ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಸರ ಸ್ನೇಹಿ ದೀಪಾವಳಿ ಆಚರಣೆ ಜಾಗೃತಿಗೆ ಚಿತ್ರಕಲಾ ಸ್ಪರ್ಧೆ

Vishwanath S
Updated On : 28 Oct 2013, 12:22 pm

ಕ.ಪ್ರ.ವಾರ್ತೆ , ಮೈಸೂರು , ಅ. 27
ಪರಿಸರ ಸ್ನೇಹಿ ದೀಪಾವಳಿ ಆಚರಣೆ ಸಂಬಂಧ ಅರಿವು ಮೂಡಿಸುವ ಸಲುವಾಗಿ ಮೈಸೂರು ವಿಜ್ಞಾನ ಪರಿಷತ್ತು ಭಾನುವಾರ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಿತು.
ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥನಗರದ ಸಂಗ್ರಹಾಲಯದ ಅವರಣದಲ್ಲಿ ಏರ್ಪಡಿಸಿದ್ದ ಈ ಸ್ಪರ್ಧೆಯು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯಿತು. ನಗರದ ವಿವಿಧ ಶಾಲೆಗಳ ಸುಮಾರು 90 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು ಎಂಬ ವಿಷಯ ಕುರಿತು ಸ್ಪರ್ಧೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಕೇಂದ್ರದ ವಿಜ್ಞಾನಿ ಡಾ. ಟಿ. ತಿಪ್ಪೇಸ್ವಾಮಿ ಅವರು, ಪಟಾಕಿಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ಹಾಗೂ ಪ್ರತಿವರ್ಷ ಇದರಿಂದಾಗಿ ಸಂಭವಿಸುವ ಅವಘಡಗಳ ಬಗ್ಗೆ ಉಪನ್ಯಾಸ ನೀಡಿದರು.
ಬಹುಮಾನ ವಿತರಣೆ: ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಪಿ. ನಿರಂಜನ್ ಅವರು ಬಹುಮಾನ ವಿತರಿಸಿದರು.  
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆ.ಜೆ. ಸಂಚಿನಾ ಪ್ರಥಮ, ಸಾನ್ವಿ ರಾಕೇಶ್ ದ್ವಿತೀಯ ಹಾಗೂ ಪ್ರತೀಕ್ಷ ಮೂರನೇ ಬಹುಮಾನವನ್ನೂ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿ. ಅಂಕಿತಾ ಪ್ರಥಮ, ಬಿ. ಕಾವ್ಯ ದ್ವಿತೀಯ ಹಾಗೂ ಎಸ್. ಸೃಜನ್ ಮೂರನೇ ಬಹುಮಾನವನ್ನೂ, ಪ್ರೌಢಶಾಲಾ ವಿಭಾಗದಲ್ಲಿ ಸಿ. ವರ್ಷ ಅರಸ್ ಪ್ರಥಮ, ಎಸ್. ಸಚಿನ್ ದ್ವಿತೀಯ ಹಾಗೂ ಯಶಸ್ವಿನಿ ಮೂರನೇ ಬಹುಮಾನವನ್ನೂ ಪಡೆದರು. ಆರ್‌ಎಂಎನ್‌ಎಚ್ ವಿಜ್ಞಾನಿ ಬಿ.ಎಸ್. ಯೋಗೇಂದ್ರ, ಪಾಂಡವಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕರಾದ ಮಹೇಶ್ ಕಾಮಟೆ. ನಾಗೇಶ್ ಹಾಗೂ ಡಿ.ಆರ್. ಶ್ರೀನಿವಾಸ್ ಭಾಗವಹಿಸಿದ್ದರು.
ಪರಿಷತ್ತಿನ ಅಧ್ಯಕ್ಷ ಸಿ. ಕೃಷ್ಣಗೌಡ, ಉಪಾಧ್ಯಕ್ಷ ಡಾ. ಟಿ. ಶಿವಲಿಂಗಸ್ವಾಮಿ, ಕಾರ್ಯದರ್ಶಿ ಜಿ.ಬಿ. ಸಂತೋಷಕುಮಾರ್ ಹಾಗೂ ಸದಸ್ಯರಾದ ಡಿ.ಎಸ್. ವೈಜಯಂತಿ ಹಾಗೂ ಜಿ.ಕೆ. ಕಾಂತರಾಜ್ ಇದ್ದರು.
ಶಬ್ದ ಮಾಲಿನ್ಯ ಅರಿವು ಜಾಥಾ
ಮೈಸೂರು: ದೀಪಾವಳಿ ಹಬ್ಬದಲ್ಲಿ ಹೆಚ್ಚಿನ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಿ ಶಬ್ದ ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ(ಆಯಿಷ್) ವಿದ್ಯಾರ್ಥಿಗಳು ಭಾನುವಾರ ಶಬ್ದ ಮಾಲಿನ್ಯ ಜಾಗೃತಿ ಜಾಥಾ ಹಮ್ಮಿಕೊಂಡಿದ್ದರು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಬಳಿಯ ವೃತ್ತದಲ್ಲಿ ಆಯಿಷ್ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು. ಪ್ರಾಣಿ- ಪಕ್ಷಿಗಳಿಗೆ ಆಗುವ ತೊಂದರೆ, ಪಟಾಕಿ ಸಿಡಿತದಿಂದ ಬರುವ ಹೊಗೆಯಿಂದ ಉಸಿರಾಟ ತೊಂದರೆ ಬಗ್ಗೆ ಬೀದಿ ನಾಟಕದ ಮೂಲಕ ತಿಳಿಸಿಕೊಟ್ಟರು. ಈ ಜಾಗೃತಿ ಜಾಥಾಗೆ ಆಯಿಷ್‌ನ ನಿರ್ದೇಶಕಿ ಡಾ. ಎಸ್.ಆರ್. ಸಾವಿತ್ರಿ, ಮೈಸೂರು ವಿವಿ ಎನ್‌ಎಸ್‌ಎಸ್ ಯೋಜನಾ ಸಂಯೋಜಕ ಡಾ. ಎಂ. ರುದ್ರಯ್ಯ ಚಾಲನೆ ನೀಡಿದರು.
ಡಾ. ಎಸ್.ಆರ್. ಸಾವಿತ್ರಿ ಮಾತನಾಡಿ, ಪ್ರತಿ ವರ್ಷ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದರಿಂದ ನೂರಾರು ಮಂದಿ ಕಣ್ಣು ಹಾಗೂ ಕಿವಿಗೆ ಹಾನಿ ಆಗುತ್ತಿದೆ. ಕಳೆದ ದೀಪಾವಳಿಯಲ್ಲಿ 15ಕ್ಕೂ ಹೆಚ್ಚಿನ ಮಂದಿ ಆಯಿಷ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದೀಪಾವಳಿ ದಿನ ದೀಪ ಬೆಳಗಿಸುವುದಕ್ಕೆ ಹಾಗೂ ಹೂವಿನ ಕುಂಡದಂತಹ ಪಟಾಕಿ ಸಿಡಿಸುವಂತೆ ಅವರು ಮನವಿ ಮಾಡಿದರು. ಆಯುರ್ವೇದ ಆಸ್ಪತ್ರೆಯ ಮುಂಭಾಗದಿಂದ ಹೊರಟ ಜಾಥಾವು ಇರ್ವಿನ್ ರಸ್ತೆ, ರೈಲು ನಿಲ್ದಾಣ ಬಳಿಯ ವೃತ್ತ, ಜೆಎಲ್‌ಬಿ ರಸ್ತೆಯ ಮೂಲಕ ಅಶೋಕ ವೃತ್ತ ತಲುಪಿದರು. ಆಯಿಷ್‌ನ ಪಿಸಿಒಡಿ ವಿಭಾಗದ ಮುಖ್ಯಸ್ಥೆ ಡಾ. ಪಿ. ಮಂಜುಳಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement