ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಪ್ಪೆ ಗ್ರಾಮದಲ್ಲಿ ನೀರು ಬಳಕೆದಾರರಿಗೆ ತರಬೇತಿ

Vishwanath S
Updated On : 28 Oct 2013, 12:23 pm

ಕ.ಪ್ರ.ವಾರ್ತೆ , ಟಿ. ನರಸೀಪುರ , ಅ. 27
ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಕಾವೇರಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ(ಕಾಡಾ) ವತಿಯಿಂದ ನೀರು ಬಳಕೆದಾರರಿಗೆ ಒಂದು ದಿನದ ಸಂಚಾರಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಡಾ ಕೃಷಿ ನಿರ್ದೇಶಕ ಎನ್. ತಿಮ್ಮರಾಜು ಮಾತನಾಡಿ, ಕಾಡಾ ಕೃಷಿ ಇಲಾಖೆಯಿಂದ ನೀರು ಬಳಕೆದಾರರಿಗೆ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡ ನಿಮ್ಮ ಹಾಗೂ ಅಕ್ಕಪಕ್ಕದ ಸಂಘದ ಸದಸ್ಯರಿಗೆ, ರೈತರಿಗೆ ಮಾಹಿತಿ ನೀಡಿ ಅಭಿವೃದ್ಧಿಯತ್ತ ಗಮನ ಹರಿಸಲು ಸಲಹೆ ನೀಡಿದರು. ಕುಪ್ಪೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ತಾಪಂ ಮಾಜಿ ಅಧ್ಯಕ್ಷ ಅಂದಾನಿ, ಮಹದೇವು, ಜೆ. ಮಹದೇವು, ರೇಖಾ, ಶಿವರಾಮು, ಸಿದ್ದಪ್ಪಾಜಿ, ಮಾದೇವಯ್ಯ, ಬೋರಯ್ಯ, ಹಳೇಗೌಡ ನಾಗೇಶ್, ಮಾದೇವು, ಹೊಂಬಯ್ಯ, ಗೋವಿಂದೇಗೌಡ ಇದ್ದರು.
ಸಹಕಾರ; ಅಧ್ಯಕ್ಷರಾಗಿ ಮಾರ್ಕಂಡೇಗೌಡ ಆಯ್ಕೆ
ಸಾಲಿಗ್ರಾಮ: ತಂದ್ರೆ ಅಂಕನಹಳ್ಳಿ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಮಾರ್ಕಂಡೇಗೌಡ ಅವಿರೋಧವಾಗಿ ಪುನಾರಾಯ್ಕೆಯಾಗಿದ್ದಾರೆ.
ಇದೇ ವೇಳೆ ಮಾತನಾಡಿದ ಮಾರ್ಕಂಡೇಗೌಡ, ಸರ್ವ ಸದಸ್ಯರ ಸಹಕಾರದೊಂದಿಗೆ ಸಂಘದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಸಂಘದ ನಿರ್ಮಾಣಕ್ಕಾಗಿ ಶ್ರಮಿಸುತ್ತೇನೆ ಎಂದರು.
ಸಂಘದ ನಿರ್ದೇಶಕ ತಂದ್ರೆಯ ಟಿ. ಮಹದೇವಪ್ಪ, ತಂದ್ರೆ ಅಂಕನಹಳ್ಳಿ ಬಸವರಾಜು, ಸೋಮಶೇಖರ್, ಕುಲುಮೆ ಹೊಸೂರಿನ ಲೋಕೆಶ್, ಮಂಗಳವಾಡಿಯ ಮಂಜಯ್ಯ, ಸಿಂಗನಕುಪ್ಪೆಯ ಗೌರಮ್ಮ ಹಾಗೂ ಕಾರ್ಯದರ್ಶಿ ಶಿವಣ್ಣ ಇದ್ದರು.
ಬ್ಯಾಸ್ಕೆಟ್‌ಬಾಲ್; ಎರಡನೇ ಸುತ್ತಿಗೆ ಮೈಸೂರು
ಮೈಸೂರು: ರಾಜ್ಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಅಸೋಸಿಯೇಷನ್ ಕಪ್ ಚಾಂಪಿಯನ್‌ಶಿಪ್‌ನ ಎರಡನೇ ದಿನವಾದ ಭಾನುವಾರ ಪ್ರೊಟೆಕ್ಟ್ ಮೈಸೂರು ತಂಡವು ಎಸ್‌ಬಿಐ ತಂಡವನ್ನು 67- 31 ಅಂತರದಿಂದ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದೆ.
ಪ್ರೊಟೆಕ್ಟ್ ಮೈಸೂರು ತಂಡದ ಪರ ಖೀಜರ್ ಮತ್ತು ಎಸ್‌ಬಿಐ ತಂಡದ ಪರ ಜಗದೀಶ್ ತಲಾ 18 ಅಂಕ ಪಡೆದು ಉತ್ತಮ ಆಟ ಪ್ರದರ್ಶಿಸಿದರು. ಎಸ್‌ಸಿ ತಂಡವು ಸಿಜೆಸಿ ತಂಡವನ್ನು 67-31 ಅಂತರದಿಂದ ಮಣಿಸಿದೆ. ಅಂತೆಯೆ ಜೆಎಸ್‌ಸಿ ತಂಡವು, ಶಿವಮೊಗ್ಗ ಯೂಥ್ಸ್ ತಂಡವನ್ನು 50-20 ಅಂತರದಿಂದ ಪರಾಭವಗೊಳಿಸಿತು. ವಿಬಿಸಿ ಮಂಡ್ಯ ತಂಡವು, ಸಾಯಿ ಧಾರವಾಡ ತಂಡವನ್ನು 54- 41 ಅಂತರದಿಂದ ಸೋಲಿಸಿದೆ. ವಿಬಿಸಿ ಪರ ಶಮಂತ್ 25 ಅಂಕ ಪಡೆದರೆ, ಸಾಯ್ ತಂಡದ ಪರ ವಿಶಾಲ್ 11 ಅಂಕ ಪಡೆದರು. ಎಂಇಜಿ ತಂಡವನ್ನು ರಾಜ್‌ಮಹಲ್ ಬಿಸಿ ತಂಡವನ್ನು 60-14 ಅಂತರದಲ್ಲಿ ಸೋಲಿಸಿದೆ. ಬೆಂಗಾಳಿಸ್ ತಂಡವು, ಪಿನಾಕಿನಿ ಗೌರಿಬಿದನೂರು ತಂಡವನ್ನು 61-20 ಅಂತರದಿಂದ ಸೋಲಿಸಿತು.
ಮೈವಿವಿ: 42 ಬಹುಮಾನ
ಮೈಸೂರು: ಮೈಸೂರು ವಿವಿ ತೋಟಗಾರಿಕೆ ವಿಭಾಗವು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಅಲಂಕಾರಿಕ ತೋಟಗಾರಿಕಾ ವಿವಿಧ ಸ್ಪರ್ಧೆಯಲ್ಲಿ 27 ಪ್ರಥಮ, 10 ದ್ವಿತೀಯ, 3 ತೃತೀಯ ಹಾಗೂ 2 ಸಮಾಧಾನಕರ ಸೇರಿದಂತೆ ಒಟ್ಟು 42 ಬಹುಮಾನಗಳನ್ನು ಪಡೆದುಕೊಂಡಿದೆ ಎಂದು ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಲ್ಯಾಪ್‌ಟಾಪ್ ವಿತರಣೆಗೆ ಅರ್ಜಿ ಆಹ್ವಾನ
ಮೈಸೂರು: ವಾರ್ತಾ ಇಲಾಖೆಯಿಂದ ಎಸ್ಸಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ- 2013-14ರ ಅಡಿಯಲ್ಲಿ ಎಸ್ಸಿ, ಎಸ್ಟಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್ ಅಥವಾ ಡಿಜಿಟಲ್ ಕ್ಯಾಮೆರಾ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ, ಸಮೂಹ ಸಂವಹನ, ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಷಯಗಳಲ್ಲಿ ಪೂರ್ಣಾವಧಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದು, ಹಿಂದಿನ ಸಾಲಿನ ಅರ್ಹತಾ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕ ಗಳಿಸಿದ್ದವರು ತಮ್ಮ ಕಾಲೇಜಿನ ಪ್ರಾಂಶುಪಾಲರು ಅಥವಾ ವಿಭಾಗದ ಮುಖ್ಯಸ್ಥರ ಮೂಲಕ ಅ.29ರೊಳಗೆ ಅರ್ಜಿ ಸಲ್ಲಿಸಬಹುದು. ದೂ. 0821- 2423251, ಮೊ. 94484 89195 ಸಂಪರ್ಕಿಸಿ.
ಯಕ್ಷಗಾನ ಕಲಿಕಾ ಕಮ್ಮಟ
ಮೈಸೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಯಕ್ಷಗಾನ ಕಲಿಕಾ ಕಮ್ಮಟ ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. 15ರಿಂದ 30 ವರ್ಷದೊಳಗಿನ ವಯೋವುತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 15 ಮಂದಿ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು- 560 002. ಇಲ್ಲಿಗೆ ನ.15ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ದೂ. 080- 22113146 ಸಂಪರ್ಕಿಸಬಹುದು.
ನಾಳೆ ಜಿಲ್ಲಾ ದಸಂಸ ಸಭೆ
ಮೈಸೂರು: ದಸಂಸ ಜಿಲ್ಲಾ ಕಚೇರಿಯಲ್ಲಿ ಅ.29ರ ಮಧ್ಯಾಹ್ನ 12ಕ್ಕೆ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಿರುವ ವಿಭಾಗ ಮಟ್ಟದ ಅಧ್ಯಯನ ಶಿಬಿರ, ಎಚ್.ಡಿ. ಕೋಟೆ ತಾಲೂಕು ಮಲಾರ ಗ್ರಾಮದಲ್ಲಿ ದಲಿತ ಮುಖಂಡ ಶಿವಣ್ಣ ಕೊಲೆ ಪ್ರಕರಣ, ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಲು ಕಾರ್ಯಕ್ರಮ ರೂಪಿಸುವ ಕುರಿತು ಚರ್ಚೆ ಮತ್ತು ದಸಂಸ ಸಂಘಟನೆ ಪುನಶ್ಚೇತನ ಕುರಿತು ಚರ್ಚಿಸಲಾಗುವುದು. ಆದ್ದರಿಂದ ಸಮಿತಿ ಪದಾಧಿಕಾರಿಗಳು ತಪ್ಪದೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಮನವಿ ಮಾಡಿದ್ದಾರೆ.
ನಾಳೆ ಉದಯ ಕಥಾ ಗುಚ್ಛ ಬಿಡುಗಡೆ
ಮೈಸೂರು: ಗಂಗಾ ರಾಜಪುರೋಹಿತ ಕಥಾ ಸ್ಪರ್ಧೆಯ ಉದಯ ಕಥಾ ಗುಚ್ಛ ಕೃತಿ ಬಿಡುಗಡೆ ಕಾರ್ಯಕ್ರಮವು ಅ.29ರ ಸಂಜೆ 5.30ಕ್ಕೆ ಗಾನಭಾರತಿ ಸಭಾಂಗಣದಲ್ಲಿ ನಡೆಯಲಿದೆ. ಲೇಖಕಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಕೃತಿ ಬಿಡುಗಡೆ ಮಾಡುವರು. ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಜಯಶ್ರೀ ಶಾನಭಾಗ್ ಕಾರ್ಯಕ್ರಮ ನಿರ್ವಹಣೆ ಮಾಡುವರು. ಗಂಗಾ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಲೇಖಕಿಯರು ತಮ್ಮ ಗೌರವ ಪ್ರತಿ ಪಡೆಯಬಹುದು. ಬಳಿಕ ಆಲೂರು ವೆಂಕಟರಾಯರ ಮನೆತನದ ಗೀತಾ ಆಲೂರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಲಕ್ವಾ ಕುರಿತು ಕಾರ್ಯಕ್ರಮ
ಭಾರತೀಯ ವೈದ್ಯಕೀಯ ಸಂಸ್ಥೆಯು ಅ.29ರ ಸಂಜೆ 4.30ಕ್ಕೆ ಸಯ್ಯಾಜಿರಾವ್ ರಸ್ತೆಯ ಐಎಂಎ ಸಭಾಂಗಣದಲ್ಲಿ ವಿಶ್ವ ಲಕ್ವ ದಿನ ಅಂಗವಾಗಿ ಲಕ್ವ ತಡೆಗಟ್ಟುವಿಕೆ ಮತ್ತು ಪುನರ್ವಸತಿ ಕುರಿತ ಕಾರ್ಯಕ್ರಮ ಆಯೋಜಿಸಿದೆ. ನರರೋಗ ತಜ್ಞರಾದ ಡಾ. ವಿ.ಕೆ. ರಾಧಾಕೃಷ್ಣ, ಡಾ. ಸೋಮನಾಥ ವಾಸುದೇವ್, ಡಾ. ಕೇಶವ್, ಡಾ.ಕೆ. ಸುರೇಶ್ ಭಾಗವಹಿಸುವರು. ಸಂಸ್ಥೆ ಅಧ್ಯಕ್ಷ ಡಾ. ಎನ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು.
ಇಂಟರ್ನ್‌ಷಿಪ್ ಕಾರ್ಯಕ್ರಮ
ಕ.ಪ್ರ.ವಾರ್ತೆ , ಮೈಸೂರು , ಅ. 27
ಕೊಲಂಬಿಯಾ ಏಷ್ಯಾ ಆಸ್ಪತ್ರೆಯು ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಂಟರ್ನ್‌ಷಿಪ್ ಕಾರ್ಯಕ್ರಮ ಆಯೋಜಿಸಿತ್ತು.
ವಿದ್ಯಾವರ್ಧಕ ಪಿಯು ಕಾಲೇಜು, ಕೌಟಿಲ್ಯ ವಿದ್ಯಾಲಯ, ವಿದ್ಯಾವಿಕಾಸ ಪಿಯು ಕಾಲೇಜು, ಕಾವೇರಿ ಶಿಕ್ಷಣ ಸಂಸ್ಥೆ, ಎಸ್‌ಡಿಎಂ ಪಿಯು ಕಾಲೇಜು, ಮರಿಮಲ್ಲಪ್ಪ ಪಿಯು ಕಾಲೇಜು, ಸದ್ವಿದ್ಯಾ ಪಿಯು ಕಾಲೇಜು, ಸೇಂಟ್ ಮೈಕೇಲ್ ಪಿಯು ಕಾಲೇಜು ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಕಿಣಿ, ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಇಂಟರ್ನ್‌ಷಿಪ್ ಮಾಡುವುದು ಸಂತೋಷವನ್ನುಂಟು ಮಾಡಿದೆ. ಇಲ್ಲಿ ನಾವು ಉತ್ತಮ ತರಬೇತಿ ಪಡೆದಿದ್ದು, ನಮ್ಮ ದಕ್ಷತೆ ಉತ್ತಮವಾಗಲು ಕಾರಣವಾಗಿದೆ ಎಂದರು. ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಡಾ. ವಿಜು ರಾಜನ್ ಮಾತನಾಡಿ, ಶಿಕ್ಷಣ ಎಂಬುದು ತರಗತಿಗಳ ಕೊಠಡಿಯ ಹೊರಗೂ ಇರಬೇಕು. ಈ ಇಂಟರ್ನ್‌ಷಿಪ್ ಕಾರ್ಯಕ್ರಮವನ್ನು ವಿಶೇಷ ಆಸ್ಪತ್ರೆ ಮತ್ತು ಅನ್ವಯಿಕ ಔಷಧ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement