ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

Vishwanath S
Updated On : 27 Oct 2013, 12:19 pm

ಕ.ಪ್ರ.ವಾರ್ತೆ ,  ಮೈಸೂರು ,  ಅ. 26
ಶಿವನಸಮುದ್ರ ಬಳಿಯ ಸತ್ತೇಗಾಲದ 15 ಸಾವಿರ ಎಕರೆ ಭೂ ಹಗರಣ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾರದೊಳಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತಿಸಿರುವುದಾಗಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಗೋ. ಮಧುಸೂದನ್ ಹೇಳಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭೂಮಿಗೆ ಸಂಬಂಧಿಸಿದಂತೆ ಚಾಮರಾಜನಗರದ ಜಿಲ್ಲಾಧಿಕಾರಿಯಾಗಿದ್ದ ಎಂ.ವಿ. ಸಾವಿತ್ರಿ ಅವರು ಹೊರಡಿಸಿರುವ ಆದೇಶದಿಂದ ನ್ಯಾಯಾಂಗ ನಿಂದನೆ ಆಗಿದೆ. ರಾಜ್ಯ ಸರ್ಕಾರವು ವಾರ ಕಳೆದರೂ ಆದೇಶ ರದ್ದುಗೊಳಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ, ಚಾಮರಾಜನಗರ ಜಿಲ್ಲಾಡಳಿತ (ಡಿಸಿ ಸಾವಿತ್ರಿ), ಕಂದಾಯ, ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಪಾಳ್ಯ ಹೋಬಳಿ ಸತ್ತೇಗಾಲದ ಸರ್ವೆ ನಂ.1 ಭೂಮಿಯಲ್ಲಿ ಅರಣ್ಯ ಇಲಾಖೆಯವರು ಬೇಲಿ ಹಾಕಿಕೊಂಡಿದ್ದಾರೆ. ಆದರೆ, ಸರ್ವೆ ನಂ.174ರ ಅರಣ್ಯ ಖರಾಬು ಸೇರಿ ಸುಮಾರು 15,000 ಎಕರೆ ಪ್ರದೇಶವಿದೆ. 2012ರಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ನಕ್ಷೆ ಸಿದ್ಧಪಡಿಸಿದೆ. ಇದರಲ್ಲಿ 4 ಸಾವಿರ ಎಕರೆ ಭೂಮಿ ಒತ್ತುವರಿ ಆಗಿದೆ. ಡಿಸಿ ಸಾವಿತ್ರಿ ಅವರ ಆದೇಶದಿಂದ ಉಳಿದ 11 ಸಾವಿರ ಎಕರೆ ಪ್ರದೇಶವೂ ಒತ್ತುವರಿ ಆಗಲಿದೆ. ಹೀಗಾಗಿ ಜಿಲ್ಲಾಧಿಕಾರಿ ಆದೇಶವನ್ನು ರದ್ದುಗೊಳಿಸಲು ಒತ್ತಾಯಿಸಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸುತ್ತಮುತ್ತ ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿದೆ ಎಂಬ ಬಿಜೆಪಿ ಶಾಸಕ ಗೋ.  ಮಧುಸೂದನ್ ಅವರ ಹೇಳಿಕೆ ರಾಜಕೀಯ ಪ್ರೇರಿತ. ಹೀಗಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
   ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಹಕಾರ ಸಚಿವರು, ಶಾಸಕರ ಹೇಳಿಕೆ ಶುದ್ಧ ಸುಳ್ಳು
ಸತ್ತೇಗಾಲ ಭೂ ಹಗರಣ ವಿಚಾರದಲ್ಲಿ ಸಹಕಾರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ ಅವರು ಅಪ್ಪಟ ಸುಳ್ಳು ಹೇಳಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಆರೋಪಿಸಿದರು.
ನಾನು ಮಾಡಿರುವ ಆರೋಪಗಳ ಬಗ್ಗೆ ಸೂಕ್ತ ದಾಖಲೆ ಒದಗಿಸಿದ್ದೇನೆ. ಆದರೆ, ಸಚಿವರು, ಶಾಸಕರು ಸರ್ಕಾರದ ಪರವಾಗಿ ಯಾವುದೇ ದಾಖಲೆ ಬಿಡುಗಡೆಗೊಳಿಸಿಲ್ಲ. ನಾನು ಬುಡವಿಲ್ಲದ ಆರೋಪ ಮಾಡಿರುವುದಾಗಿ ಹೇಳಿರುವುದು ಅವರ ಅಜ್ಞಾನ ಪ್ರದರ್ಶನ ಎಂದು ಕಿಡಿಕಾರಿದರು. ಸಾವಿತ್ರಿ ಅವರು 2013ರ ಜು.8 ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತಡೆಹಿಡಿಯುವ ಅಧಿಕಾರ ಹೊಂದಿದ್ದಾರೆ. ಆದರೆ, ಈವರೆಗೆ ತಡೆಯಾಜ್ಞೆ ಹೊರಬಂದಿಲ್ಲ. ಡಿಸಿ ತೀರ್ಪಿನ ವಿರುದ್ಧ ಸರ್ಕಾರ ಕೆಎಟಿ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಲ್ಲವೇಕೆ ಎಂದು ಪ್ರಶ್ನಿಸಿದರು. ನ್ಯಾಯಾಲಯದ ಆದೇಶ ಉಲ್ಲಂಘಿಸುವ ಮೂಲಕ ಅಕ್ರಮ ಎಸಗಿರುವ ಜಿಲ್ಲಾಧಿಕಾರಿ ಸಾವಿತ್ರಿ ಅವರ ರಕ್ಷಣೆಗೆ ಸಚಿವರು, ಶಾಸಕರು ನಿಂತಿದ್ದಾರೆ.  ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಲವರನ್ನು ತಂದು ಇರಿಸಲಾಗಿದೆ. ಈ ಅಕ್ರಮ ಒತ್ತುವರಿಗೆ ಶಾಸಕರು ಕುಮ್ಮಕ್ಕು ನೀಡಿದ್ದಾರೆ. ಇದರಲ್ಲಿ ಹನೂರು ಕ್ಷೇತ್ರದ ಈಗಿನ ಶಾಸಕ ನರೇಂದ್ರ ಭಾಗಿಯಾಗಿದ್ದಾರೆ ಎಂದು ದೂರಿದರು. ಸತ್ತೇಗಾಲ ಬಳಿ ನಿವೃತ್ತ ಎಡಿಪಿಜಿಪಿ ಡಿ.ಪಿ. ನೇಗಿ, ಆಂಧ್ರ ಮೂಲದ ರೆಡ್ಡಿ ಎಂಬವರು ನೂರಾರು ಎಕರೆ ಜಾಗದಲ್ಲಿ ಬೇಲಿ ನಿರ್ಮಿಸಿಕೊಂಡಿದ್ದಾರೆ. ಆದರೆ, ಇವರು ಯಾರ ಬಳಿ ಜಮೀನು ಖರೀದಿಸಿದರು, ಹೇಗೆ ಬಂದು ಇಲ್ಲಿಗೆ ಸೇರಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ವಿಚಾರದಲ್ಲಿ ಸಹಕಾರ ಸಚಿವರ ಬದಲು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಪ್ರತಿಕ್ರಿಯೆ ನೀಡಬೇಕಿತ್ತು. ಆದರೆ, ಅವರು ಮೌನವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ತನಿಖೆ ಮಾಹಿತಿ ಇಲ್ಲ: ಸಾವಿತ್ರಿ ಅವರ ಆದೇಶ ಸಂಬಂಧ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್ ಅವರು ಕಂದಾಯ ಸಚಿವರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದು, ಆ ಬಗ್ಗೆ ತನಿಖೆ ನಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಭೂಹಗರಣ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಕ್ಷೇತ್ರದ ಪ್ರತಿನಿಧಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ ಅವರು, ಈ ಸಂಬಂಧ ನೇರವಾಗಿ ಸಹಕಾರ ಸಚಿವ ಮಹದೇವಪ್ರಸಾದ್, ಶಾಸಕ ನರೇಂದ್ರ ಅವರಿಗೆ ಪತ್ರ ಬರೆದಿದ್ದೇನೆ ಎಂದರು.
ಬಂಡೀಪುರದಲ್ಲಿಅಕ್ರಮ ನಡೆಸಿಲ್ಲ
ಬಂಡೀಪುರ ಬಳಿ ದುಡ್ಡು ಕೊಟ್ಟು ನಾನು ಜಮೀನು ಖರೀದಿಸಿದ್ದೇನೆ. ಈ ವಿಚಾರದಲ್ಲಿ ಹೈಕೋರ್ಟ್ ಸಹ ನನ್ನ ಪರವಾಗಿ ಆದೇಶ ನೀಡಿದೆ. ನಾನು ಅಕ್ರಮವಾಗಿ ಜಮೀನು ಖರೀದಿಸಿದ್ದರೆ ಸರ್ಕಾರ ವಶಪಡಿಸಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಗೋ. ಮಧುಸೂದನ್ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement