ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ತರಬೇತಿ

Vishwanath S
Updated On : 25 Oct 2013, 12:21 pm

ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆ ತಾಲೂಕಿನಲ್ಲಿ ಮಹಿಳೆಯರಿಗೆ ಉಳಿತಾಯದ ಜೊತೆಗೆ ಬಗೆ-ಬಗೆಯ ತರಬೇತಿ ಮಾಹಿತಿ ನೀಡುತ್ತಿದೆ. ಈ ಪೈಕಿ ಪುಷ್ಪಗುಚ್ಚ ತರಬೇತಿಯನ್ನೂ ನೀಡುತ್ತಿದೆ. ಸಮಾರಂಭ, ಕಾರ್ಯಕ್ರಮ, ಮದುವೆ, ಆರತಕ್ಷತೆಗಳಲ್ಲಿ ಬಗೆ- ಬಗೆಯ ಹೂವಿನ ಅಲಂಕೃತ ನೀಡುವ ಪರಿಪಾಠ ನಡೆದು ಬಂದಿದೆ. ಆದರೆ ಸ್ಥಳೀಯವಾಗಿ ಸಿಗುವ ಬಗೆ-ಬಗೆಯ ಹೂಗಳಿಂದ ಹಾಗೂ ಆಕರ್ಷಿಸುವ ವಿವಿಧ ಗಿಡಗಳ ಎಲೆಬಳಸಿಕೊಂಡು ವಿಶೇಷವಾಗಿ ತಯಾರಿಸುವ ಪುಷ್ಪದ ಮಾದರಿಯ ಪುಷ್ಪಗುಚ್ಚ ಮಾಡಲಾಗುತ್ತಿದೆ. ಸ್ಥಳೀಯವಾಗಿ ಸಿಗುವ ಚೆಂಡು ಹೂ, ದಾಸವಾಳ, ಗುಲಾಬಿ, ಸೇವಂತಿ ಗೊಂಡೆ, ಡೇರೆ, ಮತ್ತಿತರ ಹೂಗಳನ್ನು ಹಾಗೂ ಸಿಲ್ವರ್ ಇನ್ನಿತರೆ ಮರಗಳ ಎಲೆ ಬಳಸುವುದಲ್ಲದೆ ನಿರುಪಯುಕ್ತ ಮದುವೆ ಆಹ್ವಾನ ಪತ್ರಿಕೆ ಗಂಧದ ಕಡ್ಡಿಯ ಕೊಳವೆಗಳನ್ನು ಹಾಗೂ ಜಲ್ಲಿ ಪೇಪರ್ ಬಳಸಿ ತಯಾರಿಸಲಾಗುತ್ತದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ರಚಿಸಿರುವ ಸಂಘಗಳ ಮಹಿಳೆಯರಿಗೆ ವಾರದ ಸಭೆಯಲ್ಲೆ ಯೋಜನೆ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶಿಲ್ಪ ಅವರು ಸ್ಥಳೀಯ ಸಂಪನ್ಮೂಲ ಹಾಗೂ ಹೂ ಬಳಸಿ ಆಕರ್ಷಕವಾಗಿ ಕಾಣುವಂತೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.
ಮೋಟಾರ್ ಕಳವು ಮಾಡಿದ್ದ ಇಬ್ಬರ ಸೆರೆ
ಸಾಲಿಗ್ರಾಮ: ಪ್ರಕರಣ ದಾಖಲಾದ ಕೇವಲ ಎರಡು ಗಂಟೆಯೊಳಗೆ ತೋಟದಲ್ಲಿ ಅಳವಡಿಸಿದ್ದ ಮೋಟಾರ್ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್. ನಗರ ತಾಲೂಕಿನ ಮುದುಗುಪ್ಪೆ ಗ್ರಾಮದ ಮಹದೇವ ಮತ್ತು ಸುನಿಲ್ ಬಂಧಿತ ಆರೋಪಿಗಳು. ಸಮೀಪದ ಮುದುಗುಪ್ಪೆ ಗ್ರಾಮದ ಕಾಳೇಗೌಡರ ಸರ್ವೆ ನಂ. 20ಪಿ.3ರ ಬಾಳೆ ತೋಟದಲ್ಲಿ ಅಳವಡಿಸಿದ್ದ ಮೋಟಾರ್ ಅನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಕಾಳೇಗೌಡರ ಪುತ್ರ ಅರುಣ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ದೊರೆತ ಖಚಿತ ಮಾಹಿತಿಯ ಮೇರೆಗೆ, ಹೊಳೆನರಸೀಪುರ ತಾಲೂಕಿನ ದಾಳಗೌಡನಹಳ್ಳಿ ಬಳಿಯ ಜವರಿಕೊಪ್ಪಲು ಗ್ರಾಮದ ಗೌರಮ್ಮನ ಮನೆಯಲ್ಲಿದ್ದ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್‌ಐ ಬಿ.ಜಿ. ಮಹೇಶ್, ಎಎಸ್‌ಐಗಳಾದ ಮಾದಪ್ಪ, ನಾಗರಾಜನಾಯಕ, ಬಸವರಾಜ್, ಪೇದೆಗಳಾದ ರುದ್ರೇಶ್ ಭಾಗವಹಿಸಿದ್ದರು.
ಕಿತ್ತೂರು ಪಿಡಿಒಗೆ ಬೀಳ್ಕೊಡುಗೆ
ಕಿತ್ತೂರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಎಸ್. ನಿಂಗರಾಜು ಅವರನ್ನು ಗ್ರಾಪಂ ಅಧ್ಯಕ್ಷೆ ಮಂಜುಳ ರಘು ಬೀಳ್ಕೊಟ್ಟರು. ನಂತರ ನಿಂಗರಾಜು ಮಾತನಾಡಿ, ಮೂರು ವರ್ಷ ಕಿತ್ತೂರಿನಲ್ಲಿ ಗ್ರಾಪಂ ಎಲ್ಲ ಪಕ್ಷದವರ ಜೊತೆ ಸೌಜನ್ಯದಿಂದ ಬೆರೆತು, ಕೆಲಸ ಮಾಡಿದ್ದೇನೆ. ಪಂಚಾಯಿತಿಯ ಎಲ್ಲ ಸದಸ್ಯರಿಗೆ ಮತ್ತು ಕಿತ್ತೂರಿನ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಾಲಯ ಆರಂಭಿಸಲು ಮನವಿ
ಎಚ್.ಡಿ. ಕೋಟೆ: ತಾಲೂಕಿನಲ್ಲಿ ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಹೆಚ್ಚಾಗಿದ್ದು ಇವರಿಗೆ ಕಾರ್ಮಿಕ ಕಾಯಿದೆ ಅಡಿಯಲ್ಲಿ ರಕ್ಷಣೆ ನೀಡಲು ಪಟ್ಟಣದಲ್ಲಿ ಕಾರ್ಮಿಕ ನಿರೀಕ್ಷಕರ ಕಾರ್ಯಾಲಯ ಆರಂಭಿಸುವಂತೆ ಎಐಸಿಸಿಟಿಯು ಮನವಿ ಮಾಡಿದೆ. ಕಾರ್ಮಿಕರ ನಿರೀಕ್ಷಕರ ಕಾರ್ಯಾಲಯದ ಕೊರತೆಯಿಂದ ಕಾರ್ಮಿಕರಿಗೆ ರಕ್ಷಣೆ ಸಿಗುತ್ತಿಲ್ಲ. ಯಾವುದೇ ಕೆಲಸವಿದ್ದರೂ ಹುಣಸೂರು ಕಾರ್ಯಾಲಯಕ್ಕೆ ಹೋಗಿ ಬರಬೇಕು. ಈ ನಡುವೆ ಸಂಚರಿಸಲು ಕಷ್ಟವಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಆರ್ಥಿಕ ಹೊರೆಯೂ ತಗುಲಿತ್ತಿದೆ. ಪಟ್ಟಣದಲ್ಲಿ ಕಾರ್ಯಾಲಯ ತೆರೆದರೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
27ರಂದು ಗದ್ದಿಗೆಯಲ್ಲಿ ಕಣ್ಣಿನ ತಪಾಸಣೆ
ಹುಣಸೂರು: ತಾಲೂಕಿನ ಗದ್ದಿಗೆಯಲ್ಲಿ ಮೈಸೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ಹುಣಸೂರು ತಮಿಳರ ಸಂಗಂ ವತಿಯಿಂದ ಅ.27ರ ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಗದ್ದಿಗೆ ದೇವಸ್ಥಾನದ ಆವರಣದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಕಣ್ಣಿನ ಪೊರೆ ಹಾಗೂ ಇತರೆ ದೋಷಗಳುಳ್ಳವರಿಗೆ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕುಮಾರ್ ಆಯ್ಕೆ
ಹುಣಸೂರು: ತಾಲೂಕಿನ ಅಗರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಶ್ರೀನಿವಾಸೇಗೌಡ ತಿಳಿಸಿದ್ದಾರೆ.
ನಂಜುಂಡಸ್ವಾಮಿ ನೇಮಕ
ಕೆ.ಆರ್. ನಗರ: ತಾಲೂಕು ಬಿಜೆಪಿ ಉಪಾಧ್ಯಕ್ಷರಾಗಿ ಬಸವರಾಜಪುರ ನಂಜುಂಡಸ್ವಾಮಿ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement