ಸುಚಿತ್ರದಲ್ಲಿ ಬಣ್ಣಗಳ ಮೆದ್ದಾಟ
ಕ.ಪ್ರ.ವಾರ್ತೆ , ಮೈಸೂರು , ಅ. 26
ಮೈಸೂರಿನ ರವಿವರ್ಮ ಚಿತ್ರಕಲಾ ಶಾಲೆಯು ಕರ್ನಾಟಕ, ಗೋವಾ, ಕೇರಳ ರಾಜ್ಯದಲ್ಲಿ ಆಯೋಜಿಸಿರುವ ಅಖಿಲ ಭಾರತ ಕಲಾ ಪ್ರದರ್ಶನಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಶನಿವಾರ ನಗರದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಚಾಲನೆ ನೀಡಿದರು.
ಮನೆಯಂಗಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ಅರಸರು ಸಂಗೀತ, ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಕಲಾವಿದರ ಪ್ರತಿಭೆ ಬೇರೆ ಬೇರೆ ರಾಜ್ಯಕ್ಕೂ ಹರಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸಬೇಕು. ಪ್ರತಿ ಪ್ರಯೋಗದಲ್ಲೂ ಹೊಸತನವಿದ್ದರೆ ಕಲಾವಂತಿಕೆಗೆ ಜೀವ ಬರುತ್ತದೆ. ಕಲಾವಿದರಿಗೆ ಮೈಸೂರು ವಿವಿ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಕಲಾವಿದರು ಹೆಚ್ಚು ಹೆಚ್ಚು ಕನಸುಗಳನ್ನು ಕಾಣಬೇಕು. ಅವುಗಳನ್ನು ಮನಸ್ಸಿಗೆ ಇಳಿಸಿಕೊಂಡು ಚಿತ್ರರೂಪಕ್ಕೆ ತಂದಾಗ ಸೊಗಸಾಗಿ ಕಾಣುತ್ತವೆ. ಒಳ್ಳೆಯ ಕನಸು- ಮನಸು ಇದ್ದಲ್ಲಿ ನೋಡುವ ದೃಷ್ಟಿ ಬದಲಾಗುತ್ತದೆ. ರೈತರು ಮತ್ತು ಕಲಾವಿದರಿಬ್ಬರದೂ ಒಂದೇ ಜೀವನ. ಇಬ್ಬರ ಮಾಲಿಗೂ ಫುಟ್ಪಾತೇ ಗತಿ. ಯಾವುದೇ ಆದಾಯ ಇಲ್ಲದೆ ಕಲಾವಂತಿಕೆ ಇಬ್ಬರದೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಆರ್. ಗೋಪಾಲ್ ಮಾತನಾಡಿ, ನಮ್ಮ ಇಲಾಖೆಗೆ ಸೇರಿದ ಕಲಾ ಗ್ಯಾಲರಿ ಇದ್ದು ಯಾರು ಬೇಕಾದರು ಬಳಸಿಕೊಳ್ಳಬಹುದು. ಉಚಿತವಾಗಿ ನೀಡುತ್ತೇವೆ. ಕಲಾ ಪ್ರದರ್ಶನಕ್ಕೆ ಅನುದಾನ ನೀಡುತ್ತೇವೆ ಎಂದು ಕಲಾವಿದರ ಗಮನಕ್ಕೆ ತಂದರು.
ಹಿರಿಯ ಕಲಾವಿದ ಚಿ.ಸು. ಕೃಷ್ಣಸೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಕೀಲ ಎಸ್. ಅರುಣ್ಕುಮಾರ್, ಹಿರಿಯ ಕಲಾವಿದ ಪ್ರೊ.ರಾಮದಾಸ ಆಡ್ಯಂತಾಯ, ರವಿವರ್ಮ ಚಿತ್ರಕಲಾ ಶಾಲೆಯ ಶಿವಕುಮಾರ್ ಕೆಸರುಮಡ ಇದ್ದರು.