ಭೇರ್ಯದಲ್ಲಿ 2ಗೆ 20 ಲೀ. ಕುಡಿವ ನೀರು
ಕ.ಪ್ರ.ವಾರ್ತೆ , ಭೇರ್ಯ , ಅ. 27
ಭೇರ್ಯ ಗ್ರಾಮದಲ್ಲಿ 2 ರು.ಗೆ 20 ಲೀಟರ್ ಶುದ್ಧ ಕುಡಿಯುವ ನೀರು ವಿತರಿಸುವ ಕೇಂದ್ರವನ್ನು ಅತಿ ಶೀಘ್ರದಲ್ಲಿ ಸ್ಥಾಪಿಸುವುದಾಗಿ ಶಾಸಕ ಸಾ.ರಾ. ಮಹೇಶ್ ತಿಳಿಸಿದರು.
ಭೇರ್ಯ ಗ್ರಾಮದ ಗ್ರಾಪಂ ಆವರಣದಲ್ಲಿ ಭಾನುವಾರ ನಡೆದ ಮತದಾರರಿಗೆ ಶಾಸಕರಿಂದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಾರ್ವಜನಿಕರಿಗೆ ಸ್ಪಂದಿಸುವ ವೈದ್ಯರನ್ನು ನೇಮಕ ಮಾಡುವಂತೆ ಸೂಚಿಸಿದರು.
ಭೇರ್ಯ ಗ್ರಾಪಂಗೆ ನನ್ನ ಅವಧಿಯಲ್ಲಿ ಒಟ್ಟು 650 ಆಶ್ರಯ ಮನೆ ನೀಡಿದ್ದೇನೆ. ಆ ಪೈಕಿ 150 ಮನೆಗಳನ್ನು ಸರಿಯಾದ ವೇಳೆಗೆ ನಿರ್ಮಿಸದೆ, ಈ ಹಿಂದೆ ಇದ್ದ ಪಿಡಿಒ ನಿರ್ಲಕ್ಷ್ಯದಿಂದ ಮನೆಗಳು ರದ್ದಾಗಿದೆ ಎಂದರು. ಕೆಲವು ಫಲಾನುಭವಿಗಳಿಗೆ ಮಂಜೂರಾತಿ ಪತ್ರ ದೊರೆತು 8 ತಿಂಗಳಾದರೂ ಅನುದಾನದ ಹಣ ನೀಡಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೂಡಲೆ ರದ್ದಾದ ಎಲ್ಲಾ ಮನೆಗಳನ್ನು ಪುನರ್ ನಿರ್ಮಿಸುವ ಸಂಬಂಧ ವಸತಿ ಸಚಿವರನ್ನು ಭೇಟಿಯಾಗಿ ಹೊಸ ಆದೇಶ ತರುವುದಾಗಿ ಭರವಸೆ ನೀಡಿದರು.
ನಂತರ ಶಾಸಕರು ಗ್ರಾಮಸ್ಥರ ಕುಂದುಕೊರತೆ ಆಲಿಸಿ ಸೋಮವಾರ ಮೈಸೂರಿನಲ್ಲಿ, ಶುಕ್ರವಾರ ಕೆ.ಆರ್. ನಗರದ ತಾಪಂ ಕಚೇರಿ, ತಿಂಗಳ ಕೊನೆಯ ಶನಿವಾರ ಸಾಲಿಗ್ರಾಮದಲ್ಲಿ, ಪ್ರತಿ ದಿನ ತಾಲೂಕಿನ ಯಾವುದಾರೂ ಒಂದು ಗ್ರಾಮದಲ್ಲಿ ಇರುತ್ತೇನೆ. ಏನೆ ಸಮಸ್ಯೆ ಇದ್ದರೂ ನನ್ನನ್ನು ಭೇಟಿ ಮಾಡಬಹುದು ಎಂದು ತಿಳಿಸಿದರು. ನಂತರ ಗ್ರಾಪಂ ವತಿಯಿಂದ ಶಾಸಕರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಜಯಮಾಲ, ಉಪಾಧ್ಯಕ್ಷ ಬಿ.ಕೆ. ಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದೀಕ್ ಖಾನ್, ಪಿಡಿಒ ರಾಜ್ಕುಮಾರ್, ಕಾರ್ಯದರ್ಶಿ ಬಸವರಾಜ್, ಗ್ರಾಪಂ ಸದಸ್ಯರಾದ ಸೋಮು, ತಾಯಮ್ಮ, ಸುದರ್ಶನ್, ಜಿಪಂ ಎಂಜನಿಯರ್ ಚಂದ್ರಕಾಂತ್, ಎಸ್ಐ ಮಹೇಶ್, ಗ್ರಾಮಲೆಕ್ಕಿಗ ಗುರುಪ್ರಸಾದ್, ಜೆಡಿಎಸ್ ಮುಖಂಡರಾದ ಲೋಕೇಶ್, ಶಿವಕುಮಾರ್, ವಕೀಲ ಶಿವಶಂಕರ್, ಜುನೇದ್ ಬೇಗ್ ಇದ್ದರು.