ಮೈಸೂರು ಚಳವಳಿ ದಾಖಲೀಕರಣ ಅವಶ್ಯ
ಕ.ಪ್ರ.ವಾರ್ತೆ , ಮೈಸೂರು , ಅ. 24
ಮೈಸೂರು ಚಳವಳಿಯ ಬಗ್ಗೆ ಸಂಶೋಧನಾತ್ಮಕ ದಾಖಲೀಕರಣ ಅವಶ್ಯಕ ಎಂದು ಮೈಸೂರು ಉಪವಿಭಾಗಾಧಿಕಾರಿ ಬಸವರಾಜು ಹೇಳಿದರು. ಮೈಸೂರು ಜಿಲ್ಲಾ ಸ್ವಾತ್ರಂತ್ಯ ಹೋರಾಟಗಾರರ ಸಂಘವು ಸುಬ್ಬರಾಯನ ಕೆರೆ ಆವರಣದಲ್ಲಿರುವ ಸ್ವಾತಂತ್ರ್ಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಮೈಸೂರು ಚಲೋ - ಪ್ರಜಾಪ್ರಭುತ್ವ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಸ್ವಾತಂತ್ರ್ಯ ಯೋಧರು ಬ್ರಿಟಿಷರಿಂದ ಭಾರತವನ್ನು ಬಂಧಮುಕ್ತ ಮಾಡಲು ಅನೇಕ ಹೋರಾಟ ಹಾಗೂ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ವಿಶೇಷವಾಗಿ ಮೈಸೂರು ಸಂಸ್ಥಾನದಲ್ಲಿ ಅಂದು ನಡೆದ ಮೈಸೂರು ಚಲೋ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಅದರ ಹೋರಾಟ ಕುರಿತು ಸಂಶೋಧನಾತ್ಮಕ ಪುಸ್ತಕಗಳನ್ನು ಹೊರತರುವ ಅಗತ್ಯವಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿಗೆ ಸ್ವಾತಂತ್ರ್ಯ ತಡವಾಯಿತು. 1947 ಅ.24 ರಂದು ಮೈಸೂರು ಸಂಸ್ಥಾನಕ್ಕೆ ಸ್ವಾತಂತ್ರ್ಯ ದೊರೆಯಿತು. ಈ ಹಿನ್ನೆಲೆಯಲ್ಲಿ ಅದರ ಸ್ಮರಣೆಗೆ ಇಂತಹ ಪ್ರಜಾಪ್ರಭತ್ವ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಮೈಸೂರು ಚಲೋ ಹಾಗೂ ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟಗಾರರ ಕೋರಿಕೆ ಮೇರೆಗೆ ಸರ್ಕಾರ 10 ಲಕ್ಷ ಬಿಡುಗಡೆ ಮಾಡಿದ್ದು, ಅದನ್ನು ಪುಸ್ತಕಗಳ ಪ್ರಕಟಣೆಗಳಿಗೂ ಬಳಸಿಕೊಳ್ಳಲಾಗುವುದು. ಆ ಹಣ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಖಾತೆಯಲ್ಲಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ಸ್ವಾತಂತ್ರ್ಯ ಯೋಧರನ್ನು ಕರೆಸಿ ಪ್ರಜಾಪ್ರಭುತ್ವ ದಿನ ಆಚರಿಸಬೇಕಿತ್ತು. ನಿನ್ನೆಯಷ್ಟೆ ಹಣ ಬಿಡುಗಡೆಯಾಗಿರುವುದರಿಂದ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ ಎಂದರು. ಮಹಾರಾಣಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಪ್ರಮೀಳಾ ಮಾತನಾಡಿ, ರಾಜ ಪ್ರಭುತ್ವ ಬೇಡ, ಪ್ರಜಾ ಸರ್ಕಾರ ಬೇಕು ಎಂದು ಒತ್ತಾಯಿಸಿ ಅಂದು ಮೈಸೂರು ಚಲೋ ಚಳವಳಿ ನಡೆಸಲಾಯಿತು ಎಂದು ಆ ದಿನಗಳ ಹೋರಾಟದ ಮಹತ್ವ ತಿಳಿಸಿದರು.
ಸಂಘಧ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಡಾ. ಕೃಷ್ಣಮೂರ್ತಿ, ಉಪಾಧ್ಯಕ್ಷ ಜಯಸಿಂಹ, ಕಾರ್ಯದರ್ಶಿ. ಆರ್.ರಾಮಶೇಷ್, ಖಜಾಂಚಿ ರೇವಣ್ಣ, ಸದಸ್ಯರಾದ ಶ್ರೀಕಂಠಯ್ಯ, ದೊಡ್ಡಗೌಡ ಇದ್ದರು.