'ಸಚಿವರು, ಶಾಸಕರಿಗೆ ತರಬೇತಿ ನೀಡಲು ಚಿಂತನೆ'
ಕ.ಪ್ರ.ವಾರ್ತೆ , ಮೈಸೂರು , ಅ. 26
ಮೈಸೂರು ವಿವಿ ಅಧ್ಯಾಪಕರು ಹೆಚ್ಚು ಜ್ಞಾನವುಳ್ಳವರಾಗಿದ್ದು ಇವರಿಂದ ಸಚಿವರು, ಶಾಸಕರಿಗೆ ಒಂದು ದಿನದ ತರಬೇತಿ ಕೊಡಿಸುವ ಚಿಂತನೆ ಇದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದಲ್ಲಿ ಶನಿವಾರ ಅಧ್ಯಯನ ವಿಭಾಗಗಳ ಅಧ್ಯಕ್ಷರು ಹಾಗೂ ವಿವಿಧ ಕೇಂದ್ರ- ಸಂಸ್ಥೆಗಳ ನಿರ್ದೇಶಕರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಆಡಳಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯವು ನಿರಂತರ ತರಬೇತಿ ನೀಡುತ್ತಾ ಬಂದಿದೆ. ಇದರ ಅಭಿವೃದ್ಧಿಗಾಗಿ 3 ಕೋಟಿ ಮೀಸಲಿಟ್ಟಿದ್ದು ವಿಶ್ವದರ್ಜೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗುವುದು.
ಹಾಗೆ ನಮ್ಮಲ್ಲಿ ಬುದ್ಧಿವಂತ ಅಧ್ಯಾಪಕರಿದ್ದಾರೆ. ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚು ಜ್ಞಾನವುಳ್ಳ ಅಧ್ಯಾಪಕರಿದ್ದು ಅವರಿಂದ ಸಚಿವರು, ಶಾಸಕರಿಗೆ ತರಬೇತಿ ಕೊಡಿಸುವ ಬಯಕೆ ಇದೆ. ಈ ಮೂಲಕ ಮೈಸೂರು ವಿವಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ. ನಮ್ಮ ಅಧ್ಯಾಪಕರು ಆಡಳಿತ, ಲೆಕ್ಕಾಚಾರಕ್ಕೆ ಸಂಬಂಧಿಸಿದ ಜ್ಞಾನ ಪಡೆದುಕೊಳ್ಳಲು ಈ ತರಬೇತಿ ಏರ್ಪಡಿಸಲಾಗಿದೆ. ತರಬೇತಿಯಿಂದ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಂಡರೆ ಬೋಧನೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳಬಹುದು ಎಂದರು.
ರಾಜ್ಯ ಲೆಕ್ಕಾಚಾರ ಇಲಾಖೆಯ ನಿವೃತ್ತ ಜಂಟಿ ನಿಯಂತ್ರಕ ರಾಮಚಂದ್ರಸ್ವಾಮಿ ಮಾತನಾಡಿ, ಅಧ್ಯಾಪಕರಿಗೆ ಆಡಳಿತದ ಬಗ್ಗೆ ತರಬೇತಿ ನೀಡುವುದು ಒಳ್ಳೆಯದು. ಇಂತಹ ತರಬೇತಿಗೆ ಬಂದಾಗ ಬದಲಾವಣೆಯ ಮನಸ್ಥಿತಿಯೊಂದಿಗೆ ಭಾಗವಹಿಸಬೇಕು ಎಂದು ತಿಳಿಸಿದರು.
ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ತರಬೇತಿ ಸಂಸ್ಥೆ ಸಲಹೆಗಾರ ಕೆ.ಶ್ರೀನಿವಾಸ್ ಅತಿಥಿಯಾಗಿ ಭಾಗವಹಿಸಿದ್ದರು.