ಪ್ರೊ.ಚಿಕ್ಕಬೋರಯ್ಯ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ
ಮೈಸೂರು: ಮಾಜಿ ಶಾಸಕ, ವಕೀಲ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ವಿಚಾರಿಸಿದರು. ಅಧಿಕೃತ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಚಿಕ್ಕಬೋರಯ್ಯ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ವಿಷಯ ತಿಳಿದು, ಜಯಲಕ್ಷ್ಮಿಪುರಂನ ಬಸಪ್ಪ ಸ್ಮಾರಕ ಆಸ್ಪತ್ರೆಗೆ ಭೇಟಿ ನೀಡಿ ಸುಮಾರು ಹದಿನೈದು ನಿಮಿಷಗಳ ಕಾಲ ಇದ್ದು ಅವರ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಮನೆಗೆ ಕರೆದು ಆತಿಥ್ಯ ನೀಡಬೇಕೆಂದು ನಮ್ಮ ಮಾವನವರು ಹೇಳುತ್ತಿದ್ದರು ಎಂದು ಚಿಕ್ಕಬೋರಯ್ಯ ಅವರ ಸೊಸೆ ತಿಳಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಚಿಕ್ಕಬೋರಯ್ಯ ಅವರು ಬೇಗ ಗುಣಮುಖರಾಗಿ ಮನೆಗೆ ಬರುತ್ತಾರೆ ಎಂದು ತಿಳಿಸಿದರು. ಈ ಹಿಂದೆ ರಾಜಕೀಯಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಅವರು ಚಿಕ್ಕಬೋರಯ್ಯ ಅವರ ಬಳಿ ವಕೀಲಿ ವೃತ್ತಿ ಕಲಿತ್ತಿದ್ದರು. ಅಲ್ಲದೆ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದ ಕಾರಣ ಅವರಿಬ್ಬರ ನಡುವೆ ಗುರು - ಶಿಷ್ಯರ ಸಂಬಂಧವಿದೆ.