ವಚನ ಸಾಹಿತ್ಯ ಅನುವಾದ ಕ್ಲಿಷ್ಟಕರ
ಕ.ಪ್ರ.ವಾರ್ತೆ , ಮೈಸೂರು , ಅ. 27
ಆತ್ಮಜ್ಞಾನದ ವಚನ ಸಾಹಿತ್ಯ ಅನುವಾದ ಕ್ಲಿಷ್ಟಕರ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ಸರಸ್ವತಿಪುರಂ ಜೆಎಸ್‌ಎಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಮೆರಿಕದ ಡಾ. ಗುರು ಎಸ್. ಬಳೆ ಹಾಗೂ ಡಾ. ಎಲ್. ಲಿಂಗರಾಜು ಅವರ ಆಂಗ್ಲ ಅನುವಾದಿತ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಮಾನ್ಯ ಕೃತಿಗಳ ಅನುವಾದಕ್ಕಿಂತ ವಚನ ಸಾಹಿತ್ಯ ಅನುವಾದ ಕಷ್ಟದ ಕೆಲಸ. ಇದರ ಭಾಷಾಂತರಕ್ಕೆ ತಾಂತ್ರಿಕ ಪದಗಳ ಪರಿಚಯ ಹಾಗೂ ಆಧ್ಯಾತ್ಮಿಕತೆಯ ಅರಿವು ಬಹುಮುಖ್ಯ. ಅಂತಹ ಆತ್ಮಜ್ಞಾನದ ಗ್ರಂಥಗಳ ಅನುವಾದ ನಿಜಕ್ಕೂ ಲೇಖಕರಿಗೆ ಒಂದು ದೊಡ್ಡ ಸವಾಲು ಎಂದರು.
ಜಗತ್ತಿನಲ್ಲಿ ಇಂದು ಅಹಂಕಾರದಿಂದ ಅನೇಕ ಅನಾಹುತಗಳು ನಡೆದಿವೆ. ಎಲ್ಲಿಯ ತನಕ ಮನುಷ್ಯನಲ್ಲಿ ಆಹಂ ಇರುತ್ತದೋ ಅಲ್ಲಿಯವರೆಗೆ ಭಯ ತಪ್ಪುದಿಲ್ಲ. ನಿರಾಹಂಕಾರಿಗಳಿಗೆ ಭಯದ ಗೊಡುವೆ ಇರುವುದಿಲ್ಲ. ನಿರಾಹಂಕಾರಕ್ಕೆ ಸಿದ್ದಲಿಂಗೇಶ್ವರರು ಒಡೆಯರು. ಅವರ ನಿರ್ಭಯದ ವಚನಗಳ ತತ್ವ ವಿಚಾರಗಳು ಸಮಾಜಕ್ಕೆ ಪ್ರಸ್ತುತ ಅವಶ್ಯಕ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಲೇಖಕರಾದ ಡಾ. ಗುರು. ಎಸ್. ಬಳೆ ಹಾಗೂ ಡಾ.ಎಲ್. ಲಿಂಗರಾಜು ಅವರು ಅಮೆರಿಕದಲ್ಲಿ ಅನೇಕ ವರ್ಷಗಳ ಕಾಲ ನೆಲಸಿ, ಅಲ್ಲಿನ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ಶರಣ ವಚನಗಳು ಹಾಗೂ ವೀರಶೈವ ತತ್ವಗಳನ್ನು ಅಲ್ಲದೆ ಆ ಮೂಲಕ ಕನ್ನಡವನ್ನು ಪ್ರಚಾರ ಪಡಿಸುತ್ತಿರುವುದು ಕಾರ್ಯ ಶ್ಲಾಘನೀಯ ಎಂದರು.
ಕೃತಿಗಳ ಕುರಿತು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು. ಲೇಖಕರಾದ ಡಾ. ಗುರು ಎಸ್. ಬಳೆ ಅನಿಸಿಕೆ ವ್ಯಕ್ತಪಡಿಸಿದರು. ಪರಿಷತ್ ನಗರ ಘಟಕದ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ನಾಗೇಂದ್ರ ಮೂರ್ತಿ ಸ್ವಾಗತಿಸಿದರು. ನಂತರ ಪರಿಷತ್ತಿನ ಸರ್ವ ಸದಸ್ಯರ ಸಭೆ ನಡೆಯಿತು.