ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿಷ್ಠೆಯಿಂದ ಸೇವಾವಧಿ ನಿರ್ವಹಿಸಿ: ಚರಣ್ ರೆಡ್ಡಿ

Rashmi Kasaragodu
Updated On : 28 Oct 2013, 11:32 am

ಕ.ಪ್ರ.ವಾರ್ತೆ    ಮೈಸೂರು    ಅ. 28
ಪೊಲೀಸರು ಸೇವಾವಧಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಪೊಲೀಸ್ ಇಲಾಖೆ ತರಬೇತಿ ವಿಭಾಗದ ಐಜಿಪಿ ಕೆ.ಎಸ್.ಆರ್. ಚರಣ್ ರೆಡ್ಡಿ ಕರೆ ನೀಡಿದರು.
ನಗರದ ಸಿಎಆರ್ ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 6ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ಸೇರಿರುವ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಪ್ರತಿಜ್ಞಾ ವಿಧಿ ಪಾಲಿಸದರೇ ಸಾಕು. ಆದರೆ, ಪೊಲೀಸರು ಸೇವೆಗೆ ಸೇರಿದ 5-6 ವರ್ಷಗಳಲ್ಲಿ ಬದಲಾಗುತ್ತಿದ್ದಾರೆ. ಅದು ಆಗಬಾರದು. ಪ್ರತಿಯೊಬ್ಬರು ತಮ್ಮ ತರಬೇತಿ ಅವಧಿಯನ್ನು ಸ್ಮರಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಪೊಲೀಸರು, ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಪ್ರತಿ ವರ್ಷ 8 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲು ಮುಂದಾಗಿದೆ. ರಾಜ್ಯದಲ್ಲಿ 15ಕ್ಕೂ ಹೆಚ್ಚು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ಈ ವರ್ಷ 5 ಪೊಲೀಸ್ ತರಬೇತಿ ಶಾಲೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಅಮರೇಶ ಸರ್ವೋತ್ತಮ: ಮೈಸೂರಿನ ಸಿಎಆರ್ನಲ್ಲಿ 145 ಮಂದಿ ಪ್ರಶಿಕ್ಷಣಾರ್ಥಿಗಳು 11 ತಿಂಗಳು ತರಬೇತಿ ಹೊಂದಿದ್ದಾರೆ. ಇವರಲ್ಲಿ ಇಬ್ಬರು ಸ್ನಾತಕೋತ್ತರ, 43 ಪದವೀಧರರು ಸೇರಿದಂತೆ ಡಿ.ಇಡಿ, ಪಿಯುಸಿ, ಐಟಿಐ ಹಾಗೂ ಇತರೆ ಹಂತದ ವಿದ್ಯಾರ್ಹತೆ ಪಡೆದಿದ್ದಾರೆ.
ಈ ತರಬೇತಿಯಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ತಾವರಗೇರಾ ಗ್ರಾಮದ ಶರಣಪ್ಪ, ಬಸಮ್ಮ ಅವರ ಪುತ್ರ ಎಸ್.ಕೆ. ಅಮರೇಶ ಸರ್ವೋತ್ತಮ ಪ್ರಶಸ್ತಿ ಪಡೆದರು. ಒಳಾಂಗಣ ವಿಭಾಗದಲ್ಲಿ ಎಸ್. ರಾಮಸ್ವಾಮಿ(ಪ್ರಥಮ), ಮಲಕಾರಿ ಎಂ. ಪವಾರ್(ದ್ವಿತೀಯ). ಹೊರಾಂಗಣ ವಿಭಾಗದಲ್ಲಿ ಎಸ್.ಕೆ. ಅಮರೇಶ(ಪ್ರಥಮ), ಪ್ರಕಾಶ ಮಾಳಿ (ದ್ವಿತೀಯ) ಹಾಗೂ ರೈಫಲ್ ಶೂಟಿಂಗ್ನಲ್ಲಿ ಶಿವಪುತ್ರ ಬಿ. ಹಿರೋಳಿ(ಪ್ರಥಮ) ಮತ್ತು ಕೆ.ಎಸ್. ಬಸವರಾಜ(ದ್ವಿತೀಯ) ಬಹುಮಾನ ಪಡೆದರು. ಇವರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ನಿರ್ಗಮನ ಪಥಸಂಚಲನದ ಪ್ರಧಾನ ದಳಪತಿಯಾಗಿ ಸಿಎಆರ್ ಎಸಿಪಿ ಶಿವಕುಮಾರಯ್ಯ, ಸಹಾಯಕ ದಳಪತಿಯಾಗಿ ಅರಮನೆ ಭದ್ರತಾ ಪಡೆ ಇನ್ಸ್ಪೆಕ್ಟರ್ ವಿ. ಶೈಲೇಂದ್ರ ಕಾರ್ಯ ನಿರ್ವಹಿಸಿದರು. ಸಿಎಆರ್ ಡಿಸಿಪಿ ಹಾಗೂ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಆರ್. ಪ್ರಭಾಶಂಕರ್ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಬಳಿಕ ವರದಿ ವಾಚಿಸಿದರು.
ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್, ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ ಇದ್ದರು. ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಕೆ.ಎನ್. ಯಶವಂತ್ಕುಮಾರ್, ಡಿಎಆರ್ ಮುಖ್ಯ ಪೇದೆ ಬಾಬು ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement