ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಮಾಜದ ಋಣ ತೀರಿಸಿ

Vishwanath S
Updated On : 25 Oct 2013, 12:18 pm

ಕ.ಪ್ರ.ವಾರ್ತೆ ,  ಮೈಸೂರು ,  ಅ. 24
ಇಂದಿನ ಯುವಜನತೆ ಸಮಾಜ ಋಣ ತೀರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ.ಕೆ. ಶ್ರೀವಾಸ್ತವ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ವಿದ್ಯಾರ್ಥಿಗಳಾದ ಪರೀಕ್ಷಿತ್ ಕೆ. ನಾಯಕ್ ಮತ್ತು ಮೆಹರ್‌ಬುದ್ದಿನ್ ವಾಕ್‌ಮನ್ ಅವರು ರಚಿಸಿರುವ ಮಾನವ ಹಕ್ಕುಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳು ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಹಾಗೂ ಅದನ್ನು ಪ್ರೀತಿಸಬೇಕು. ಆ ಮೂಲಕ ಗಳಿಸಿದ ಜ್ಞಾನವನ್ನು ದೇಶದ ಸಮಗ್ರ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಬೇಕು. ಶಿಕ್ಷಣವನ್ನೂ ಹಾಗೂ ಜ್ಞಾನವನ್ನೂ ಈ ಸಮಾಜದಿಂದ ಪಡೆದವರು ನಂತರ ಉದ್ಯೋಗ ಗಳಿಸಿದ ಮೇಲೆ ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳ ದೂರದೃಷ್ಟಿ ಇಂದು ವಿಸ್ತಾರವಾಗುತ್ತಿದೆ ಎಂಬುದು ಆಶಾದಾಯಕ ಬೆಳವಣಿಗೆ. ಆಗಿನ ಕಾಲದಲ್ಲಿ ಯಾವುದಾದರು ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಮುಖ್ಯ ಧ್ಯೇಯವಾಗಿತ್ತು. ಆದರೆ ಇಂದು ವಿದ್ಯಾರ್ಥಿಗಳಿಗೆ ಕೇವಲ ಒಂದು ವಿಷಯದಲ್ಲಿ ಮಾತ್ರವಲ್ಲ ಬಹುವಿಧದ ವಿಷಯಗಳನ್ನು ಕಲಿಯುವ ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ನಾತಕೋತ್ತರ ಪದವಿ ಹಂತದಲ್ಲಿಯೇ ಮಾನವ ಹಕ್ಕುಗಳ ಬಗ್ಗೆ ಆಸಕ್ತಿ ವಹಿಸಿ ಇಂತಹ ಪುಸ್ತಕವನ್ನು ಸಮಾಜಕ್ಕೆ ನೀಡಿರುವ ವಿದ್ಯಾರ್ಥಿಗಳಾದ ಪರೀಕ್ಷಿತ್ ಕೆ. ನಾಯಕ್ ಮತ್ತು ಮೆಹರ್‌ಬುದ್ದಿನ್ ವಾಕ್‌ಮನ್ ಅವರ ಸಾಧನೆ ಶ್ಲಾಘನೀಯ ಎಂದರು.
ಪ್ರಸಿದ್ಧಿ ಶಿಕ್ಷಣ ಸಂಸ್ಥೆ: 1946 ರಲ್ಲಿ ಆರಂಭವಾದ ಸಂತ ಫಿಲೋಮಿನಾ ಕಾಲೇಜು ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಜತೆಗೆ ಅನೇಕ ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ನನಗೂ ಮೈಸೂರಿಗೂ ಉತ್ತಮ ಸಂಬಂಧವಿದ್ದು, 1978 -79 ರಲ್ಲಿ ಡಿಐಜಿಯಾಗಿ ಇಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಸ್ಮರಿಸಿದರು.    ಮುಖ್ಯ ಅತಿಥಿಯಾಗಿ ಮಾತನಾಡಿದ ದಕ್ಷಿಣ ವಲಯದ ಡಿಐಜಿ ಡಾ.ಕೆ.ರಾಮಚಂದ್ರರಾವ್, ಇಂದು ವಿದ್ಯಾರ್ಥಿಗಳು ಹಾಗೂ ಹೆಚ್ಚಾಗಿ ಪರೀಕ್ಷೆಗೆ ಗಮನ ಹರಿಸುತ್ತಿದ್ದು, ಇಂತಹ ಮನೋಭಾವ ಬದಲಾಗಬೇಕು. ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದರ ಜತೆಗೆ ಬರೆದಿರುವ ಈ ಪುಸ್ತಕ ಅಧಿಕೃತವಾಗಿ ವಿಷಯಗಳನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಫಾ.ಲೆಸ್ಲಿ ಮೊರಸ್ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ರಾಫೇಲ್ ಇದ್ದರು. ಲೇಖಕರಾದ ಪರೀಕ್ಷಿತ್ ಕೆ. ನಾಯಕ್ ಸ್ವಾಗತಿಸಿದರು. ಮೆಹರ್‌ಬುದ್ದಿನ್ ವಾಕ್‌ಮನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement