ಅಪ್ರಕಟಿತ, ಅಲಕ್ಷಿತ ಗ್ರಂಥಗಳ ಪ್ರಕಟಣೆಯಾಗಲಿ
ಕ.ಪ್ರ.ವಾರ್ತೆ , ಮೈಸೂರು , ಅ. 27
ಪ್ರಾಚೀನ ಕಾಲದ ಅಪ್ರಕಟಿತ ಹಾಗೂ ಅಲಕ್ಷಿತ ಗ್ರಂಥಗಳ ಪ್ರಕಟಣೆ ಸೇರಿದಂತೆ ಶಾಸ್ತ್ರೀಯ ಕನ್ನಡ ಭಾಷೆಯ ಅಭಿವೃದ್ಧಿಗೆ ಅಗತ್ಯವಾದ ನಿರ್ಣಯಗಳನ್ನು ಭಾನುವಾರ ಸಿಐಐಎಲ್‌ನಲ್ಲಿ ನಡೆದ ವಿದ್ವಾಂಸರ ಸಭೆ ಕೈಗೊಂಡಿತು.
ಭಾರತೀಯ ಭಾಷಾ ಸಂಸ್ಥೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷೆಯ ಉನ್ನತ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಮೂರು ದಿನಗಳ ಕಾರ್ಯ ಯೋಜನೆಗಳ ಸಿದ್ಧತಾ ಕಾರ್ಯಾಗಾರದಲ್ಲಿ ಕನ್ನಡ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಹಮ್ಮಿಕೊಳ್ಳಲಾಯಿತು. ಹಳೆಗನ್ನಡ ಪುನಶ್ಚೇತನಕ್ಕೆ ಕಾರ್ಯಾಗಾರ ನಡೆಸುವುದು, ಪ್ರಾಚೀನ ಅಪ್ರಕಟಿತ ಹಾಗೂ ಅಲಕ್ಷಿತ ಗ್ರಂಥಗಳನ್ನು ಪ್ರಕಟಿಸುವುದು, ಕನ್ನಡ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್ ಹಾಗೂ ಹಿಂದಿ ಮುಂತಾದ ಭಾಷೆಗಳಿಗೆ ಅನುವಾದಿಸಿ ಕನ್ನಡ ಸಾಹಿತ್ಯ ಸತ್ವ ತಿಳಿಸುವುದು, ಕನ್ನಡ ಕೃತಿಗಳನ್ನು ಗಣಕೀರಣಗೊಳಿಸುವುದು, ಪ್ರಾಚೀನ ಕಾವ್ಯದ ಪ್ರಭಾವವನ್ನು ಗಮಕದ ಮೂಲಕ ಕರ್ನಾಟಕದಾದ್ಯಂತ ಪ್ರಚಾರ ಮಾಡುವುದು, ಶಾಸ್ತ್ರೀಯ ಭಾಷೆ ಕುರಿತು ರೇಡಿಯೋ, ದೂರದರ್ಶನ ಮೂಲಕ ಪ್ರಸಾರ ನಡೆಸುವುದು ನಿರ್ಣಯಗಳನ್ನು ಮಂಡಿಸಲಾಯಿತು. ಪ್ರಾಚೀನ ಕನ್ನಡ ಭಾಷೆಗಾಗಿ ಜೀವನ ಪರ್ಯಂತ ದುಡಿದ ಓರ್ವ ಶ್ರೇಷ್ಠ ವಿದ್ವಾಂಸರಿಗೆ 5 ಲಕ್ಷ ನಗದಿನೊಂದಿಗೆ ನೀಡುವ ಕ್ಲಾಸಿಕ್ ಅವಾರ್ಡ್ ಪ್ರಶಸ್ತಿ, 30- 40 ವಯೋವಾನದ 5 ಮಂದಿ ಯುವ ವಿದ್ವಾಂಸರಿಗೆ ತಲಾ 1 ಲಕ್ಷ ನಗದು ಪ್ರಶಸ್ತಿ ನೀಡಲು ಅವಕಾಶವಿದ್ದು, 3 ವರ್ಷಗಳಿಂದ ಪ್ರದಾನ ಮಾಡದಿರುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.