ಪೊಲೀಸ್ ಸಮವಸ್ತ್ರ ಧರಿಸಿ ಹಣ ವಸೂಲಿ
ಕ.ಪ್ರ.ವಾರ್ತೆ ಹುಣಸೂರು ಅ. 28
ಪೊಲೀಸರ ಸಮವಸ್ತ್ರ ಧರಿಸಿ ಹೆದ್ದಾರಿಯಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಬಿಳಿಕೆರೆ ಪೊಲೀಸರು ಬಂಧಿಸಿರುವ ಸೋಮವಾರ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೋಣನೂರು ಹೋಬಳಿಯ ಬಂಡೇಪಾಳ್ಯದ ನಿವಾಸಿ ಕೆ.ಜೆ. ನಂಜಪ್ಪ ಎಂಬುವವರ ಪುತ್ರ ಬಿ.ಎನ್. ಶಿವಕುಮಾರ ಹಾಗೂ ಮೈಸೂರಿನ ದಿವಾನ್ಸ್ ರಸ್ತೆಯ ನಾಗೇಂದ್ರ ಗುಪ್ತಾ ಎಂಬುವವರ ಪುತ್ರ ದಯಾನಂದ ಸಾಗರ್ ಬಂಧಿತ ಆರೋಪಿಗಳು.
ಘಟನೆ ವಿವರ: ಬಂಡೇಪಾಳ್ಯದ ನಿವಾಸಿ ಬಿ.ಎನ್. ಶಿವಕುಮಾರ ಪಿರಿಯಾಪಟ್ಟಣದಲ್ಲಿ ಗೃಹರಕ್ಷಕ ದಳದಲ್ಲಿದ್ದು, ಈತ ತನ್ನ ಸ್ನೇಹಿತ ದಯಾನಂದ ಸಾಗರ್ ಜತೆ ಸೇರಿ ಪೊಲೀಸ್ ಸಮವಸ್ತ್ರ ಧರಿಸಿ ಮೈಸೂರು- ಬಂಳ್ವಾಳ ರಾಜ್ಯ ಹೆದ್ದಾರಿ 88ರ ಬಿಳಿಕೆರೆ ಬಳಿ ಪ್ರತಿ ನಿತ್ಯ ಹೆದ್ದಾರಿಯಲ್ಲಿ ತೆರಳುವ ಮರಳು ಲಾರಿ ತಡೆದು, ತಾವು ಪೊಲೀಸರೆಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿದಿನ ಇದೇ ರಸ್ತೆಯಲ್ಲಿ ತೆರಳುತ್ತಿದ್ದ ಹುಣಸೂರು ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್ ಶನಿವಾರ ಪೊಲೀಸರ ಸಮವಸ್ತ್ರದಲ್ಲಿದ್ದವರನ್ನು ಗಮನಿಸಿ ಪ್ರಶ್ನಿಸಿದಾಗ ಇವರ ಬಣ್ಣ ಬಯಲಾಗಿದೆ. ಕೂಡಲೆ ಬಿಳಿಕೆರೆ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.