ಸತ್ತೇಗಾಲ ಭೂವಿವಾದ ಆರೋಪ ಸುಳ್ಳು
ಕ.ಪ್ರ.ವಾರ್ತೆ , ಮೈಸೂರು , ಅ. 24
ಕೊಳ್ಳೇಗಾಲ ತಾಲೂಕು ಸತ್ತೇಗಾಲ ಗ್ರಾಮದ ಸರ್ವೆ ನಂಬರ್ 1 ಮತ್ತು 174ರ ಭೂ ವಿವಾದದಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ ಸಹಕಾರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮತ್ತು ಹನೂರು ಶಾಸಕ ಆರ್. ನರೇಂದ್ರ ಅವರು, ಈ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದ ವರದಿ ಬಂದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರು, ತಮ್ಮ ಮೇಲೆ ಮಾಡಿರುವ ಆರೋಪದಲ್ಲಿ ಯಾವುದೆ ಸತ್ಯಾಂಶ ಇಲ್ಲ. ಸೂಕ್ತ ಆಧಾರವಿಲ್ಲದೆ ಸಲ್ಲದ ಆರೋಪ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ವಿವಾದಕ್ಕೆ ನಾವು ಹೊಣೆ ಅಲ್ಲ. ಜಿಲ್ಲಾಧಿಕಾರಿ ನೀಡಿದ ತೀರ್ಪು ಪ್ರಶ್ನಿಸುವಂತಿಲ್ಲ. ಆದರೆ ಈ ಬಗ್ಗೆ ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದ ವರದಿ ತರಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಉದ್ದೇಶಿಸಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸತ್ತೇಗಾಲ ಗ್ರಾಮದ ಸರ್ವೆ ನಂ.1ರಲ್ಲಿ 1,360.25 ಎಕರೆ ಮತ್ತು ಸರ್ವೆ ನಂ.174 ರಲ್ಲಿ 12,760.93 ಎಕರೆ ವಿಸ್ತೀರ್ಣದ ಜಮೀನು ಇದೆ. ಈ ಜಮೀನಿಗೆ ಸಂಬಂಧಿಸಿದಂತೆ 1947 ರಲ್ಲಿ ಆಲತ್ತೂರು ಜಿಲ್ಲಾ ಮುನ್ಸಿಫ್ ನ್ಯಾಯಾಲಯದಲ್ಲಿ ಈ.ಅನ್ನಪೂರ್ಣಮ್ಮ ಮತ್ತು ಇತರೆ 35 ಮಂದಿ ಪ್ರಕರಣ ದಾಖಲಿಸಿ, ಈ ಸರ್ವೆ ನಂ. ವ್ಯಾಪ್ತಿಯಲ್ಲಿ ನಮ್ಮ ಜಮೀನೂ ಇದ್ದು, ಅದನ್ನು ನಮ್ಮ ಸ್ವಾಧೀನಕ್ಕೆ ಪಟ್ಟ ಕೊಡಬೇಕು ಎಂದು ಕೋರಿದ್ದರು.
ಸಿವಿಲ್ ಜಡ್ಜ್ ಕೋರ್ಟ್‌ಗೆ ವರ್ಗ: 1957 ರಲ್ಲಿ ಈ ವ್ಯಾಜ್ಯವನ್ನು ಮೈಸೂರು ಸಿವಿಲ್ ಜಡ್ಜ್ ಕೋರ್ಟ್‌ಗೆ ವರ್ಗಾಯಿಸಲಾಯಿತು. ನ್ಯಾಯಾಲಯದ ತೀರ್ಮಾನದಂತೆ ಅರ್ಜಿದಾರರಿಗೆ ಸರ್ವೆ ನಂ.1 ರಲ್ಲಿನ 220.34 ಎಕರೆ ಮತ್ತು ಸರ್ವೆ ನಂ. 174 ರಲ್ಲಿನ 499.96 ಎಕರೆ ಜಮೀನಿಗೆ ಪಟ್ಟ ನೀಡಲಾಯಿತು. ಸರ್ವೆ ನಂ. 174 ರಲ್ಲಿನ 9226.70 ಎಕರೆ ವಿಸ್ತೀರ್ಣದ ಜಮೀನು ಮೀಸಲು ಅರಣ್ಯವೆಂದು 1991 ರಲ್ಲಿ ಕರಡು ಅಧಿಸೂಚನೆ ಹೊರಡಿಸಿ, 2006 ಏಪ್ರಿಲ್ 21 ರಂದು ಕೊಳ್ಳೇಗಾಲ ಉಪ ವಿಭಾಗಾಧಿಕಾರಿಯನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಯಾಗಿ ನೇಮಕ ಮಾಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಉಳಿಕೆ 3534 ಎಕರೆ ಹಾಗೆಯೆ ಉಳಿದಿದೆ ಎಂದು ಶಾಸಕ ನರೇಂದ್ರ ವಿವರಿಸಿದರು.
ಕೊಳ್ಳೇಗಾಲ ಉಪ ವಿಭಾಗಾಧಿಕಾರಿಯಾಗಿದ್ದ ಸತ್ಯಭಾಮ ಅವರು 2008ರ ಮಾರ್ಚ್ 19 ರಂದು ಸರ್ವೆ ನಂ. 1 ರಲ್ಲಿನ ಸಂಪೂರ್ಣ ವಿಸ್ತೀರ್ಣವನ್ನೂ ಸರ್ಕಾರಿ ಖರಾಬು ಎಂದು ನಮೂದಿಸಿದ್ದರು. ಈ ಸಂಬಂಧ ಕೆಲವರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದಾಗ, ಪ್ರಕರಣದ ಮರು ವಿಚಾರಣೆ ನಡೆಸುವಂತೆ 2010 ರಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅದರಂತೆ ಆಗ ಉಪ ವಿಭಾಗಾಧಿಕಾರಿಯಾಗಿದ್ದ ಎ.ಬಿ. ಬಸವರಾಜು ಅವರು ಮರು ವಿಚಾರಣೆ ನಡೆಸಿ ವಿವಾದಿತ ಸರ್ವೆ ನಂ.1ರ ಜಮೀನಿನ ಜೊತೆಗೆ ಸರ್ವೆ ನಂ.174 ಅನ್ನು ಸೇರಿಸಿ ಒಟ್ಟು 720 ಎಕರೆ ವಿಸ್ತೀರ್ಣದ ಜಮೀನುಗಳನ್ನು(ಪಟ್ಟಾ ಜಮೀನು) ಕಂದಾಯ ದಾಖಲೆಯಲ್ಲಿ ಸರ್ಕಾರ ಎಂದು ನಮೂದಿಸಿ ಆದೇಶಿಸಿದ್ದರು.
ಈ ಸಂಬಂಧ ವಸುಂದರ ಮತ್ತು ಇತರರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್‌ನಲ್ಲಿ ಉಪ ವಿಭಾಗಧಿಕಾರಿ ಆದೇಶದ ವಿರುದ್ಧ 2012ರಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳೆ ಎರಡು ತಿಂಗಳಲ್ಲಿ ಇತ್ಯರ್ಥಪಡಿಸಿ ತೀರ್ಪು ನೀಡಬೇಕು ಎಂದು ನ್ಯಾಯಾಲಯದ ಆದೇಶಿಸಿದ್ದ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ಸಾವಿತ್ರಿ ಅವರು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಆದೇಶ ರದ್ದುಪಡಿಸಿ ತೀರ್ಪು ನೀಡಿದ್ದರು.
ಈಗ ಸಾವಿತ್ರಿ ಅವರ ಆದೇಶದ ಬಗ್ಗೆ ಈಗಿನ ಜಿಲ್ಲಾಧಿಕಾರಿ ಕುಂಜಪ್ಪ, ಈಗಾಗಲೆ ಪ್ರಾದೇಶಿಕ ಆಯುಕ್ತರಿಗೆ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಿದ್ದಾರೆ. ಈ ವರದಿ ನಮ್ಮ ಕೈ ತಲುಪಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೇವಲ ಬಾಯಿ ಚಪಲಕ್ಕೆ ಗೋ. ಮಧುಸೂದನ್ ಅವರು ಆರೋಪ ಮಾಡುವುದು ತಪ್ಪು. ಈ ಭೂವಿವಾದ ಆರಂಭವಾದಾಗ ನಾನೇ ಹುಟ್ಟಿರಲಿಲ್ಲ ಎಂದು ನರೇಂದ್ರ ಹೇಳಿದರು.
ಕೆಎಚ್‌ಬಿಯಿಂದ ನಿವೇಶನ ಪಡೆಯಲು ನಾನು ಅರ್ಜಿ ಹಾಕಿದ್ದ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೆ ಆಸ್ತಿ ಇಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದೆ. ಅದನ್ನೆ ಜೈಲಿನಲ್ಲಿದ್ದು ಬಂದ ಕೆಲವರು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ದೂರಿದ್ದಾರೆ ಎಂದು ಸಚಿವ ಮಹದೇವಪ್ರಸಾದ್ ಟೀಕಿಸಿದರು.