ಇಂದು ಮೈಸೂರು ತಾಪಂ ಚುನಾವಣೆ
ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಅ.29ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಹುಣಸೂರು ರಸ್ತೆಯ ತಾಪಂ ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಅಧಿಕಾರ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ ಬಿಜೆಪಿಯ ಹೆಚ್ಚು ಮಂದಿ ಸದಸ್ಯರು ಯಾರಿಗೆ ಬೆಂಬಲ ನೀಡುತ್ತಾರೋ ಅವರು ಅಧಿಕಾರ ಹಿಡಿಯುವುದು ನಿಶ್ಚಿತ. 29 ಸದಸ್ಯ ಬಲದ ಮೈಸೂರು ತಾಪಂನಲ್ಲಿ 12 ಕಾಂಗ್ರೆಸ್, 11 ಜೆಡಿಎಸ್ ಮತ್ತು 6 ಮಂದಿ ಬಿಜೆಪಿ ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯಲು 15 ಮಂದಿಯ ಬೆಂಬಲ ಬೇಕು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ, ಉಪಾಧ್ಯಕ್ಷ ಸ್ಥಾನ ಬಿಸಿಎ ಎಗೂ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಇಬ್ಬರು ಬಿಜೆಪಿ ಸದಸ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಉಳಿದ ನಾಲ್ಕು ಮಂದಿ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ನವರು ತಮ್ಮ ಪರ ಒಲಿಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಅದು ನಿಜವಾದರೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ. ಆದರೆ ಉಳಿದ ನಾಲ್ಕು ಮಂದಿ ಬಿಜೆಪಿ ಸದಸ್ಯರು ಯಾರಿಗೂ ಸಿಕ್ಕಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ನಿರ್ಮಲ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಯ್ಯ ಆಕಾಂಕ್ಷಿಗಳಾದರೆ, ಜೆಡಿಎಸ್ನಲ್ಲಿ ರಾಣಿ ಮತ್ತು ರಾಜಮ್ಮ ಆಕಾಂಕ್ಷಿಗಳಾಗಿದ್ದಾರೆ.