ಪೇಜಾವರ ಶ್ರೀಗಳ ಹಗುರ ಹೇಳಿಕೆ ಸಲ್ಲದು
ಮೈಸೂರು: ಕುರುಬ ಸಮುದಾಯದ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಹೇಳಿಕೆಯನ್ನು ಸಮುದಾಯದ ಸಾಹಿತಿಗಳು ಹಾಗೂ ಮುಖಂಡರು ಖಂಡಿಸಿದರು.
ನಮ್ಮ ಜಾತಿ ಮೇಲು ಮತ್ತೊಂದು ಜಾತಿ ಕೀಳು ಎಂಬ ಮನೋಭಾವದಿಂದ ಮಾತನಾಡುವುದು ಸರಿಯಲ್ಲ. ಇನ್ನೊಂದು ಧರ್ಮ, ಜಾತಿ ಹಾಗೂ ದೇವರ ಬಗ್ಗೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವ ಸಂಗತಿಯಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಜಾತಿ ನಿರ್ಮೂಲನೆ ವಿರುದ್ಧ ಪೇಜಾವರ ಶ್ರೀಗಳು ಹೋರಾಡಿದರೆ ನಾವು ಸಹ ಅದಕ್ಕೆ ಬೆಂಬಲ ನೀಡುತ್ತೇವೆ. ಆದರೆ ಎಲ್ಲಾ ತಿಳಿದವರಾಗಿ ಅವರು ಕುರುಬರಿಗೆ ವೈಷ್ಣವ ದೀಕ್ಷೆ ನೀಡುವ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಜನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿದರು.
31ಕ್ಕೆ ಪ್ರತಿಭಟನೆ: ಕನಕ ಪೀಠ, ಕನಕ ಸಿದ್ಧಾಂತ ಎಂದು ಹೇಳುವುದನ್ನು ಬಿಟ್ಟು, ಹಾಲುಮತ ಪೀಠ, ಹಾಲುಮತ ಸಿದ್ಧಾಂತ ಎಂದಿಟ್ಟುಕೊಳ್ಳಿ ಎಂದು ಹೇಳಲು ಪೇಜಾವರ ಶ್ರೀಗಳು ಯಾರು ಎಂದು ಪ್ರಶ್ನಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಂ, ಅವರ ಹೇಳಿಕೆ ಖಂಡಿಸಿ ಅ.31ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಸಾಹಿತಿ ಮಾನಸ, ವೇದಿಕೆ ಕಾರ್ಯದರ್ಶಿ ಎ.ಎಚ್. ಕೃಷ್ಣೇಗೌಡ, ಸಂಚಾಲಕ ಶಶಿಧರ್ ಸಂಗಾಪುರ ಹಾಗೂ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ ಇದ್ದರು.