ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ತಲುಪಲಿ
ಕ.ಪ್ರ.ವಾರ್ತೆ , ಮೈಸೂರು , ಅ. 26
ಹಳ್ಳಿಗಾಡಿನ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕರೆ ನೀಡಿದರು.
ಮೈಸೂರಿನ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಇಲಾಖೆಯ 7 ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, 15 ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಅನುಷ್ಠಾನ, ಅನುದಾನದ ವಿವರಗಳನ್ನು ತಲುಪಿಸಲು ಇದೊಂದು ಉಪಯುಕ್ತ ಕಾರ್ಯಕ್ರಮ ಎಂದು ಶ್ಲಾಘಿಸಿದರು. ಅಧಿಕಾರ ವಿಕೇಂದ್ರೀಕರಣದ ಜೊತೆಗೆ ಭ್ರಷ್ಟಾಚಾರ ವಿಕೇಂದ್ರೀಕರಣ ಆಗಿದೆ ಎಂಬ ಆರೋಪ ಇದೆ. ಇದನ್ನು ಹೋಗಲಾಡಿಸಲು ಎಲ್ಲಾ ಹಂತಗಳಲ್ಲೂ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಚುನಾಯಿತ ಪ್ರತಿನಿಧಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಕಡ್ಡಾಯವಾಗಿ ಗ್ರಾಮಸಭೆಗಳನ್ನು ನಡೆಸಬೇಕು ಎಂದ ಅವರು, ಗ್ರಾಮಸಭೆ ನಡೆಸದ ಸದಸ್ಯರನ್ನು ಅನರ್ಹಗೊಳಿಸುವುದಾಗಿ ಹೇಳಿರುವುದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಜನರಿಗೆ ಸೌಲಭ್ಯ ತಲುಪಿಸುವ ಪ್ರಾಮಾಣಿಕ ಕಾಳಜಿಯಿಂದ ಹೇಳಿದ ಮಾತು ಎಂದು ಸ್ಪಷ್ಪಪಡಿಸಿದರು. ನಾನು ಕೂಡ 1978- 83ರ ಅವಧಿಯಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನಾಗಿದ್ದೆ. ಹೀಗಾಗಿ ಈಗಲೂ ನನಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ನಂಬಿಕೆ, ಬದ್ಧತೆ ಇದೆ. ಅಲ್ಲಿ ಯಶಸ್ವಿಯಾದರೆ ನಾಯಕತ್ವ ಬರಲಿಕ್ಕೆ ಸಾಧ್ಯ ಎಂದ ಅವರು, ಗ್ರಾಪಂಗಳನ್ನು ಸಶಕ್ತವಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.
ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಕೊಡುವ ಜವಾಬ್ದಾರಿ ಸರ್ಕಾರಕ್ಕಿದೆ. ಹೀಗಾಗಿಯೇ ಪ್ರತಿವರ್ಷ 1000 ಶುದ್ಧೀಕರಣ ಘಟಕ ಆರಂಭಿಸುತ್ತಿದ್ದೇವೆ. ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಪ್ರತಿವರ್ಷ 10,000 ಹಳ್ಳಿಗಳಲ್ಲಿ ಆಟದ ಮೈದಾನ ಸಿದ್ಧಪಡಿಸಲಾಗುವುದು. ರಾಜೀವ್ಗಾಂಧಿ ಉದ್ಯೋಗ ಚೈತನ್ಯ ಯೋಜನೆಯಲ್ಲಿ ಪ್ರತಿ ಪಂಚಾಯ್ತಿಯಿಂದ 40-50 ಮಂದಿಗೆ ಉದ್ಯೋಗ ಒದಗಿಸಲಾಗುವುದು. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಗ್ರಾಪಂಗಳಿಗೆ ಅನುದಾನ ಹೆಚ್ಚಳ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗ್ರಾಪಂಗಳಿಗೆ ಬಜೆಟ್ನಲ್ಲಿ 2 ಲಕ್ಷ ಅನುದಾನ ಹೆಚ್ಚಿಸಲಾಗಿದೆ. ಶಾಸನಬದ್ಧ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಗ್ರಾಪಂಗಳು ಶಾಸನಬದ್ಧ ಅನುದಾನ ವಿದ್ಯುತ್ ಬಿಲ್, ಕುಡಿಯುವ ನೀರಿನ ಮೋಟಾರ್ ಬಿಲ್, ನೌಕರರ ವೇತನಕ್ಕೆ ಹೋಗುವುದರಿಂದ 13ನೇ ಹಣಕಾಸು ಆಯೋಗದಿಂದ ಸಿಗುವ 10-15 ಲಕ್ಷಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಇದಲ್ಲದೇ ಖಾತ್ರಿ ಯೋಜನೆ, ನಿರ್ಮಲ ಭಾರತ ಅಭಿಯಾನ ಮತ್ತಿತರ ಯೋಜನೆಗಳ ಅನುದಾನವನ್ನು ಬಳಸಬೇಕು ಎಂದು ಅವರು ಹೇಳಿದರು.
ಬೃಹತ್ ಮೈಸೂರು ನಗರಪಾಲಿಕೆ ಇಲ್ಲ
ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ನಗರಪಾಲಿಕೆಯನ್ನು ಪರಿವರ್ತಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ನಾನು ಯಾರಿಗೂ ಈ ರೀತಿಯ ಭರವಸೆಯನ್ನೂ ನೀಡಿಲ್ಲ ಎಂದರು. ಮೇಯರ್ ಎನ್.ಎಂ. ರಾಜೇಶ್ವರಿ ಅವರ ನೇತೃತ್ವದ ನಿಯೋಗ ಶುಕ್ರವಾರ ಬೆಂಗಳೂರಿಗೆ ತೆರಳಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿರುವುದಾಗಿ ಹೇಳಿಕೊಂಡಿತ್ತು. ಇದನ್ನು ಅಲ್ಲಗಳೆದ ಅವರು, ಮೈಸೂರು ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.