ಕಲುಷಿತ ನೀರು ಸೇವಿಸಿ 15 ಮಂದಿ ಅಸ್ವಸ್ಥ
ಬೈಲುಕುಪ್ಪೆ: ತಾಲೂಕಿನ ಮಾಗಳಿ ಗ್ರಾಮದಲ್ಲಿ ಕಳೆದ 20 ದಿನಗಳಿಂದ ನಲ್ಲಿಯಲ್ಲಿ ನೀರು ಬಿಡದೆ, ನೂತನವಾಗಿ ತೆಗೆದ ಬೋರ್ವೆಲ್ನ ಕಲುಷಿತ ನೀರು ಕುಡಿದ ಪರಿಣಾಮ ಅನಾರೋಗ್ಯದಿಂದ ಸುಮಾರು 15 ಮಂದಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಕಳೆದ 20 ದಿನಗಳಿಂದ ನಲ್ಲಿಯಲ್ಲಿ ನೀರು ಬಿಡದೆ ಇರುವುದರಿಂದ ಗ್ರಾಮಸ್ಥರೆಲ್ಲ ಕಳೆದ 6 ತಿಂಗಳಿನಲ್ಲಿ ತೆಗೆದ ಬೋರ್ವೆಲ್ನ ನೀರು ಕುಡಿದು, ಗ್ರಾಮಸ್ಥರಿಗೆ ವಿಚಿತ್ರವಾಗಿ ಚಳಿ, ಜ್ವರ, ಕೆಮ್ಮು, ಶೀತ ಬರುತ್ತಿರುವುದರಿಂದ ದಿನನಿತ್ಯ 5-6 ಮಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಪಂಚಾಯಿತಿಯವರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದುತಿಳಿಸಿದ್ದಾರೆ.
ಅಕ್ರಮ ಮರಳುಗಾರಿಕೆ
ಪಿರಿಯಾಪಟ್ಟಣ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ರಾಶಿಗಳನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೊಳೆಗೆ ತಳ್ಳಿಸುವ ಮೂಲಕ ನಾಶಪಡಿಸಿದರು. ತಾಲೂಕಿನ ಸೂಳೆಕೋಟೆ ಗ್ರಾಮದ ಕಾವೇರಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಲ್ಕು ಲೋಡ್ ಮರಳನ್ನು ಹಾಗೂ ಶ್ಯಾನುಭೋಗನಹಳ್ಳಿ ಗ್ರಾಮದ ಬಳಿಯ ಕಾವೇರಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎರಡು ಲೋಡ್ ಮರಳನ್ನು ಜೆಸಿಬಿ ಮೂಲಕ ಹೊಳೆಗೆ ತಳ್ಳಿಸಿದರಲ್ಲದೆ, ಮರಳು ಸಂಗ್ರಹಿಸಲು ಬಳಸುತ್ತಿದ್ದ ಏಳು ಕೊಪ್ಪರಿಕೆಗಳನ್ನು ನಾಶಪಡಿಸಿದ್ದಾರೆ. ತಹಸೀಲ್ದಾರ್ ಎಂ.ಕೆ. ಸವಿತಾ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಮಂಜುನಾಥ್ ಮಾರ್ಗದರ್ಶನದಲ್ಲಿ ಉಪ ತಹಸೀಲ್ದಾರ್ ರವಿಶಂಕರ್, ಎಂಜಿನಿಯರ್ ಯೋಗಾನಂದ್ ಇದ್ದರು.
ಹೋಂ ಸ್ಟೇಯಿಂದ ತೊಂದರೆ: ಗ್ರಾಮಸ್ಥರ ದೂರು
ಪಿರಿಯಾಪಟ್ಟಣ: ತಾಲೂಕಿನ ಮರಡಿಯೂರು ಗ್ರಾಮದ ಪಕ್ಕದಲ್ಲಿರುವ ಹೋಂ ಸ್ಟೇಯಿಂದ ತೀವ್ರ ತೊಂದರೆಯಾಗಿದೆ ಎಂದು ಅಕ್ಕಪಕ್ಕದ ಗ್ರಾಮಸ್ಥರು ದೂರಿದ್ದಾರೆ. ರಾತ್ರಿ ವೇಳೆ ಮದ್ಯಪಾನ ಮಾಡಿ, ಜೋರಾಗಿ ಸಂಗೀತ ಹಾಕಿಕೊಂಡು, ಕುಣಿದು ಕುಪ್ಪಳಿಸುವುದರಿಂದ ಅಕ್ಕಪಕ್ಕದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ಈ ಹಿಂದೆ ನಡೆದ ಜನತಾದರ್ಶನದಲ್ಲಿ ಶಾಸಕ ಕೆ. ವೆಂಕಟೇಶ್ ಅವರಿಗೆ ಮರಡಿಯೂರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಇದನ್ನು ನಿಲ್ಲಿಸುವಂತೆ ದೂರು ನೀಡಿದ್ದರು. ಈ ದೂರನ್ನು ಚನ್ನಕಲ್ ಕಾವಲ್ ಪಂಚಾಯಿತಿಯವರು ಬೈಲಕುಪ್ಪೆ ಠಾಣೆಗೆ ರವಾನಿಸಿ ನೋಟಿಸ್ ನೀಡಿದ್ದರೂ ಹೋಂ ಸ್ಟೇಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಪೊಲೀಸರು ಯಾವುದೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಿ ಅನಧಿಕೃತವಾಗಿ ತಲೆ ಎತ್ತಿರುವ ಹೋಂ ಸ್ಟೇಯನ್ನು ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಕ್ರಮ ಮದ್ಯ ಮಾರಾಟ: ದೂರು
ಹುಣಸೂರು: ತಾಲೂಕಿನ ಉಂಡವಾಡಿ ಗ್ರಾಮದಲ್ಲಿ ಸೋಮಶೇಖರ್, ಮೊಗಣ್ಣೇಗೌಡ ಎಂಬವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಬಕಾರಿ ಇಲಾಖೆಯವರು ಮತ್ತು ಬಾರ್ ಮಾಲೀಕರು ಇವರಿಗೆ ಸಹಕಾರ ನೀಡುತ್ತಿದ್ದು, ರಾಜಾರೋಷವಾಗಿಯೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಗ್ರಾಮದ ಕುಡುಕರು ನಮ್ಮ ಗ್ರಾಮಕ್ಕೆ ಬಂದು ಗಲಾಟೆ ಮಾಡುತ್ತಾರೆ. ಹೆಂಗಸರು ಮಕ್ಕಳು ನೆಮ್ಮದಿಯಾಗಿರಲು ಸಾಧ್ಯವಾಗಂತಹ ಸ್ಥಿತಿ ನೆಲೆಸಿದೆ. ಆದ್ದರಿಂದ ಸಂಬಂಧಪಟ್ಟರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ನ.11ರಂದು ಕುಂದುಕೊರತೆ ಸಭೆ
ಟಿ. ನರಸೀಪುರ: ತಾಲೂಕು ಕಚೇರಿ ಸಭಾಂಗಣದಲ್ಲಿ ನ.11ರ ಬೆಳಗ್ಗೆ 11ಕ್ಕೆ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಯಲಿದೆ. ತಾಲೂಕಿನ ಅರ್ಹ ಅಂಗ ಸಭೆಗೆ ಹಾಜರಾಗಿ ಕುಂದು ಕೊರತೆಗಳ ಅಹವಾಲು ಸಲ್ಲಿಸಿ, ಪರಿಹರಿಸಿಕೊಳ್ಳಬೇಕು ಎಂದು ಕೋರಲಾಗಿದೆ.
ನೇಮಕ
ಟಿ. ನರಸೀಪುರ: ಪಟ್ಟಣದ ಗೋಪಾಲಪುರ ಬಡಾವಣೆಯ ಎಂ. ಸುಧಾಮಣಿ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ನ ನೂತನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಶಿರೇಖಾ ತಿಳಿಸಿದ್ದಾರೆ.
ರೈತರ ಸಮಾವೇಶ
ಟಿ. ನರಸೀಪುರ: ಬೆಂಗಳೂರಿನ ಫ್ರೀಡಂ ಪಾರ್ಕ್ನ ಮೈದಾನದಲ್ಲಿ ಅ.28 ರಂದು ರೈತರ ಬೃಹತ್ ಸಮಾವೇಶ ನಡೆಯಲಿದೆ ಎಂದು ರೈತ ಸಂಘದ ತಾ.ಅಧ್ಯಕ್ಷ ಮಹದೇವ ಹೇಳಿದ್ದಾರೆ. ತಾಲೂಕಿನಿಂದಲೂ ಸುಮಾರು 400ಕ್ಕೂ ಹೆಚ್ಚು ರೈತರು ಮೈಸೂರಿನಿಂದ ಅ.27ರ ರಾತ್ರಿ 11ಕ್ಕೆ ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾರೆ.