ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಂಗಾಯಣಕ್ಕೆ ಹೊಸರೂಪ

Vishwanath S
Updated On : 25 Oct 2013, 12:19 pm

ಮೈಸೂರು: ರಂಗಾಯಣಕ್ಕೆ ಹೊಸರೂಪ ನೀಡುವುದಾಗಿ ರಂಗಾಯಣದ ನೂತನ ನಿರ್ದೇಶಕ ಹಾಗೂ ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ) ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, 25 ವರ್ಷ ಸಂದಿರುವ ರಂಗಾಯಣ ದೇಶದ ಪ್ರತಿಷ್ಠಿತ ಕಲಾಸಂಸ್ಥೆ. ಬಿ.ವಿ. ಕಾರಂತರ ಅಪ್ಪಟ ಶಿಷ್ಯನಾದ ನಾನು, ಕಾರಂತರೊಂದಿಗೆ ರಂಗಾಯಣ ಕಟ್ಟುವ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಸಹ ರೆಪರ್ಟಿ ಉಳಿಸಿಕೊಂಡಿಲ್ಲ. ಆದರೆ, 25 ವರ್ಷಗಳಾದರೂ ರಂಗಾಯಣವು ರೆಪರ್ಟಿ ಉಳಿಸಿಕೊಂಡಿದೆ ಎಂದರು.
ವೃತ್ತಿ ರಂಗಭೂಮಿ- ಹವ್ಯಾಸಿ ರಂಗಭೂಮಿ ಬೆಸೆಯುವ ಪ್ರಯತ್ನ 70ರ ದಶಕದಿಂದ ನಡೆಯುತ್ತಿದೆ. ಇದಕ್ಕೆ ಬಹಳ ವ್ಯವಧಾನ, ಸಂಯಮ ಬೇಕು. ವೃತ್ತಿರಂಗಭೂಮಿ ಕಲಾವಿದರ ಸಮಸ್ಯೆ ತಿಳಿಯಲು ಸಂವಾದ, ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು. ಸಾಧ್ಯವಾದರೆ ಪ್ರಾಧಿಕಾರವೊಂದು ಸ್ಥಾಪಿಸಬೇಕು ಎಂದು ತಿಳಿಸಿದರು.
ಸಾಹಿತ್ಯ, ಕಲೆ ಆರೋಗ್ಯಕರವಾಗಿದ್ದರೆ ಸಮಾಜ ಕೂಡ ಆರೋಗ್ಯವಾಗಿರುತ್ತದೆ. ಸಮಾಜದ ಆರೋಗ್ಯ ಕಾಪಾಡುವ ಕಲಾ ಕ್ಷೇತ್ರಕ್ಕೂ ಕೃಷಿ ಇನ್ನಿತರೆ ಮಾದರಿಯಲ್ಲಿ ಬಜೆಟ್‌ನಲ್ಲಿ ಹಣ ಒದಗಿಸಬೇಕು. ರಂಗಾಯಣ ಕಲಾವಿದರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸೌಲಭ್ಯ ಸಿಗಬೇಕಿದೆ. ಕಲಾವಿದರು ಸುಖವಾಗಿರಲು, ರಂಗಾಯಣವನ್ನು ಬಲಿಷ್ಠಗೊಳಿಸಲು ಸರ್ಕಾರ ಅಗತ್ಯ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಕೆಳ ಸಮಾಜದಿಂದ ಬಂದು ಕಳೆದ ಮೂರೂವರೆ ದಶಕದಿಂದ ಕನ್ನಡ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ.
ಮನಸ್ಸುಗಳು ನಿರ್ಮಲ ಆಗಿರಬೇಕು, ಮಲೀನ ಆಗಬಾರದು. ಎಲ್ಲರಿಗೂ ಒಳ್ಳೆಯದು ಬಯಸುವ ಮನಸ್ಸಿರಬೇಕು. ಇನ್ನೊಬ್ಬರ ಪರದಾಟಕ್ಕೆ ಮಣಿಯದ ಅವನೆಂತಹ ಮನುಷ್ಯ ಎಂಬ ಪ್ರಶ್ನೆ ಬರುತ್ತದೆ ಎಂದರು.
ರಂಗಾಯಣದಲ್ಲಿ 18 ಹಿರಿಯ ಕಲಾವಿದರು, 17 ಮಂದಿ ಕಿರಿಯ ಕಲಾವಿದರು ಇದ್ದಾರೆ. ವೃತ್ತಿಪರ ಕಾಪಾಡುವಲ್ಲಿ ನಾವು ಗಂಭೀರವಾಗಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ವೃತ್ತಿಪರತೆ ಬೆಳೆದಿದೆ. ನಮ್ಮಲ್ಲಿ ಹವ್ಯಾಸಿ ರಂಗಭೂಮಿ ಬೆಳೆದಿದೆ. ಕಲಾವಿದರಿಗೆ ನಿವೃತ್ತಿ ಎಂಬುದಿಲ್ಲ. ಸಮಾಜಮುಖಿ ಕೆಲಸ ಮಾಡುವುದು ಕಲೆಯ ಮುಖ್ಯ ಕರ್ತವ್ಯ ಎಂದರು.
ರಂಗಯಾನ- ಬಹುರೂಪಿ: ಈ ಬಾರಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗಾಯಣದ 25 ವರ್ಷಗಳ ಕಾರ್ಯಕ್ರಮ ರಂಗಯಾನ- 25 ಅನ್ನು ಒಟ್ಟಿಗೆ ಆಯೋಜಿಸಲು ಚಿಂತಿಸಲಾಗಿದೆ. ಈ ಸಂಬಂಧ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಇಡೀ ವರ್ಷ ಕಾರ್ಯಕ್ರಮ ರಾಜ್ಯದೆಲ್ಲೆಡೆ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
ರಂಗಾಯಣ ಕಾರ್ಯಗಳನ್ನು ಚೆಕ್ (ಪರಿಶೀಲಿಸು) ಮಾಡುವವನು ನಿರ್ದೇಶಕ. ಚೆಕ್‌ಗೆ ಸಹಿ ಮಾಡುವವರು ನಿರ್ದೇಶಕ ಆಗಬಾರದು. ನಾನು ಚೆಕ್ಕಿಗೆ ಸಹಿ ಮಾಡುವ ನಿರ್ದೇಶಕನಲ್ಲ. ನಾನು ವಹಿಸಿಕೊಂಡಿರುವುದು ಅಧಿಕಾರವಲ್ಲ, ಹೊಣೆಗಾರಿಕೆ ಎಂದು ಭಾವಿಸಿದ್ದೇನೆ. ಈಗಿನ ರಂಗ ಸಮಾಜ ಆರೋಗ್ಯಪೂರ್ಣವಾಗಿದೆ. ರಂಗಾಯಣವನ್ನು ಗೌರವದಿಂದ ನಡೆಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಇದೇ ವೇಳೆ ಜನ್ನಿ ಅವರನ್ನು ಸನ್ಮಾನಿಸಲಾಯಿತು. ನಂತರ ಎದೆಯ ಹಕ್ಕಿಗಳೇ ಕಾಡದಿರೀ...., ಬಿದಿರು ನಾನ್ಯಾರಿಗೆ ಅಲ್ಲದವಳು... ಭಾವಪೂರ್ಣ ಗೀತೆಗಳನ್ನು ಹಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಉಪಾಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಇದ್ದರು.
ಹೀಂಗಾದ್ರೆ... ಕಾಮಿಡಿ ನಾಟಕಕ್ಕೆ ಪೂರ್ಣವಿರಾಮ
ರಂಗಾಯಣದಲ್ಲಿ ಹೀಂಗಾದ್ರೆ.ಕಾಮಿಡಿ ಎಂಬ ಅವಾಂತರದ ನಾಟಕ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಹೇಳಿದರು. ಕೆಟ್ಟ ಭಾವಸೂಚಕ, ಕೀಳುಮಟ್ಟದ ಹಾಸ್ಯ ಇರುವ ನಾಟಕವದು. ರಂಗಾಯಣ ಅಧಿಕಾರಿಗಳ ಎಡವಟ್ಟಿನಿಂದ ಆ ನಾಟಕ ಪ್ರದರ್ಶಿಸಲಾಗುತ್ತಿತ್ತು. ನಾನು ಬಂದ ಕೂಡಲೇ ಆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಆ ನಾಟಕದಲ್ಲಿ ಮರಾಠಿ ನಾಟಕಗಳ ಪ್ರಭಾವ ಹಾಗೂ ಕೆಟ್ಟ ಹಾಸ್ಯಗಳಿವೆ ಎಂದು ಅವರು ತಿಳಿಸಿದರು.
ರಂಗ ಸಮಾಜದ್ದೆ ಅಂತಿಮ ನಿರ್ಧಾರ
ರಂಗಾಯಣವು ಸ್ವಾಯತ್ತ ಸಂಸ್ಥೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಒಂದು ಭಾಗವಲ್ಲ. ರಂಗಾಯಣಕ್ಕೆ ರಂಗಸಮಾಜ ತೆಗೆದುಕೊಳ್ಳುವ ನಿರ್ಧಾರಗಳೇ ಅಂತಿಮ. ಆ ನಿರ್ಣಯಗಳನ್ನು ಅನುಷ್ಠಾನ ಮಾಡುವುದಷ್ಟೇ ಸರ್ಕಾರಿ ಇಲಾಖೆಯ ಕೆಲಸ ಎಂದು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ಸ್ಪಷ್ಟಪಡಿಸಿದರು. ರಂಗ ಸಮಾಜವು ರಂಗಾಯಣದ ನೀತಿ ನಿಯಮಗಳನ್ನು ರೂಪಿಸಿದೆ. ರಂಗಾಯಣದ ರೂಪರೇಷೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಗೊತ್ತಿಲ್ಲ. ರಂಗ ಸಮಾಜ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸುವದಷ್ಟೇ ಇಲಾಖೆಯ ಕೆಲಸವಾಗಿದೆ. ಈ ವಿಚಾರದಲ್ಲಿ ಕೆಲವು ಅಧಿಕಾರಿಗಳು ಗೊಂದಲ ಮೂಡಿಸಿದ್ದಾರೆ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ರಂಗ ಸಮಾಜದ ಅಧ್ಯಕ್ಷರಾಗಿರುತ್ತಾರೆ. ವಿವಿಧ ಕ್ಷೇತ್ರದ ಪರಿಣಿತರು ಸದಸ್ಯರಾಗಿರುತ್ತಾರೆ. ರಂಗ ಸಮಾಜದಲ್ಲಿ ಸಚಿವರು ಇಲ್ಲದಿದ್ದರೆ ಮತ್ತೊಮ್ಮೆ ನಿರ್ಣಯವನ್ನು ಸರ್ಕಾರದ ಬಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಸಚಿವರ ನೇತೃತ್ವದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸುಲಭವಾಗಿ ಜಾರಿಯಾಗುತ್ತದೆ. ಇದೇ ಉದ್ದೇಶಕ್ಕಾಗಿ ಸಚಿವರನ್ನು ರಂಗ ಸಮಾಜದ ಅಧ್ಯಕ್ಷರನ್ನಾಗಿ ನಿಯಮ ರೂಪಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement