ ಪೌರಾಡಳಿತ ನಿರ್ದೇಶನಾಲಯದ ತನಿಖಾ ತಂಡದವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. 2013-14ನೇ ಸಾಲಿಗೆ ಹಣಕಾಸು ಆಯೋಗ, 13ನೇ ಹಣಕಾಸು, ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆಗಳಿಂದ ನಗರ ಪಾಲಿಕೆಗೆ ಅನುದಾನ ಬಿಡುಗಡೆಯಾಗಿತ್ತು. ಆದರೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಕಾಮಗಾರಿಗಳಿಗೆ ಅನುದಾನ ಬಳಸದೆ ಮಾರ್ಗಸೂಚಿ ಉಲ್ಲಂಘಿಸಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸರ್ಕಾರವು ಸೂಚಿಸಿದೆ.
ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯವು ತನಿಖಾ ತಂಡವೊಂದನ್ನು ರಚಿಸಿ, ಹಣಕಾಸು ವಿಭಾಗದ ಜಂಟಿ ನಿರ್ದೇಶಕ ಪಿ.ಎಲ್. ವೆಂಕಟೇಶಮೂರ್ತಿ, ಎಸ್‌ಡಬ್ಲ್ಯೂಎಂ ಕಾರ್ಯಪಾಲಕ ಎಂಜಿನಿಯರ್ ಎಂ.ಎಚ್.ಎಂ. ಶ್ರೀಪ್ರಕಾಶ್, ಮಹಾನಗರ ಪಾಲಿಕೆ ಸಹಾಯಕ ನಿರ್ದೇಶಕ ಎಲ್. ಅನಂತರಾಮು, ವ್ಯವಸ್ಥಾಪಕ ಅಂಜನಪ್ಪ ಅವರನ್ನು ನೇಮಿಸಿದೆ. ಈ ತಂಡವು ಸೋಮವಾರದಿಂದ ಗುರುವಾರದವರೆಗೆ ಪಾಲಿಕೆಯ ವಿವಿಧ ಶಾಖೆಗಳು ಹಾಗೂ ಅನುಷ್ಠಾನಗೊಂಡಿರುವ ಯೋಜನೆ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.
ಹತ್ತು ದಿನದಲ್ಲಿ ಖಾತೆ ನೀಡಲು ಸೂಚನೆ
ಕ.ಪ್ರ.ವಾರ್ತೆ ,  ಮೈಸೂರು ,  ಅ. 24
ನಿಗದಿತ ಅವಧಿಯೊಳಗೆ ಖಾತೆ ಮತ್ತು ವ್ಯಾಪಾರ ಪರವಾನಗಿ ನೀಡಲು ಗುರುವಾರ ನಡೆದ ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ ಸಭೆ ತೀರ್ಮಾನಿಸಿದೆ.
ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 10 ದಿನಗಳಲ್ಲಿ ಸಾರ್ವಜನಿಕರಿಗೆ ಖಾತೆ ನೀಡಬೇಕು. ಮೂರು ದಿನಗಳಲ್ಲಿ ವ್ಯಾಪಾರ ಪರವಾನಗಿ ನೀಡಬೇಕು ಎಂದು ತೀರ್ಮಾನಿಸಲಾಯಿತು.
ಪಾಲಿಕೆ ಕಟ್ಟಡದಲ್ಲಿಯೆ ವ್ಯಾಪಾರ ಪರವಾನಗಿ ನೀಡುವ ಪ್ರತ್ಯೇಕ ಕೌಂಟರ್ ತೆರೆಯುವುದು. 3 ದಿನಗಳಲ್ಲಿ ಮರಣ ಪ್ರಮಾಣ ಪತ್ರ ನೀಡುವುದು. ದಾಖಲಾತಿ ಸರಿ ಇಲ್ಲದಿದ್ದರೆ ಸೂಚನಾ ಪತ್ರ ನೀಡುವಂತೆ ಸಭೆ ನಿರ್ಣಯಿಸಿತು.
ಎಲ್ಲಾ ವಾರ್ಡ್‌ವಾರು ಎಂಡಿಎ ಬಡಾವಣೆ, ಕಂದಾಯ ಬಡಾವಣೆ, ಗ್ರಾಪಂ ಬಡಾವಣೆ ಮತ್ತು ಖಾಸಗಿ ಬಡಾವಣೆಯ ಪ್ರತ್ಯೇಕ ಕಡತ ನಿರ್ವಹಿಸುವುದು ಮತ್ತು ಬಾಕಿ ಇರುವ ಕಂದಾಯವನ್ನು 2 ತಿಂಗಳೊಳಗೆ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಒಟ್ಟು 93 ಕೋಟಿ ಕಂದಾಯದಲ್ಲಿ ಈಗ 44 ಕೋಟಿ ಮಾತ್ರ ಸಂಗ್ರಹ ಆಗಿದೆ. ಉಳಿಕೆ ಕಂದಾಯವನ್ನು 2 ತಿಂಗಳ ಒಳಗೆ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಿಯಮಾವಳಿಯಂತೆ ವಿದ್ಯುತ್, ರಸ್ತೆ, ಒಳಚರಂಡಿ ಮತ್ತು ನೀರು ನಿರ್ವಹಣೆಯ ಎಲ್ಲಾ ಬಿಲ್‌ಗಳನ್ನು ಪಾಲಿಕೆ ಆದಾಯದಿಂದಲೆ ಪಾವತಿಸಬೇಕು. ಆದರೆ ಪಾಲಿಕೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ ಕಂದಾಯ ಸಂಗ್ರಹಣೆಗೆ ವಿಶೇಷ ಗಮನ ನೀಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಭೈರಪ್ಪ ತಿಳಿಸಿದರು.
ಮೇಯರ್ ಎನ್.ಎಂ. ರಾಜೇಶ್ವರಿ, ಉಪ ಮೇಯರ್ ವಿ. ಶೈಲೇಂದ್ರ, ಸ್ಥಾಯಿ ಸಮಿತಿ ಸದಸ್ಯರು, ಲೆಕ್ಕಾಧಿಕಾರಿಗಳು ಇದ್ದರು.
ಶಾಸ್ತ್ರೀಯ ಭಾಷಾ ಕಾರ್ಯಾಗಾರ
ಮೈಸೂರು: ನಗರದ ಹುಣಸೂರು ರಸ್ತೆಯ ಸಿಐಐಎಲ್ ಆವರಣದಲ್ಲಿರುವ ಭಾರತೀಯ ಭಾಷಾ ಸಂಸ್ಥೆಯ ಕನ್ನಡ ಶಾಸ್ತ್ರೀಯ ಭಾಷೆಯ ಉನ್ನತ ಅಧ್ಯಯನ ಕೇಂದ್ರವು ಅ.25 ರಿಂದ 27 ರವರೆಗೆ ಶಾಸ್ತ್ರೀಯ ಭಾಷಾ ಯೋಜನೆಯ ಕಾರ್ಯಸೂಚಿ ಸಿದ್ಧಪಡಿಸಲು ಕಾರ್ಯಾಗಾರ ಆಯೋಜಿಸಿದೆ. ಕನ್ನಡ ಅಧ್ಯಯನವನ್ನು ಹೆಚ್ಚು ಸಕ್ರಿಯಗೊಳಿಸಲು ಮತ್ತು ನಿರ್ದಿಷ್ಟ ಯೋಜನೆಗಳ ಕಾರ್ಯಸೂಚಿಯನ್ನು ಸಿದ್ಧಪಡಿಸಲು ಹಾಗೂ ಮುಂದಿನ ಮಾರ್ಗಸೂಚಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಹಾಗೂ ಆದ್ಯತೆಗಳನ್ನು ಪಟ್ಟಿ ಮಾಡಲು ಉನ್ನತ ಮಟ್ಟದ ಸಭೆ ಹಾಗೂ ಕಾರ್ಯ ಯೋಜನೆಗಳ ಸಿದ್ಧತಾ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ವಿದ್ವಾಂಸರಾದ ಎಂ.ಚಿದಾನಂದಮೂರ್ತಿ, ಟಿ.ವಿ. ವೆಂಕಟಾಚಲಶಾಸ್ತ್ರೀ, ಜಿ.ಎಸ್. ಸಿದ್ದಲಿಂಗಯ್ಯ, ಎಲ್.ಎಸ್. ಶೇಷಗಿರಿರಾವ್, ಬರಗೂರು ರಾಮಚಂದ್ರಪ್ಪ, ಎಂ.ಎಂ. ಕಲಬುರ್ಗಿ, ಆ.ರಾ. ಮಿತ್ರ, ಕೆ. ಮರುಳಸಿದ್ದಪ್ಪ ಆಗಮಿಸುವರು.
ನೇರ ಫೋನ್ ಇನ್
ಮೈಸೂರು: ತಾಲೂಕಿನ ಪಂಚಾಯತಿ ಕಚೇರಿಯಿಂದ ಸಾರ್ವಜನಿಕರ ಕುಂದುಕೊರತೆ ಅರ್ಜಿ ವಿಲೇವಾರಿ ಬಗ್ಗೆ ಅ.25 ರಂದು ಬೆಳಗ್ಗೆ 10 ರಿಂದ 11 ರವರೆಗೆ ತಾಲೂಕು ಪಂಚಾಯತಿ ಕಚೇರಿಯಲ್ಲಿ ಕಾರ್ಯ ನಿರ್ವಾಹಣಾಧಿಕಾರಿ ನೇರ ಪೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ದೂ. 0821- 2414433ಗೆ ಕೆರೆ ಮಾಡಿ ತಮ್ಮ ಕುಂದುಕೊರತೆ ತಿಳಿಸಬಹುದು.
ನಾಳೆ ಮೈಸೂರಿಗೆ ಸಿಎಂ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.26 ರಂದು ಮೈಸೂರಿಗೆ ಆಗಮಿಸುವರು. ಬೆಳಗ್ಗೆ 11.30ಕ್ಕೆ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ಯಾಟ್ ಕಾಂ ಸ್ಟುಡಿಯೋದಲ್ಲಿ ಗ್ರಾಮ ವಿಕಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಪ್ರಾಸ್ತಾವಿಕ ಭಾಷಣ ಮಾಡುವರು.
ಯುವತಿ ನಾಪತ್ತೆ
ಮೈಸೂರು: ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ನಂಜಾಪುರ ಗ್ರಾಮದ ನಿವಾಸಿ ಪುಟ್ಟಮಾದಶೆಟ್ಟಿ, ಚಿಕ್ಕಮ್ಮ ಎಂಬವರ ಪುತ್ರಿ ಪವಿತ್ರ (18) ನಾಪತ್ತೆಯಾಗಿದ್ದಾರೆ. ಪಾತ್ರೆ ಸರಿಯಾಗಿ ತೊಳೆದಿಲ್ಲವೆಂದು ಬೈದಿದ್ದಕ್ಕೆ ಮನೆಯಿಂದ ಹೊರ ಹೋದವರು ವಾಪಸಾಗಿಲ್ಲ. ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ತಾಯಿ ಚಿಕ್ಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 08227- 275632 ಸಂಪರ್ಕಿಸಲು ಬನ್ನೂರು ಠಾಣೆ ಪೊಲೀಸರು ಕೋರಿದ್ದಾರೆ.
ವೈವಿದ್ಯಮಯ ಮಂಡ್ಯ ಜಿಲ್ಲಾ ಮಳಿಗೆ ಉದ್ಘಾಟನೆ
ಮೈಸೂರು: ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ರೈತರು ಕಾರ್ಮಿಕರು ಗುಡಿ ಕೈಗಾರಿಕೆಗಳ ಉತ್ಪನ್ನ, ರೇಷ್ಮೆ ಬೆಳೆ, ತೋಟಗಾರಿಕೆ ಬೆಳೆ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಕಾವೇರಿ ಮಾತೆ ನೀರನ್ನು ಸದಾ ಹರಿಸುತ್ತಿರುವಂತೆ ನಿರ್ಮಿಸಿರುವ ಮಂಡ್ಯ ಜಿಲ್ಲಾ ಮಳಿಗೆಯನ್ನು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಉದ್ಘಾಟಿಸಿದರು. ಮಂಡ್ಯ ಜಿಲ್ಲೆಯ ಕಲೆ, ಸಂಸ್ಕೃತಿ, ಕೈಗಾರಿಕೆ, ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ ಇಲಾಖೆ, ಪ್ರವಾಸಿ ತಾಣಗಳು ಧಾರ್ಮಿಕ ಕ್ಷೇತ್ರಗಳ ದರ್ಶನ ಬಿಂಬಿಸುವ ಸಂಪೂರ್ಣ ಮಾಹಿತಿಯನ್ನು ಈ ಮಳಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಈ ಮಳಿಗೆ ಮೂಲಕ ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಿಸಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಮಂಡ್ಯ ಜಿಪಂ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement